ಗೋಡೆಹುಬ್ಬಳ್ಳಿ: ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭವು ಜು.29ರಂದು ಬೆಳಿಗ್ಗೆ 11-30ಕ್ಕೆ ಹುಬ್ಬಳ್ಳಿಯ ಸವಾಯಿ ಗಂಧರ್ವ ಸಭಾ ಭವನದಲ್ಲಿ ನಡೆಯಲಿದ್ದು,ಇದೇ ಸಂದರ್ಭದಲ್ಲಿ ಸಂಘದ ವತಿಯಿಂದ ನೀಡಲಾಗುವ ಜೀವಮಾನ ಸಾಧನೆ ಪ್ರಶಸ್ತಿಯನ್ನು ಹಿರಿಯ ಪತ್ರಕರ್ತರಾದ ಎಚ್.ಜಿ.ಬೆಳಗಾಂವಕರ ಹಾಗೂ ಮಹಿಳಾ ಪತ್ರಕರ್ತರಿಗೆ ನೀಡಲಾಗುವ ’ಅವ್ವ ಪತ್ರಕರ್ತೆ’ ಪ್ರಶಸ್ತಿಯನ್ನು ಸುಧಾ ಶರ್ಮಾ ಚವತ್ತಿ ಅವರಿಗೆ ಪ್ರದಾನ ಮಾಡಲಾಗುವುದು.
ಜೀವಮಾನ ಸಾಧನೆ ಪ್ರಶಸ್ತಿಯು 11 ಸಾವಿರ ರೂ ನಗದು,ಪ್ರಶಸ್ತಿ ಫಲಕ,ಅವ್ವ ಪ್ರಶಸ್ತಿಯು 5 ಸಾವಿರ ನಗದು ಮತ್ತು ಪ್ರಶಸ್ತಿ ಫಲಕ ಒಳಗೊಂಡಿದೆ.
ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಅಯೇಶಾ ಖಾನುಂ , ಕೆಯುಡಬ್ಲ್ಯುಜೆ ಉಪಾಧ್ಯಕ್ಷ ಪುಂಡಲೀಕ ಬಾಳೋಜಿ ಮುಂತಾದವರು ಪಾಲ್ಗೊಳ್ಳಲಿದ್ದಾರೆ.
ಏನು
2023-24ಸಾಲಿನಲ್ಲಿ ದಿನಪತ್ರಿಕೆಗಳಲ್ಲಿ ಪ್ರಕಟವಾದ ಹಾಗೂ ಟಿ.ವಿ. ವಾಹಿನಿಗಳಲ್ಲಿ ಬಿತ್ತರಗೊಂಡ ಉತ್ತಮ ವರದಿ, ಲೇಖನ ಛಾಯಾಚಿತ್ರ ಹಾಗೂ ವಿಡಿಯೋಗಳಿಗೆ ಸಂಬಂಧಿಸಿದಂತೆ ವಿವಿಧ ವಿಭಾಗದಲ್ಲಿ 17 ಪತ್ರಕರ್ತರಿಗೆ ವಾರ್ಷಿಕ ಪ್ರಶಸ್ತಿಗಳನ್ನು ಇದೇ ಸಂದರ್ಭದಲ್ಲಿ ನೀಡಲಾಗುತ್ತಿದೆ.
ಶ್ರೀಮತಿ ಕೃಷ್ಣಿ ಶಿರೂರ, ಶಶಿಧರ ಬುದ್ನಿ, ಅಜೀಜ ಅಹ್ಮದ ಬಳಗಾನೂರ,ಶ್ರೀಶೈಲ ಗೌರಿಮಠ,ಪ್ರಹ್ಲಾದ ಗೊಲ್ಲಗೌಡರ, ಗಿರೀಶ ಪಟ್ಟಣಶೆಟ್ಟಿ, ಮಾಲತೇಶ ಹೂಲಿಹಳ್ಳೀ,ಸಾಯಿರಾಮ ಪವಾರ,ಸಂತೋಷ ಈಳಿಗೇರ,ಈರಪ್ಪ ನಾಯ್ಕರ,ಪ್ರಕಾಶ ಹಿರೇಮಠ, ವಿನಾಯಕ ಪೂಜಾರ, ಸುನೀಲ ಪಾಟೀಲ,ನಾರಾಯಣಗೌಡ ಪಾಟೀಲ, ಹಜರತ್ ನದಾಪ್, ಲಕ್ಷ್ಮಿ ಮೊರಬ ಈ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
*ಹನುಮಂತರಾವ ಬೆಳಗಾಂವಕರ* : ಹಿರಿಯರೊಂದಿಗೆ ಹಿರಿಯರಾಗಿ ಕಿರಿಯರೊಂದಿಗೆ ಕಿರಿಯರಾಗಿ ಸುಮಾರು ಮೂರು ದಶಕಗಳ ಕಾಲ ಪತ್ರಿಕೋದ್ಯಮದಲ್ಲಿರುವ ಬೆಳಗಾಂವಕರ ಇಂಡಿಯನ್ ಎಕ್ಸಪ್ರೆಸ್, ಟೈಮ್ಸ್ ಆಪ್ ಇಂಡಿಯಾ, ವಿಜಯ ಟೈಮ್ಸ್ಗಳಲ್ಲಿ ಸೇವೆ ಸಲ್ಲಿಸಿದ್ದು ಗೋಕಾಕ ಚಳುವಳಿ,1984ರ ವೇಳೆ ಬರಗಾಲದ ಸಮಯದಲ್ಲಿ ಅವರು ಮಾಡಿದ ವರದಿಗಳು ಸರ್ಕಾರದ ಕಣ್ಣು ತೆರೆಸಿದ್ದವು.ಉತ್ತಮ ಬರಹಗಾರರು, ವಿಶ್ಲೇಷಕರು ಆದ ಅವರು ಡಿವಿಜಿಯವರ ಆಯ್ದ ಚೌಪದಿಗಳನ್ನು ಮತ್ತು ಕುಮಾರವ್ಯಾಸನ ಗದುಗಿನ ಭಾರತವನ್ನು ಜನಸಾಮಾನ್ಯರಿಗೆ ತಿಳಿಯುವಂತೆ ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದಾರೆ. ಜಿಲ್ಲಾ ಸಂಘದ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದು,ಸಂಘದ ಉಳಿವಿನಲ್ಲೂ ಮಹತ್ತರ ಕೊಡುಗೆ ನೀಡಿದವರು.
*ಸುಧಾ ಶರ್ಮಾ ಚವತ್ತಿ* : ಮುದ್ರಣ ಮತ್ತು ದೃಶ್ಯ ಮಾಧ್ಯಮದಲ್ಲಿ ಕಾರ್ಯನಿರ್ವಹಿಸಿರುವ ಅಪರೂಪದ ಪತ್ರಕರ್ತೆಯಾಗಿರುವ ಸುಧಾ, ಆರ್ಥಿಕ ವಿಚಾರ, ಶೇರು ಪೇಟೆ ಬಗ್ಗೆ ಅಪಾರ ಜ್ಞಾನ ಹೊಂದಿದವರಾಗಿದ್ದು, ಸಂಯುಕ್ತ ಕರ್ನಾಟಕ, ಉದಯ ಸುದ್ದಿ ವಾಹಿನಿ, ವಿಜಯವಾಣಿಯಲ್ಲಿ ಕೆಲಸ ಮಾಡಿದವರಾಗಿದ್ದಾರೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಮೂಲದವರಾದ ಇವರು ಪ್ರಸ್ತುತ ಪ್ರಾಪಿಟ್ ಪ್ಲಸ್ ಸಕಾರಾತ್ಮಕ ಚಿಂತನೆಯ ಮಾಸ ಪತ್ರಿಕೆಯನ್ನು ನಡೆಸುತ್ತಿದ್ದಾರೆ.