*ಮೃತರ ಕುಟುಂಬಕ್ಕೆ ತಲಾ 10 ಲಕ್ಷ ರೂ.ಗಳ ಪರಿಹಾರ* :
*ಗಾಯಾಳುಗಳಿಗೆ ಉಚಿತ ಚಿಕಿತ್ಸೆ*: *ಸಿಎಂ ಸಿದ್ದರಾಮಯ್ಯ*
ಬೆಂಗಳೂರು : ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ ಸಿ ಬಿ ತಂಡಕ್ಕೆ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಕಾರ್ಯಕ್ರಮವನ್ನು ವೀಕ್ಷಿಸಲು ಆಗಮಿಸಿದ್ದ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿದ ದುರಂತದಲ್ಲಿ 11 ಜನರು ಸಾವಿಗೀಡಾಗಿದ್ದು, ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ರೂ.ಗಳ ಪರಿಹಾರವನ್ನು ಸರ್ಕಾರ ಘೋಷಿಸಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಕಾವೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತ ವಿಧಾನ ಸೌಧದ ಬಳಿ ನಡೆದ ಆರ್ ಸಿ ಬಿ ತಂಡದ ಅಭಿನಂದನಾ ಕಾರ್ಯಕ್ರಮದಲ್ಲಿ ಯಾವುದೇ ಸಾವು ಸಂಭವಿಸಿಲ್ಲ. ಆದರೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ಉಂಟಾಗಿದ್ದು, 11 ಜನ ಸಾವಿಗೀಡಾಗಿದ್ದಾರೆ. 33 ಜನ ಗಾಯಾಳುಗಳಾಗಿದ್ದಾರೆ. ಎಲ್ಲ ಗಾಯಗೊಂಡವರಿಗೆ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ತಿಳಿಸಿದರು.
ಗಾಯಗೊಂಡವರ ಆರೋಗ್ಯದ ಬಗ್ಗೆ ವೈದ್ಯರೊಂದಿಗೆ ಚರ್ಚಿಸಲಾಗಿದ್ದು, ಅವರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಅವರಿಗೆ ಸಾರಿಗೆ, ಊಟದ ವ್ಯವಸ್ಥೆಗಳನ್ನು ಸರ್ಕಾರ ಒದಗಿಸಲಿದೆ. ಇದು ಅನಿರೀಕ್ಷಿತ ದುರಂತ. ಯುವಕ ಯುವತಿಯರು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಕಾಲ್ತುಳಿತದಲ್ಲಿ ಪ್ರಾಣ ಕಳೆದುಕೊಂಡವರ ಆತ್ಮಕ್ಕೆ ಶಾಂತಿ ದೊರಕಲಿ ಹಾಗೂ ಮೃತಪಟ್ಟವರ ಕುಟುಂಬಗಳಿಗೆ ಅವರ ಸಾವಿನ ದು:ಖವನ್ನು ಭರಿಸುವ ಶಕ್ತಿ ಸಿಗಲೆಂದು ಭಗವಂತನಲ್ಲಿ ಪ್ರಾರ್ಥಿಸುವುದಾಗಿ ತಿಳಿಸಿದರು.
*ತನಿಖೆ ನಂತರ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ*
ಈ ಘಟನೆಯ ಬಗ್ಗೆ ಜಿಲ್ಲಾಧಿಕಾರಿಗಳಿಂದ ಮ್ಯಾಜಿಸ್ಟ್ರೇಟ್ ತನಿಖೆಯನ್ನು ನಡೆಸಲು ಸೂಚನೆ ನೀಡಲಾಗಿದೆ. 15 ದಿನದಲ್ಲಿ ತನಿಖಾ ವರದಿ ನೀಡುವಂತೆ ಸೂಚಿಸಲಾಗಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
*ಘಟನೆಯ ಬಗ್ಗೆ ರಾಜಕೀಯ ಮಾಡುವುದಿಲ್ಲ*
ಇದು ಅನಿರೀಕ್ಷಿತ ಘಟನೆಯಾಗಿದ್ದು, ಕಾರ್ಯಕ್ರಮಕ್ಕೆ ಈ ಸಂಖ್ಯೆಯಲ್ಲಿ ಜನ ಆಗಮಿಸುವ ನಿರೀಕ್ಷೆಯಿರಲಿಲ್ಲ .ಈ ಬಗ್ಗೆ ಸರ್ಕಾರದ ವಿರುದ್ದ ಕೇಳಿಬರುತ್ತಿರುವ ಟೀಕೆಗಳ ಬಗ್ಗೆ ಪ್ರತಿಕ್ರಿಯೆ ನೀಡಿ, ಈ ಘಟನೆಯ ಬಗ್ಗೆ ರಾಜಕೀಯ ಮಾಡುವುದಿಲ್ಲ. ನಾನು ಈ ಘಟನೆಯನ್ನು ಸಮರ್ಥಿಸಿಕೊಳ್ಳುವುದಿಲ್ಲ.. ಇಂತಹ ಜನಸಾಗರವನ್ನು ಯಾರು ನಿರೀಕ್ಷಿಸಿರಲಿಲ್ಲ. ಕ್ರೀಡಾಂಗಣದಲ್ಲಿ 35 000 ಜನರ ಸಾಮರ್ಥ್ಯವಿದ್ದು, ಇಲ್ಲಿಗೆ 2 ರಿಂದ 3 ಲಕ್ಷ ಆಗಮಿಸಿದ್ದಾರೆ. ಭದ್ರತಾ ವೈಫಲ್ಯ ಸೇರಿದಂತೆ ದುರಂತಕ್ಕೆ ಕಾರಣಗಳ ಬಗ್ಗೆ ತನಿಖೆ ನಡೆಸಲಾಗುವುದು ಎಂದರು.
ಅಭಿನಂದನಾ ಸಮಾರಂಭ ಮಾಡಲು ಆತುರವೇನಿತ್ತು ಎಂದು ಟೀಕೆ ವ್ಯಕ್ತವಾಗುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಈ ಸಮಾರಂಭವನ್ನು ಕ್ರಿಕೆಟ್ ಅಸೋಸಿಯೇಷನ್ ಅವರು ಆಯೋಜಿಸಲು ಬಯಸಿ ಅನುಮತಿ ಕೋರಿದ್ದರ ಹಿನ್ನೆಲೆಯಲ್ಲಿ ಅನುಮತಿ ನೀಡಲಾಗಿತ್ತು. ಈ ದುರಂತ ಕ್ಕೆ ಸರ್ಕಾರ ದು:ಖ ವ್ಯಕ್ತಪಡಿಸುತ್ತದೆ. ಕ್ರಿಕೆಟ್ ಅಸೋಸಿಯೇಷನ್ ಅವರ ಈ ಕಾರ್ಯಕ್ರಮದಲ್ಲಿ ಪೊಲೀಸ್ ಭದ್ರತೆ ಒದಗಿಸುವುದಷ್ಟೇ ಸರ್ಕಾರದ ಕರ್ತವ್ಯ. ಆದ್ದರಿಂದ ತನಿಖೆ ನಂತರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದರು.
ದುರಂತಕ್ಕೆ ಸರ್ಕಾರವೇ ಹೊಣೆ
ಹೊಸದಿಲ್ಲಿ: ಆರ್ಸಿಬಿ ಗೆಲುವಿನ ಸಂಭ್ರಮಾಚರಣೆ ವೇಳೆ ಬೆಂಗಳೂರಿನಲ್ಲಿ ಘಟಿಸಿದ ದುರಂತಕ್ಕೆ ರಾಜ್ಯ ಸರ್ಕಾರದ ಹೊಣೆಗೇಡಿತನವೇ ಕಾರಣವೆಂದು ಕೇಂದ್ರ ಆಹಾರ ಮತ್ತು ನಾಗರೀಕ ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಕಾಲ್ತುಳಿತದಲ್ಲಿ ಸುಮಾರು 10 ಜನ ಸಾವನ್ನಪ್ಪಿ, 30ಕ್ಕೂ ಹೆಚ್ಚು ಜನ ಗಂಭೀರ ಸ್ವರೂಪದಲ್ಲಿ ಗಾಯಗೊಂಡಿರುವುದು ನಿಜಕ್ಕೂ ದಾರುಣ ಘಟನೆಯಾಗಿದೆ ಎಂದು ವಿಷಾದ ವ್ಯಕ್ತಪಡಿಸಿರುವ ಸಚಿವರು, ಇದರಲ್ಲಿ ರಾಜ್ಯ ಸರ್ಕಾರದ ಅಡಳಿತ ವೈಫಲ್ಯವೇ ಎದ್ದು ಕಾಣುತ್ತಿದೆ ಎಂದು ಹೇಳಿದ್ದಾರೆ.
ಸಂಭ್ರಮಾಚರಣೆ ವೇಳೆ ರಾಜ್ಯ ಸರ್ಕಾರ ಸೂಕ್ತ ಬಿಗಿ, ಭದ್ರತೆ ಕೈಗೊಂಡಿಲ್ಲ. ಆರ್ಸಿಬಿ ಅಭಿಮಾನಿಗಳನ್ನು ನಿಭಾಯಿಸುವಲ್ಲಿ ರೂಪುರೇಷೆ, ಸಿದ್ಧತೆ ನಡೆಸದಿರುವುದೇ ಈ ದುರಂತಕ್ಕೆ ಕಾರಣವಾಗಿದೆ. ಬಿಗಿ ಭದ್ರತೆ, ತುರ್ತು ಸೇವೆಗಳನ್ನು ಒದಗಿಸುವಲ್ಲಿ ಅತ್ಯಂತ ಬೇಜವಾಬ್ದಾರಿಯಾಗಿ ವರ್ತಿಸಿದೆ ಎಂದು ಜೋಶಿ ಖಂಡಿಸಿದ್ದಾರೆ.