*ಹುರಕಡ್ಲಿ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ನಡೆದ ಘಟನೆ ತಡವಾಗಿ ಬೆಳಕಿಗೆ / ಜನಿವಾರ ಕತ್ತರಿಸಿ ವಿದ್ಯಾರ್ಥಿ ಕೈಗೆ ಕೊಟ್ಟ ಭದ್ರತಾ ಸಿಬ್ಬಂದಿ* /*ನಾಳೆ ಡಿಸಿ ಕಚೇರಿ ಎದುರು ಬ್ರಾಹ್ಮಣ ಸಮಾಜದಿಂದ ಪ್ರತಿಭಟನೆ*
ಹುಬ್ಬಳ್ಳಿ : ಸಿಇಟಿ ಪರೀಕ್ಷೆ ಸಂದರ್ಭದಲ್ಲಿ ಬೀದರ್, ಶಿವಮೊಗ್ಗದಲ್ಲಿ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಘಟನೆ ದೊಡ್ಡ ಸದ್ದು ಮಾಡುತ್ತಿದ್ದು, ರಾಜ್ಯಾದ್ಯಂತ ವಾರ್ ಆರಂಭವಾಗಿದೆ. ಜನಿವಾರ ತೆಗೆಸಿದ್ದ ಪ್ರಾಂಶುಪಾಲ, ಸಿಬ್ಬಂದಿ ಕೆಲಸದಿಂದ ವಜಾಗೊಳಿಸಲಾಗಿದ್ದರೂ, ತನ್ಮಧ್ಯೆ ಪೇಡಾನಗರಿ ಧಾರವಾಡಲ್ಲೂ ಇಂತಹದೇ ಘಟನೆ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಧಾರವಾಡ ನಗರದ ಹುರಕಡ್ಲಿ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಸಿಇಟಿ ಪರೀಕ್ಷೆ ಬರೆಯಲು ಆಗಮಿಸಿದ್ದ ವಿದ್ಯಾರ್ಥಿಯ ಜನಿವಾರವನ್ನು ಸಿಬ್ಬಂದಿ ಕತ್ತರಿಸಿದ್ದಾರೆ. ಧಾರವಾಡ ರಾಘವೇಂದ್ರ ನಗರದ ನಂದನ್ ಏರಿ ಎಂಬ ವಿದ್ಯಾರ್ಥಿ ವಿದ್ಯಾಗಿರಿ ಜೆಎಸ್ಎಸ್ ಕಾಲೇಜಿನಲ್ಲಿ ಪಿಯುಸಿ ಮುಗಿಸಿದ್ದು ಈತ ಕಳೆದ ಏಪ್ರಿಲ್ 16 ರಂದು ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ನಗರದ ಹುರಕಡ್ಲಿ ಕಾಲೇಜಿನಲ್ಲಿ ಬರೆಯಲು ಹೋಗಿದ್ದ. ಕೇಂದ್ರದ ಹೊರಗಡೆ ಭದ್ರತಾ ಸಿಬ್ಬಂದಿ ಈತನನ್ನು ಪರೀಕ್ಷಿಸುವಾಗ ನಂದನ್ ಧರಿಸಿದ್ದ ಜನಿವಾರ ಕಣ್ಣಿಗೆ ಬಿದ್ದಿದ್ದು ಕೂಡಲೇ ಅದನ್ನು ತೆಗೆಯುವಂತೆ ಹೇಳಿದ್ಧಾರೆ. ಆದರೆ ಅದಕ್ಕೆ ನಂದನ್ ವಿರೋಧಿಸಿದ್ದಾನೆ. ಆದರೆ ಅದನ್ನು ಧರಿಸಿದರೆ ಪರೀಕ್ಷಾ ಕೊಠಡಿಗೆ ಬಿಡಲು ಆಗೋದಿಲ್ಲ ಅಂತಾ ಭದ್ರತಾ ಸಿಬ್ಬಂದಿ ಹೇಳಿ,ಕೂಡಲೇ ಕತ್ತರಿ ತಂದು ಜನಿವಾರ ಕತ್ತರಿಸಿ ವಿದ್ಯಾರ್ಥಿಯ ಕೈಗೆ ಕೊಟ್ಟಿದ್ದಾರೆ. ಆಗ ಆಘಾತಕ್ಕೆ ಒಳಗಾದ ನಂದನ್ ಮಾತನಾಡಲಾಗದೇ ಪರೀಕ್ಷಾ ಕೇಂದ್ರದೊಳಗೆ ಹೋಗಿ ಪರೀಕ್ಷೆ ಬರೆದಿದ್ದಾನೆ. ಜನಿವಾರವನ್ನು ಕತ್ತರಿಸಿದ ಸಿಬ್ಬಂದಿ ಅದನ್ನು ಆತನ ಕೈಗೆ ಕೊಟ್ಟು ಒಳಗಡೆ ಕಳಿಸಿದ್ದು ಘಟನೆಯಿಂದ ನೊಂದ ನಂದನ್ ಈ ವಿಚಾರವನ್ನು ಯಾರ ಬಳಿಯೂ ಹೇಳಿಕೊಂಡಿಲ್ಲ. ಎರಡನೇ ದಿನವೂ ಜನಿವಾರವಿಲ್ಲದೇ ಹೋಗಿ ಪರೀಕ್ಷೆ ಬರೆದು ಬಂದಿದ್ದಾನೆ.
ಆದರೆ ಯಾವಾಗ ರಾಜ್ಯದ ಹಲವು ಕಡೆಗಳಲ್ಲಿ ಇಂಥ ಪ್ರಕರಣಗಳು ಮಾಧ್ಯಮಗಳಲ್ಲಿ ಬಹಿರಂಗಗೊಂಡಾಗ ಈ ವಿಚಾರವನ್ನು ಅಣ್ಣನಿಗೆ ಹಾಗೂ ತಂದೆಯ ಮುಂದೆ ಈ ವಿಚಾರವನ್ನು ಪ್ರಸ್ತಾಪಿಸಿದ್ದಾನೆ. ಇದರಿಂದ ಸಿಟ್ಟಿಗೆದ್ದ ತಂದೆ, ಅದೇ ದಿನ ವಿಚಾರವನ್ನು ಹೇಳಿದ್ದರೆ ನಾನೇ ಪರೀಕ್ಷಾ ಕೇಂದ್ರಕ್ಕೆ ಬರುತ್ತಿದ್ದೆ ಅಂತಾ ಮಗನಿಗೆ ಬೈಯ್ದಿದ್ದಾರೆ. ಘಟನೆಯಿಂದ ಸಿಟ್ಟಾಗಿರುವ ಕುಟುಂಬಸ್ಥರು, ಈ ಬಗ್ಗೆ ಸರಿಯಾದ ತನಿಖೆಯಾಗಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕೆಂದು ಆಗ್ರಹಿಸಿದ್ದಾರಲ್ಲದೆ ಸಮಾಜದ ಮುಖಂಡರ ಗಮನಕ್ಕೆ ತಂದಿದ್ದಾರೆ.
ಬ್ರಾಹ್ಮಣ ಸಮುದಾಯದವರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಸೋಮವಾರ ಡಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರಲ್ಲದೆ ಎಕೆಬಿಎಂಎಸ್ ನಿರ್ದೇಶಕ ಲಕ್ಷ್ಮಣ ಕುಲಕರ್ಣಿ ಸಹಿತ ಅನೇಕ ಮುಖಂಡರು ವಿದ್ಯಾರ್ಥಿ ಮನೆಗೆ ಭೇಟಿ ನೀಡಿ ಘಟನೆ ಖಂಡಿಸಿದ್ದಾರೆ. ಜಿಲ್ಲಾಡಳಿತವು ಕೂಡ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ನಿರ್ಧರಿಸಿದೆ ಎನ್ನಲಾಗಿದೆ.