*ಹುಬ್ಬಳ್ಳಿಯಲ್ಲಿ ಕೇಂದ್ರದ ಬೆಲೆ ಏರಿಕೆ ವಿರುದ್ಧ ಬೃಹತ್ ಪ್ರತಿಭಟನಾ ಸಭೆ / ಸುಳ್ಳುಗಳಿಂದ ಮೋದಿ ಮರಳು ಮಾಡುತ್ತಿದ್ದಾರೆ : ಸಿಎಂ*
ಹುಬ್ಬಳ್ಳಿ : ಜಾತಿ ಗಣತಿ ಘೋಷಣೆ ಮಾಡಿದ್ದರೂ ಅದನ್ನು ಮನಃ ಪೂರ್ವಕವಾಗಿ ಮಾಡುವ ಆಸಕ್ತಿ ಕೇಂದ್ರ ಸರ್ಕಾರಕ್ಕೆ ಇಲ್ಲ. ನಿಜವಾಗಲೂ ಆಸಕ್ತಿ ಇದ್ದರೆ ಮೂರು ತಿಂಗಳಲ್ಲಿ ಜಾತಿ ಗಣತಿ ಮಾಡಿ ತೋರಿಸಲಿ ಎಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸವಾಲು ಹಾಕಿದರು.
ಕೇಂದ್ರ ಸರ್ಕಾರದ ದೇಶ ವಿರೋಧಿ ವರ್ತನೆ, ಜನ ವಿರೋಧಿ ಆಡಳಿತ ಮತ್ತು ಬೆಲೆ ಏರಿಕೆಯ ಜನದ್ರೋಹವನ್ನು ಖಂಡಿಸಿ ಗಿರಣಿಚಾಳ ಮೈದಾನದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಎಲ್ಲ ಮಾತನಾಡಿದ ಅವರು ಮಾತನಾಡಿದರು.
ಎರಡು ವರ್ಷಗಳ ಹಿಂದೆಯೇ ನಾನು ಪ್ರಧಾನಿಯವರಿಗೆ ಪತ್ರ ಬರೆದು ಜಾತಿ ಗಣತಿ ನಡೆಸಬೇಕು. ಇದರಿಂದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸ್ಥಿತಿಗತಿ ಗೊತ್ತಾಗುತ್ತದೆ. ಕೂಲಂಕುಷ ಅಧ್ಯಯನ ನಡೆಸಬೇಕು ಎಂದು ಕೋರಿದ್ದೆ. ಆದರೆ, ಪ್ರಧಾನಿಯವರು ಗಮನಹರಿಸಿರಲಿಲ್ಲ. ಆದರೆ, ನಮ್ಮ ಪಕ್ಷವು ದೇಶವ್ಯಾಪಿ ಜಾತಿ ಗಣತಿ ಹೋರಾಟ ನಡೆಸಿಕೊಂಡು ಬಂದಿತು. ಜೊತೆಗೆ ಜನರ ಒತ್ತಡವೂ ಹೆಚ್ಚಾಗಿದ್ದರಿಂದ ಈಗ ಜಾತಿ ಗಣತಿ ಮಾಡುವುದಾಗಿ ಘೋಷಿಸಿದ್ದಾರೆ. ನಿಜವಾಗಲೂ ಕಾಳಜಿ ಇದ್ದಿದ್ದರೆ ಎರಡು ವರ್ಷದ ಹಿಂದೆಯೇ ಮಾಡಬೇಕಿತ್ತು? ಯಾಕೆ ಮಾಡಲಿಲ್ಲ? ಯಾಕೆಂದರೆ ಅವರಿಗೆ ನಿಜವಾದ ಕಾಳಜಿಯೇ ಇರಲಿಲ್ಲ ಎಂದು ಖರ್ಗೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಾವೇಶದಲ್ಲಿ ಮಾತನಾಡಿ,ನಿರಂತರ ಬೆಲೆ ಏರಿಕೆ ಮೂಲಕ ಬಡವರ, ಮಧ್ಯಮ ವರ್ಗದ ದ್ವೇಷಿ ಆಗಿರುವ ಮೋದಿ ಸರ್ಕಾರ, ಜಾತಿಗಳ ನಡುವೆ-ಧರ್ಮಗಳ ನಡುವೆ ದ್ವೇಷದ ಬೆಂಕಿ ಹಚ್ಚಿ ತನ್ನ ವೈಫಲ್ಯ ಮುಚ್ಚಿಕೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನರೇಂದ್ರ ಮೋದಿ ಪ್ರಧಾನಿ ಆದ ಬಳಿಕ ಅಕ್ಕಿಯಿಂದ ಚಿನ್ನದವರೆಗೂ ಎಲ್ಲದರ ಬೆಲೆ ಆಕಾಶಕ್ಕೆ ಏರಿದೆ. ದೇಶದ, ರಾಜ್ಯದ ಜನರಿಗೆ ಬಿಜೆಪಿ ಪರಿವಾರದ ಈ ಜನದ್ರೋಹ ಅರ್ಥವಾಗಿದೆ. ಇದನ್ನು ಮರೆ ಮಾಚಲು ತಮ್ಮ ಜನದ್ರೋಹವನ್ನು ಮುಚ್ಚಿಕೊಳ್ಳಲು ದೇಶದ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಷಡ್ಯಂತ್ರ ನಡೆಸುತ್ತಿದ್ದಾರೆ ಎಂದರು.
ಪ್ರಹ್ಲಾದ್ ಜೋಶಿಯವರೇ ನೀವು ಮತ್ತು ಮೋದಿಯವರು ನಿರಂತರವಾಗಿ ಬೆಲೆ ಏರಿಕೆ ಮಾಡುತ್ತಲೇ ಇದ್ದೀರಿ. ಆದರೆ, ನಿಮ್ಮ ಚಾಳಿಯನ್ನು ನಮ್ಮ ಮೇಲೆ ಹೊರಿಸಲು ಯತ್ನಿಸುತ್ತಿದ್ದೀರಿ. ನಿಮಗೆ ನಾಚಿಕೆ ಆಗುವುದಿಲ್ಲವೇ ಎಂದು ಪ್ರಶ್ನಿಸಿದರು.
ರಾಜ್ಯ ಸರ್ಕಾರ ಹಾಲಿನ ದರ 4ರೂ ಹೆಚ್ಚಿಸಿ ಇಷ್ಟೂ ಹಣವನ್ನೂ ರೈತರಿಗೆ ವರ್ಗಾಯಿಸಿದ್ದೀವಿ. ಇದರಲ್ಲಿ ಹತ್ತು ಪೈಸೆ ಕೂಡ ಸರ್ಕಾರಕ್ಕೆ ಬರುವುದಿಲ್ಲ. ಆದರೆ, ನೀವು ಹೆಚ್ಚಿಸಿದ ಬೆಲೆ ಏರಿಕೆ ಯಾವ ಭಾರತೀಯರಿಗೆ ಸಿಗುತ್ತಿದೆ ಹೇಳಿ ಎಂದರು.
ನಾವು ನಮ್ಮ ಪ್ರಣಾಳಿಕೆಯಲ್ಲಿ ಆರ್ಥಿಕ, ಸಾಮಾಜಿಕ, ಜಾತಿ ಗಣತೆ ಬಗ್ಗೆ ಭರವಸೆ ಕೊಟ್ಟಿದ್ದೆವು. ನಾವು ಮಾಡಿದ ಘೋಷಣೆಯಂತೆ ನಮ್ಮ ನಾಯಕರಾದ ಮಲ್ಲಿಕಾರ್ಜುನ ಖರ್ಗೆಯವರು ಮತ್ತು ರಾಹುಲ್ ಗಾಂಧಿಯವರು ಪಾರ್ಲಿಮೆಂಟಿನಲ್ಲಿ ನಿರಂತರ ಧ್ವನಿ ಎತ್ತಿ ಹೋರಾಟ ನಡೆಸಿದ್ದರು. ಇದರ ಪರಿಣಾಮ ಈಗ ಕೇಂದ್ರ ಸರ್ಕಾರ ನಮ್ಮ ಹೋರಾಟಕ್ಕೆ ಮಣಿದಿದೆ. ಇದು ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆಯವರ ಸೈದ್ಧಾಂತಿಕ ಬದ್ಧತೆಗೆ ಸಿಕ್ಕ ಗೆಲುವು ಎಂದರು
ರಾಜ್ಯ ಉಸ್ತುವಾರಿ ರಣದೀಪ್ ಸುರಜೇವಾಲ,
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಸಚಿವರಾದ ಎಚ್.ಕೆ.ಪಾಟೀಲ, ಸಂತೋಷ್ ಲಾಡ್, ಕೊಳಗೇರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಪ್ರಸಾದ್ ಅಬ್ಬಯ್ಯ,ಪರಿಷತ್ ಸದಸ್ಯರಾದ ಸಲೀಂ ಅಹ್ಮದ್, ಬಿ.ಕೆ.ಹರಿಪ್ರಸಾದ ಜಿಲ್ಲೆಯ
ಕಾಂಗ್ರೆಸ್ ಅಧ್ಯಕ್ಷರಾದ ಅನಿಲ್ ಕುಮಾರ್ ಪಾಟೀಲ್, ಅಲ್ತಾಫ್ ಹಳ್ಳೂರ , ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸದಾನಂದ ಡಂಗನವರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.