*ಭಕ್ತರ ಇಷ್ಟಾರ್ಥ ಈಡೇರಿಸುವ ಜಾಗೃತ ಗಣೇಶನೆಂಬ ಖ್ಯಾತಿ – ನೆರೆಯ ರಾಜ್ಯಗಳಿಂದಲೂ ಭಕ್ತರ ದಂಡು* /
*ಸೆ.7ರಂದು ಸಂಜೆ ಪ್ರತಿಷ್ಠಾಪನೆ – ಸೆ.9ರಂದು ತಡ ರಾತ್ರಿ ವಿಸರ್ಜನೆ*
ಹುಬ್ಬಳ್ಳಿ: ತಾಲೂಕಿನ ಛಬ್ಬಿ ಗ್ರಾಮದ ಕುಲಕರ್ಣಿ ಮನೆತನದ ಐತಿಹಾಸಿಕ ಕೆಂಪು ಗಣಪತಿ ಉತ್ಸವ ರಾಜ್ಯದಲ್ಲಷ್ಟೆ ಅಲ್ಲದೇ ನೆರೆಯ ರಾಜ್ಯಗಳ ಭಕ್ತರನ್ನು ಸೆಳೆದು ಭಾರೀ ಪ್ರಸಿದ್ದಿ ಪಡೆದಿದ್ದು ಈ ಬಾರಿ 198ನೇ ವರ್ಷದ ಗಣೇಶೋತ್ಸವವಾಗಿದ್ದು ಸೆ. 7ರಿಂದ ರಿಂದ ಸೆ.9ರವರೆಗೆ ಮೂರು ದಿನಗಳವರೆಗೆ ನಡೆಯಲಿದೆ.
ಬಲಗೈಯಲ್ಲಿ ಮುರಿದ ದಂತ, ಎಡಗೈಯಲ್ಲಿ ಈಶ್ವರ ಲಿಂಗ ಹಾಗೂ ಉಳಿದೆರಡು ಕೈಯಲ್ಲಿ ಆಯುಧ ಹೊಂದಿರುವ ಇಂತಹ ಅಪರೂಪದ ಗಣಪತಿಯನ್ನು ಮೈಸೂರು ಹಾಗೂ ಇಂದೂರಿನ ಅರಮನೆಯಲ್ಲಿ ಕಾಣಬಹುದಾಗಿದ್ದು ಸೆ.7ರಂದು ಮೊದಲನೆಯ ದಿನ ಚಂದ್ರೋದಯಕ್ಕೆ ಮುನ್ನ ಏಳೂ ಮನೆತನಗಳ ಗಣಪತಿಯ್ನ ತಂದು ಚಂದ್ರೋದಯಕ್ಕೆ ಸರಿಯಾಗಿ ಪ್ರತಿಷ್ಠಾಪನೆಗೊಂಡ ನಂತರ ರಾತ್ರಿ 8-30ರಿಂದ ದರ್ಶನ ಲಭ್ಯವಿದ್ದು ಉಳಿದೆರಡು ದಿನ ಅವ್ಯಾಹತವಾಗಿ ದರ್ಶನ ನೀಡಲಿದ್ದಾನೆ.
1827ರಿಂದ ಶ್ರೀಕೃಷ್ಣೇಂದ್ರ ಸ್ವಾಮಿಗಳ ಆಶೀರ್ವಾದದಿಂದ ಛಬ್ಬಿ ಗ್ರಾಮದ ಕುಲಕರ್ಣಿ ಮನೆತನದಲ್ಲಿ ಸಾರ್ವಜನಿಕ ಗಣೇಶನ ಪ್ರತಿಷ್ಠಾಪನೆ ನಡೆಸಿಕೊಂಡು ಬರಲಾಗುತ್ತಿದ್ದು ರಾಮಚಂದ್ರ ಅನಂತ್ ಕುಲಕರ್ಣಿ, ಮೋಹನರಾವ್ ಹನುಮಂತರಾವ್ ಕುಲಕರ್ಣಿ, ವಿನಾಯಕ ಕಾಶಿನಾಥ ಕುಲಕರ್ಣಿ, ನಾರಾಯಣರಾವ್ ರಾಮಚಂದ್ರ ಕುಲಕರ್ಣಿ, ಸೋಮರಾವ್ ಶ್ರೀಪಾದರಾವ್ ಕುಲಕರ್ಣಿ, ವಿಶ್ವನಾಥ ವಾಸುದೇವ ಕುಲಕರ್ಣಿ, ಮಾಲತೇಶ ಶಂಕರ ಕುಲಕರ್ಣಿ ಇವರ ಮನೆಗಳಲ್ಲಿ ಕೆಂಪು ಗಣಪತಿಯೂ ಪೂರ್ವಾಭಿಮುಖ ಪ್ರತಿಷ್ಠಾಪನೆಯಾಗಿ ಆರಾಧನೆ ನಡೆಯಲಿದೆ.
ರಾಜ್ಯವಲ್ಲದೇ ಹೊರ ರಾಜ್ಯದ ಭಕ್ತರೂ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಇಲ್ಲಿಗೆ ಬರುತ್ತಿದ್ದು ಬರುವ ಭಕ್ತರಿಗೆ ಉಚಿತ ದರ್ಶನ ಮತ್ತು ಪ್ರಸಾದ ವ್ಯವಸ್ಥೆ ಇದ್ದು ಛಬ್ಬಿ ಗ್ರಾ.ಪಂ. ನಿಂದ ಕುಡಿಯುವ ನೀರಿನ ವ್ಯವಸ್ಥೆ, ವ್ಯಾಪಕ ಪೊಲೀಸ್ ಬಂದೋಬಸ್ತ ಅಲ್ಲದೇ ವಾಯುವ್ಯ ಸಾರಿಗೆ ಸಂಸ್ಥೆ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಲಿದೆ.
ಛಬ್ಬಿಯ ಗಣಪತಿಯು ಬಹಳ ಜಾಗೃತನೆಂದು ಭಕ್ತರ ಆಸೆ ಆಕಾಂಕ್ಷೆಗಳನ್ನು ನಡೆಸಿಕೊಡುವನೆಂದು ಬಹಳ ಖ್ಯಾತಿ ಇದ್ದು ಬರುವ ಭಕ್ತರ ಅಭೀಷ್ಠಗಳು ನೆರವೇರುವದೆಂಬ ಪ್ರತೀತಿ ಇದ್ದು ಭಕ್ತರ ಕೋರಿಕೆಗಳು ಈಡೇರಿದ ನಂತರ ಬಂದು ಹರಕೆ ಸಲ್ಲಿಸುವರು. ಭಕ್ತರು ಇಲ್ಲಿ ಅಡಿಕೆ ಬೆಟ್ಟ, ರುದ್ರಾಕ್ಷಿ ಮತ್ತು ಪೂರ್ಣ ಫಲಗಳನ್ನು ತಾವೇ ತಂದು ಗಣಪತಿಗೆ ಅರ್ಪಿಸಿ ಪೂಜಿಸಿ ನಂತರ ಪಡೆದುಕೊಳ್ಳುವುದು ಸಾಮಾನ್ಯವಾಗಿದೆ. ಈ ಕುಲಕರ್ಣಿ ಮನೆತನಕ್ಕೆ ಕೃಷ್ಣೇಂದ್ರ ಸ್ವಾಮಿಗಳಲ್ಲದೇ ಶತಾವಧಾನಿ ಚಿದಂಬರ ಮಹಾಸ್ವಾಮಿ ಅಲ್ಲದೇ ಬ್ರಹ್ಮಾನಂದ ಮಹಾರಾಜರೂ ಭೇಟಿ ನೀಡಿರುವರೆಂಬ ಐತಿಹ್ಯವಿದೆ.