*ಭಾವೈಕ್ಯತೆ ಸಾರುವ ಕಾರ್ಯಕ್ರಮದಲ್ಲಿ ಇಪ್ಪತೈದು ಸಾವಿರಕ್ಕೂ ಹೆಚ್ಚು ಜನ ಪಾಲ್ಗೊಳ್ಳುವ ನಿರೀಕ್ಷೆ*
ಹುಬ್ಬಳ್ಳಿ: ಸೂಫಿ-ಸಂತರ, ದಾರ್ಶನಿಕರ ನೆಲೆಬೀಡಾದ ವಾಣಿಜ್ಯ ರಾಜಧಾನಿ ಹುಬ್ಬಳ್ಳಿಯ ಹಳೇ ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ನಾಡಿನ ಸರ್ವಜನಾಂಗದ ಕಲ್ಯಾಣಾರ್ಥ ಹಾಗೂ ಮತೀಯ ಸಾಮರಸ್ಯದ ಸಂದೇಶವನ್ನು ರವಾನಿಸುವ ಉದ್ದೇಶದಿಂದ ದಿ.26ರಂದು ಶನಿವಾರ ಸಂಜೆ 5-30ಕ್ಕೆ ಬೃಹತ್ ಸೂಫಿ ಸಂತರ ಸಮ್ಮೇಳನವನ್ನು ಆಲ್ ಕರ್ನಾಟಕ ರಾಜ್ಯ ಸುನ್ನಿ ಮಶಾಯಕ್ ಕೌನ್ಸಿಲ್ ಆಶ್ರಯದಲ್ಲಿ ಆಯೋಜಿಸಲಾಗಿದೆ.
ನಾಡಿನ ಪ್ರಸಿದ್ದ ಸರ್ವ ಧರ್ಮಗಳ ಅಧ್ಯಾತ್ಮಿಕ ಕೇಂದ್ರಬಿಂದು ಎಂದೇ ಪರಿಗಣಿಸಲಾಗಿರುವ ಗುಲ್ಬರ್ಗಾದ
ದರ್ಗಾ ಹಜರತ್ ಕ್ವಾಜಾ ಬಂದಾನವಾಜದ ಸಜ್ಜಾದಾನಶೀನ(ಪೀಠಾಧಿಕಾರಿ) ಹಾಗೂ ಕರ್ನಾಟಕ ವಕ್ಫ್ ಮಂಡಳಿಯ ಅಧ್ಯಕ್ಷರಾಗಿರುವ ಸೈಯದ ಮೊಹಮ್ಮದ ಅಲಿ ಹುಸೈನಿ , ಹುಬ್ಬಳ್ಳಿ ಮೂರುಸಾವಿರಮಠದ ಜಗದ್ಗುರುಗಳು, ಶಿರಹಟ್ಟಿ ಫಕ್ಕೀರೇಶ್ವರ ಮಠದ ಫಕೀರ ದಿಂಗಾಲೇಶ್ವರ ಸ್ವಾಮೀಜಿ, ವಿಜಯಪುರದ ಹಾಷಂ ಪೀರಾ ಸೇರಿದಂತೆ
ನಾಡಿನ ವಿವಿಧ ಭಾಗಗಳಿಂದ ಸೂಫಿ ಸಂತರು, ವಿವಿಧ ದರ್ಗಾಗಳ ಸಜ್ಜಾದಾನಶೀನರು (ಪೀಠಾಧಿಕಾರಿ), ದಾರ್ಶನಿಕರು, ಇಸ್ಲಾಮಿಕ್ ಅಧ್ಯಾತ್ಮಿಕ ವಿದ್ವಾಂಸರು, ಇಸ್ಲಾಮಿಕ ಚಿಂತಕರು, ವಿವಿಧ ಮಠಾಧೀಶರು ಪಾಲ್ಗೊಳ್ಳಲಿದ್ದಾರೆ.
ರಾಜ್ಯದ ಸಚಿವರುಗಳಾದ ಸತೀಶ್ ಜಾರಕಿಹೊಳಿ, ಎಚ್.ಕೆ. ಪಾಟೀಲ್, ಪ್ರಿಯಾಂಕ ಖರ್ಗೆ, ಸಂತೋಷ್ ಲಾಡ್, ಶಿವಾನಂದ ಪಾಟೀಲ ಸೇರಿದಂತೆ ಹಲವು ಶಾಸಕರು, ಸಂಸದರು ಹಾಗೂ ಸರ್ವಧರ್ಮಗಳ ಪ್ರಮುಖರು ಭಾಗವಹಿಸುತ್ತಿದ್ದಾರೆ.
ಈಗಾಗಲೇ ಹಳೇ ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಬೃಹತ್ ವಾಟರ್ ಪ್ರೂಫ್ ಟೆಂಟ್ ಸಹಿತ ಎಲ್ಲ ಸಿದ್ಧತೆಗಳು ಮಶಾಯಿಕ್ ಕೌನ್ಸಿಲ್ ನ ಸೈಯದ್ ತಾಜುದ್ದೀನ್ ಖಾದ್ರಿ ನೇತೃತ್ವದಲ್ಲಿ ಕೋರ್ ಕಮಿಟಿ ಸಹಯೋಗದಲ್ಲಿ ಭರದಿಂದ ನಡೆದಿದೆ.
ಇಡೀ ಹುಬ್ಬಳ್ಳಿ ಧಾರವಾಡ ತುಂಬಾ ಸೂಫಿ ಸಮ್ಮೇಳನದ ಬೃಹತ್ ಕಟೌಟ್ ಗಳು ರಾರಾಜಿಸುತ್ತಿದೆ. ಸುಮಾರು ಇಪ್ಪತ್ತೈದು ಸಾವಿರಕ್ಕೂ ಹೆಚ್ಚು ಜನ ಈ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದು, ಎಲ್ಲರಿಗೂ ಭೋಜನ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಅನೇಕ ಮುಖಂಡರು ತಮ್ಮ ತಮ್ಮ ಕೆಲಸಗಳಲ್ಲಿ ಹಗಲಿರುಳು ಎನ್ನದೆ ಶ್ರಮಿಸುತ್ತಿದ್ದಾರೆ.
ಭಾವೈಕ್ಯತೆಯನ್ನು ಬಿಂಬಿಸುವ ಈ ಸಮ್ಮೇಳನದ ಯಶಸ್ಸಿಗಾಗಿ ಈಗಾಗಲೇ ಎಲ್ಲರೂ ಶ್ರಮಿಸುತ್ತಿದ್ದಾರಲ್ಲದೆ ವಕ್ಫ್ ಮಂಡಳಿಯ ಅಧ್ಯಕ್ಷರನ್ನು ವಿಶೇಷವಾಗಿ ಸನ್ಮಾನಿಸಲಾಗುವುದು ಎಂದು ಕೋರ್ ಕಮಿಟಿ ಸದಸ್ಯ ಶಾಜಮಾನ್ ಮುಜಾಹಿದ ಹೇಳುತ್ತಾರೆ.