*ಸಹೋದ್ಯೋಗಿ ಅಧಿಕಾರಿಗಳ ವಿರುದ್ಧ ದೂರು ನೀಡಿಕೆ ಪ್ರಕರಣ* / *ತನಿಖೆಯಲ್ಲಿ ದೃಢಪಟ್ಟ ಸುಬೇದಾರ ಮೇಲಿನ ಆರೋಪ* – *ಎರಡನೇ ವಿಕೆಟ್ ಪತನ*
ಧಾರವಾಡ : ತಮ್ಮದೇ ಇಲಾಖೆಯ ತಮ್ಮದೇ ಕೇಡರಿನ ಅಧಿಕಾರಿಗಳ ಮೇಲೆ ಬೇರೊಬ್ಬರ ಹೆಸರಿನಲ್ಲಿ ಅನಗತ್ಯ ಆರೋಪ ಮಾಡಿ ದೂರು ಸಲ್ಲಿಸಿದ ಸಾಮಾಜಿಕ ಅರಣ್ಯ ವಲಯ ಧಾರವಾಡದ ವಲಯ ಅರಣ್ಯಾಧಿಕಾರಿ( RFO) ಪ್ರಸನ್ನ ಸುಬೇದಾರ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬ್ರಜೇಶಕುಮಾರ ದೀಕ್ಷಿತ್ ಆದೇಶ ಹೊರಡಿಸಿದ್ದಾರೆ.
ದಿ.03-09-2024ರಂದು ಕೂಡಲೆ ಜಾರಿಗೆ ಬರುವಂತೆ ಈ ಆದೇಶ ಹೊರಡಿಸಲಾಗಿದೆ. ಸಾಮಾಜಿಕ ವಲಯ ಆರ್.ಎಫ್.ಒ ಸುಬೇದಾರ ತಮ್ಮ ಸಹೋದ್ಯೋಗಿ ಅಧಿಕಾರಿಗಳಿಬ್ಬರ ಮೇಲೆ ದೂರು ಅರ್ಜಿಯ ತಯಾರಿಕೆಯ ರೂವಾರಿಯಾಗಿರುವುದು ತನಿಖೆಯಲ್ಲಿ ಸಾಬೀತಾದ ಹಿನ್ನೆಲೆಯಲ್ಲಿ ಧಾರವಾಡ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯವರ ವರದಿ ಮತ್ತು ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ ಬೆಳಗಾವಿ ಅಂತಿಮ ಆದೇಶದಂತೆ ಅಮಾನತುಗೊಳಿಸಲಾಗಿದೆ.
ಈಗಾಗಲೇ ಈ ದೂರು ಅರ್ಜಿ ಪ್ರಕರಣದಲ್ಲಿ ಧಾರವಾಡ ವಲಯ ಸಾಮಾಜಿಕ ಅರಣ್ಯ ಪಾಲಕ ವಿಠ್ಠಲ ಎಂ ಜೋನಿ ಎಂಬುವವರನ್ನು ಸಹ ದಿ.06-05-2024ರಂದು ಅಮಾನತು ಮಾಡಲಾಗಿತ್ತು. ಜೋನಿ ಎಂಬವರು ಸುಭೇದಾರ ಅವರೊಂದಿಗೆ ಸೇರಿಕೊಂಡು ಮೂರನೇ ವ್ಯಕ್ತಿ ಮುಬಾರಕ್ ಭಾಗವಾನ ಎಂಬುವವರ ಹೆಸರಿನಲ್ಲಿ ಇಬ್ಬರು RFO ಗಳ ಮೇಲೆ ದೂರರ್ಜಿಯನ್ನು ತಯಾರಿಸಿರುವುದು ತನಿಖೆಯಲ್ಲಿ ದೃಢಪಟ್ಟು ಆಗಲೇ ಶಿಸ್ತು ಕ್ರಮ ಜರುಗಿಸಲಾಗಿತ್ತು.
ಸಹೋದ್ಯೋಗಿಗಳ ಬಗ್ಗೆ ದೂರರ್ಜಿ ತಯಾರಿಸಲು ನಡೆಸಿದ ಸಂಚು, ವಿಭಾಗ ಕಚೇರಿಯ ಸಿಸಿಟಿವಿ ದೃಶ್ಯಾವಳಿ ತುಣುಕು, ಗಣಕಯಂತ್ರದಲ್ಲಿನ ವಿವರ, ಅಲ್ಲದೇ ವಾಟ್ಸಾಪ್ ಸಂದೇಶ ವಿನಿಮಯ, ಸ್ಕ್ರೀನ್ ಶಾಟ್ ಸಹಿತ ಎಲ್ಲ ದಾಖಲೆಗಳು ತನಿಖೆಯಲ್ಲಿ ಸಿಕ್ಕಿದ್ದವು.
ಸುಬೇದಾರ್ ಮೇಲೆ ಇನ್ನೊಂದು ಪ್ರಕರಣವು ಸಹ ಇಲಾಖೆ ತನಿಖೆ ನಡೆಯುತ್ತಿದೆ ಎನ್ನಲಾಗಿದೆ.
ಈ ಪ್ರಕರಣದಲ್ಲಿ ಭಾಗಿಯಾಗಿರುವ ಆರ್ ಎಫ್ ಒ ಅವರನ್ನು ಅಮಾನತುಗೊಳಿಸಿದ್ದು ಸ್ವಾಗತಾರ್ಹವಾಗಿದೆ. ಕೂಲಂಕಷವಾಗಿ ತನಿಖೆ ನಡೆಸಿ ಇಂತವರನ್ನು ಸೇವೆಯಿಂದಲೇ ವಜಾಗೊಳಿಸಬೇಕು ಎಂದು ಹುಬ್ಬಳ್ಳಿಯ ಪರಿಸರ ಪ್ರೇಮಿ,RTI ಕಾರ್ಯಕರ್ತ ಮಂಜುನಾಥ ಬದ್ದಿ ಅಭಿಪ್ರಾಯ ಪಟ್ಟಿದ್ದಾರೆ.