68 ಸಾಧಕರಿಗೆ ಹು.ಧಾ.ಪಾಲಿಕೆ ಕನ್ನಡ ಹಬ್ಬದ ಗೌರವ
ಹುಬ್ಬಳ್ಳಿ ; ’ಎಲ್ಲಾದರೂ ಇರು, ಎಂತಾದರೂ ಇರು , ಎಂದೆಂದಿಗೂ ನೀ ಕನ್ನಡವಾಗಿರು, ಕನ್ನಡ ಗೋವಿನ ಓ ಮುದ್ದಿನ ಕರು, ಕನ್ನಡತನವೊಂದಿದ್ದರೆ ನೀವೆಮಗೆ ಕಲ್ಪತರು’ ಹಾಡನ್ನು ೬೮ನೇ ಕನ್ನಡ ರಾಜ್ಯೋತ್ಸವದಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಅಕ್ಷರಶಃ ಅರ್ಥಪೂರ್ಣವಾಗಿಸಿತು.
ಬೆಳಿಗ್ಗೆ ಸಿದ್ಧಾರೂಢಮಠದಿಂದ ನಡೆದ ಅದ್ಧೂರಿ ಮೆರವಣಿಗೆ, ಅಲ್ಲದೇ ಸಂಜೆ ತನ್ನದೇ ಇತಿಹಾಸವಿರುವ ಇಂದಿರಾ ಗಾಜಿನಮನೆಯಲ್ಲಿ ನಡೆದ ಧೀಮಂತರ ಸನ್ಮಾನ ಕಾರ್ಯಕ್ರಮದಲ್ಲಿ ಅವಳಿನಗರದಲ್ಲಿ ಸಾಧನೆ ಮಾಡಿದ್ದಲ್ಲದೇ ಅಂತಾರಾಷ್ಟ್ರೀಯ ಮಟ್ಟದಲ್ಲೂ ಕೀರ್ತಿ ಪತಾಕೆ ಹಾರಿಸಿದವರನ್ನೊಳಗೊಂಡಂತೆ ಸಂಘ,ಸಂಸ್ಥೆಗಳೂ ಸೇರಿ ೬೮ ಸಾಧಕರನ್ನು ಸನ್ಮಾನಿಸಿದ್ದು ತವರಿನ ಸತ್ಕಾರ ಸಾರ್ಥಕ್ಯದ ಅವಿಸ್ಮರಣೀಯ ಕ್ಷಣಗಳಿಗೆ ಸಾಕ್ಷಿಯಾಯಿತು.
ವಿದೇಶದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಿ ಆರೋಗ್ಯ, ಶಿಕ್ಷಣ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆ ನೀಡಿದ ಪೇಡೆನಗರಿಯವರೇ ಆದ ಅಲ್ಲದೇ ಅ.೩೦ರಂದು ಕವಿವಿ ಗೌರವ ಡಾಕ್ಟರೇಟ್ ಪದವಿಗೂ ಭಾಜನರಾದ ರವಿಶಂಕರ ಭೂಪಳಾಪುರ, ಸಂಶೋಧನಾ ಕ್ಷೇತ್ರದಲ್ಲಿ ಈ ನೆಲದ ಕೀರ್ತಿ ಪತಾಕೆ ಹಾರಿಸಿದ ಡಾ.ತೇಜರಾಜ ಅಮ್ಮಿನಬಾವಿ,ಡಾ.ಶ್ವೇತಾ ಮಾಳೋದೆ,ಡಾ.ಪ್ರಭುಗೌಡ ಪಾಟೀಲ, ನೃತ್ಯ ಸೊಗಡನ್ನು ವಿದೇಶದಲ್ಲೂ ಪಸರಿಸಿದ ವಿದುಷಿ ಸಹನಾ ಭಟ್, ಶೃತಿ ಕಟ್ಟಿ, ಕನ್ನಡ ಕಟ್ಟುವ ಗುರು ಪ್ರೊ. ಕೆ.ಎಸ್.ಕೌಜಲಗಿ, ಅಂಗವೈಕಲ್ಯ ಮೆಟ್ಟಿ ನಿಂತು ಸಾಧನೆ ಮಾಡಿದ ಕೇಶವ ತೆಲುಗು, ನಿಧಿ ಸುಲಾಖೆ, ಹಿರಿಯ ವೈದ್ಯ ಡಾ.ವೈ.ಎನ್.ಇರಕಲ್, ಖ್ಯಾತ ಯೋಗ ಪಟು ಡಾ.ಪಂಚಲಿಂಗಪ್ಪ ಕವಲೂರ ಮುಂತಾದವರು ಪ್ರಶಸ್ತಿಗೆ ಭಾಜನರಾಗುವುದರೊಂದಿಗೆ ಧೀಮಂತದ ಮೌಲ್ಯ ಹೆಚ್ಚಿಸಿದರು.
ಪತ್ರಿಕೋದ್ಯಮದಲ್ಲಿ ಅಲ್ಲದೇ ಸಾಹಿತ್ಯದಲ್ಲೂ ಹೆಜ್ಜೆ ಗುರುತು ಮೂಡಿಸಿರುವ ಸುಶಿಲೇಂದ್ರ ಕುಂದರಗಿ, ಡಾ.ವೀರೇಶ ಹಂಡಗಿ, ವಿಕ್ರಂ ನಾಡಗೀರ, ಜಾವೇದ ಅದೋನಿ, ಕ್ಯಾನ್ಸರ್ ಮೆಟ್ಟಿ ನಿಂತ ದಿಟ್ಟೆ ಅಲ್ಲದೇ ತನ್ನ ಜೀವನಗಾಥೆಯ ಪುಸ್ತಕದ ಮೂಲಕ ಇನ್ನೂ ಹಲವರಿಗೆ ಬೆಳಕಾಗುತ್ತಿರುವ ಕೃಷ್ಣಿ ಶಿರೂರ, ಮಹಿಳೆಯರ ಮಾರಾಟ ಜಾಲದ ವರದಿ ಮೂಲಕ ಪ್ರತಿಷ್ಠಿತ ರಾಮನಾಥ ಗೋಯೇಂಕಾ ಪ್ರಶಸ್ತಿಗೆ ಭಾಜನರಾದ ಪ್ರಕಾಶ ನೂಲ್ವಿ, ಅಲ್ಲದೇ ಹುಬ್ಬಳ್ಳಿಯ 80-90ರ ದಶಕದ ಅನೇಕ ಮೈಲಿಗಲ್ಲುಗಳಿಗೆ ತನ್ನ ಕ್ಯಾಮರಾ ಮೂಲಕ ಸಾಕ್ಷಿಯಾದ ಹಿರಿಯ ಪತ್ರಿಕಾ ಛಾಯಾಗ್ರಾಹಕ ಗಣಪತಿ ಜರತಾರಘರ,ಚಿತ್ರನಿರ್ದೇಶಕನಾಗಿ ಭರವಸೆ ಮೂಡಿಸಿ, ಸಾಹಿತಿಯಾಗಿ ಗುರುತಿಸಿಕೊಂಡಿರುವ ಕುಮಾರ ಬೇಂದ್ರೆಯವರಿಗೆಲ್ಲ ಪ್ರಶಸ್ತಿ ಪುಳಕಕ್ಕೆ ಕಾರಣವಾಯಿತು.
ಮಾದರಿ ಕಾರ್ಯಗಳ ಮೂಲಕ ಅಲ್ಲದೇ ಕೋವಿಡ್ ಕಾಲಘಟ್ಟದಲ್ಲಿ ನೆರವಿನ ಹಸ್ತ ನೀಡಿದ ಸುಗ್ಗಿ ಸುಧಾಕರ ಶೆಟ್ಟಿ ಅಧ್ಯಕ್ಷರಾಗಿರುವ ಹು.ಧಾ.ಬಂಟರ ಸಂಘ, ಎಸ್.ಎಸ್.ಕೆ.ಬ್ಯಾಂಕಿನ ಪುನಶ್ಚೇತನ ಮಾಡಿದ್ದಲ್ಲದೇ ಸಮಾಜ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುವ ವಿಠ್ಠಲ ಲದವಾ, ತಾಂತ್ರಿಕ ಸಾಧಕ ರಾಜೇಶ ಹೊಂಗಲ, ಕೈಗಾರಿಕಾ ಪಟದಲ್ಲಿ ಹುಬ್ಬಳ್ಳಿಯನ್ನು ಗುರುತಿಸುವಂತೆ ಮಾಡಿದ ಉದ್ಯಮಿಗಳಾದ ರಮೇಶ ಪಾಟೀಲ, ವಿವೇಕ ನಾಯಕ ಅವರಿಗೆ ಪ್ರಶಸ್ತಿ ಮತ್ತಷ್ಟು ಸಾಮಾಜಿಕ ಹಂಬಲಕ್ಕೆ ರಹದಾರಿಯಾಯಿತು.
ಮೇಯರ್ ವೀಣಾ ಬಾರದ್ವಾಡ ಅಲ್ಲದೇ ಧೀಮಂತ ಸನ್ಮಾನ ಸಮಿತಿಯ ಅಧ್ಯಕ್ಷ ಉಪಮೇಯರ್ ಸತೀಶ ಹಾನಗಲ್ ಹಾಗೂ ತಂಡದ ಸದಸ್ಯರ ಅವಿರತ ಶ್ರಮ ನಿನ್ನೆ ಕಾರ್ಯಕ್ರಮ ಅರ್ಥಪೂರ್ಣವಾಗುವುದರೊಂದಿಗೆ ಹೊಸ ಇತಿಹಾಸ ಬರೆಯಿತು. ಕನ್ನಡ ಪರ ಹಾಡುಗಳು, ನೃತ್ಯ ಕಾರ್ಯಕ್ರಮಕ್ಕೆ ಕಳೆಗಟ್ಟಿದರೆ. ಪಕ್ಷಾತೀತವಾಗಿ ಎಲ್ಲ ಸದಸ್ಯರು ಕನ್ನಡ ಸಂಭ್ರಮದಲ್ಲಿ ಇದು ತಮ್ಮದೇ ಮನೆಯ ಕಾರ್ಯಕ್ರಮವೆಂಬಂತೆ ಸಂಭ್ರಮಿಸಿದರು.
ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ, ಸಭಾನಾಯಕ ಶಿವು ಹಿರೇಮಠ, ಹಿರಿಯ ಸದಸ್ಯರಾದ ರಾಜಣ್ಣ ಕೊರವಿ, ರಾಧಾಬಾಯಿ ಸಫಾರೆ, ಸಂತೋಷ ಚವ್ಹಾಣ,ವಿಪಕ್ಷ ನಾಯಕಿ ಸುವರ್ಣಾ ಕಲಕುಂಟ್ಲಾ ಯಶಸ್ಸಿನ ಹಿಂದಿನ ಶಕ್ತಿಯಾದರು.ಇನ್ನೋರ್ವ ಸದಸ್ಯ ತಿಪ್ಪಣ್ಣ ಮಜ್ಜಗಿ ಧೀಮಂತರ ಜೀವನಗಾಥೆಯ ಮೇಲೆ ಬೆಳಕು ಚೆಲ್ಲುತ್ತ ಸನ್ಮಾನ ಸ್ಮರಣೀಯ ವಾಗಿಸಿದರುವಾಗಿಸಿದರು. ಶಾಸಕ ಮಹೇಶ ಟೆಂಗಿನಕಾಯಿ ಉದ್ಘಾಟನೆ ನೆರವೇರಿಸಿ ಪಾಲಿಕೆಯ ಕಾರ್ಯ ಶ್ಲ್ಯಾಘಿಸಿದರು.ಧೀಮಂತರ ಸನ್ಮಾನ ಸಮಿತಿಯ ಸದಸ್ಯ ಕಾರ್ಯದರ್ಶಿಯಾದ ಮುಖ್ಯ ವೈದ್ಯಾಧಿಕಾರಿ ಡಾ.ಶ್ರೀಧರ ದಂಡಪ್ಪನವರ ಮೂರ್ನಾಲ್ಕು ದಿನ ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡಿ ಶ್ರಮ ವಹಿಸಿದ್ದು ಕಾರ್ಯಕ್ರಮದ ಯಶಸ್ಸಿನಲ್ಲಿ ಬಹುಮುಖ್ಯ ಪಾತ್ರ ವಹಿಸಿತು.