*ಉಲ್ಟಾ ಹೊಡೆದ ಬಿಜೆಪಿ ಸಮೀಕರಣ / ಇದು ಜಾತಿ ಆಧಾರಿತ ಚುನಾವಣೆಯಲ್ಲ : ಜೋಶಿ*
ಹುಬ್ಬಳ್ಳಿ : ಧಾರವಾಡ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಶಿರಹಟ್ಟಿ ಭಾವೈಕ್ಯತಾ ಸಂಸ್ಥಾನಮಠದ ಫಕೀರ ದಿಂಗಾಲೇಶ್ವರ ಮಹಾಸ್ವಾಮೀಜಿ ಘೋಷಿಸುವುದರೊಂದಿಗೆ ಈ ಬಾರಿ ರಣ ರೋಚಕ ಕಣ ಆಗುವುದು ನಿಶ್ಚಿತವಾದಂತಾಗಿದೆ.
ರಾಜಧಾನಿ ಬೆಂಗಳೂರಿನಲ್ಲಿಂದು ಮಹತ್ವದ ಸಭೆ ನಡೆಸಿದ ನಂತರ ಮಾಧ್ಯಮಗೋಷ್ಟಿಯಲ್ಲಿ ಸ್ವಾಮೀಜಿ ನಿರ್ಣಾಯಕ ನಿರ್ಧಾರ ಪ್ರಕಟಿಸಿದ್ದಾರೆ. ಧಾರವಾಡ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ತಾವು ಕಣಕ್ಕಿಳಿಯಲೇಬೇಕೆಂದು ಬೆಂಬಲಿಗರು ಒಕ್ಕೊರಲಿನಿಂದ ಒತ್ತಾಯಿಸಿದ ಪರಿಣಾಮ ಸ್ಪರ್ಧೆಗೆ ಸಮ್ಮತಿ ಸೂಚಿಸಿದ್ದಾಗಿ ಘೋಷಿಸಿದರು.
ಎರಡೂ ರಾಷ್ಟ್ರೀಯ ಪಕ್ಷಗಳು ಚುನಾವಣೆ ಹೊಂದಾಣಿಕೆ ಮಾಡಿಕೊಂಡಿದೆ ಎಂದು ಜನತೆ ಮಾತನಾಡುತ್ತಿದ್ದಾರೆ. ಇದು ಜನರಿಗೆ ದ್ರೋಹ ಮಾಡಿದಂತೆ ಆಗಲಿದೆ. ಧರ್ಮದಲ್ಲಿ ರಾಜಕೀಯ ಇರಬಾರದು, ರಾಜಕೀಯದಲ್ಲಿ ಧರ್ಮ ಇರಬೇಕು ಎಂದು ಜನರು ಬಯಸಿದ್ದಾರೆ ” ಎಂದು ಹೇಳಿದರು.
“ನೊಂದ ಜನರು ನಮ್ಮ ಜೊತೆಗೆ ನೋವು ತೋಡಿಕೊಂಡಿದ್ದರಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ. ಕರ್ನಾಟಕದಲ್ಲಿ ಒಕ್ಕಲಿಗ, ಲಿಂಗಾಯತ ಸಮುದಾಯದ ಹೊರತುಪಡಿಸಿದರೆ ಕುರುಬ ಸಮುದಾಯ ದೊಡ್ಡದು, ಆದರೆ ಕುರುಬ ಸಮುದಾಯಕ್ಕೆ ಬಿಜೆಪಿ ಒಂದೇ ಒಂದು ಟಿಕೆಟ್ ಕೊಡಲಿಲ್ಲ. ಲಂಬಾಣಿ ಸಮುದಾಯಕ್ಕೆ ಟಿಕೆಟ್ ಕೊಡಲಿಲ್ಲ. ಈಶ್ವರಪ್ಪಗೆ ಬಿಜೆಪಿ ಟಿಕೆಟ್ ಕೊಡಲಿಲ್ಲ ಎಂದು ನೇರವಾಗಿ ಆರೋಪಿಸಿದರು.
ಬಿಜೆಪಿ ಹೈಕಮಾಂಡ್ ನಾಯಕರು ಆ ಸಮುದಾಯ ನಮಗೆ ಅವಶ್ಯಕತೆ ಇಲ್ಲ ಎಂದು ಹೇಳುತ್ತಾರೆ. ಬಹುದೊಡ್ಡ ಸಮುದಾಯವನ್ನು ಬಿಜೆಪಿ ಕಡೆಗಣಿಸಿದ್ದು ಕೇವಲ ಶೇಕಡಾ ೨ರಷ್ಟು ಇರುವ ಸಮುದಾಯದ ನಾಯಕರಿಗೆ ಎರಡು ಕ್ಯಾಬಿನೆಟ್ ಹುದ್ದೆ ನೀಡಿದೆ ಎಂದು ಹೇಳಿದರಲ್ಲದೆ
ಜೋಶಿ ಅವರು ತಮ್ಮ ಸಮುದಾಯದ ಬೆಳವಣಿಗೆ ಅಷ್ಟೇ ನೋಡುತ್ತಾರೆ. ಅಲ್ಲದೆ, ನಮ್ಮ ಲಿಂಗಾಯತ ಸಮುದಾಯವನ್ನು ಜೋಶಿ ತುಳಿದು ರಾಜಕಾರಣ ಮಾಡಿದ್ದಾರೆಂದರು.
ದಿಂಗಾಲೇಶ್ವರರ ಈ ನಿರ್ಧಾರ ಕಮಲ ಪಾಳಯದ ಬುಡ ಅಲ್ಲಾಡಿಸಿದ್ದು ಕ್ಷೇತ್ರದಲ್ಲಿ 6 ಲಕ್ಷ ಲಿಂಗಾಯಿತ ಸಮುದಾಯದ ಮತದಾರರಿದ್ದು ಇದುವರೆಗಿನ ಎಲ್ಲಾ ಲೆಕ್ಕಾಚಾರ ತಿರುವು ಮುರುವಾಗುವ ಸಾಧ್ಯತೆಯಿದೆ.
ದಿಂಗಾಲೇಶ್ವರರ ಘೋಷಣೆ ನಂತರ ಮಾತನಾಡಿದ ಕೇಂದ್ರ ಸಚಿವ ಜೋಶಿಯವರು,ಇದು ರಾಷ್ಟ್ರೀಯ ಆಧಾರಿತ ಚುನಾವಣೆ, ಜಾತಿ ಆಧಾರಿತವಲ್ಲ ಪ್ರಧಾನಿ ಮೋದಿ ಬೇಕೋ? ರಾಹುಲ್ ನೇತೃತ್ವದ ಇಂಡಿಯಾ, ಇತರರು ಬೇಕೋ? ಜನ ತೀರ್ಮಾನ ಮಾಡುತ್ತಾರೆಂದು ಹೇಳಿದ್ದಾರೆ.
*ದಿಂಗಾಲೇಶ್ವರರು ಏನೇ ಹೇಳಿದರು ಆಶೀರ್ವಾದ:* ದಿಂಗಾಲೇಶ್ವರ ಸ್ವಾಮೀಜಿ ಸ್ಪರ್ಧೆ ಬಗ್ಗೆ ನಾನೇನು ಪ್ರತಿಕ್ರಿಯೆ ನೀಡಲ್ಲ. ನನ್ನ ಬಗ್ಗೆ ಅವರೇನೇ ಹೇಳಿದರು ಆಶೀರ್ವಾದವೆಂದೇ ಭಾವಿಸುತ್ತೇನೆ ಎಂದರು.
ರಾಷ್ಟ್ರೀಯ ಪಕ್ಷಗಳ ಜತೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬ ಪ್ರಶ್ನೆಗೆ, ಅದರ ಬಗ್ಗೆ ಎರಡೂ ಪಕ್ಷೇಗಳ ವಕ್ತಾರರು ನೋಡಿಕೊಳ್ಳುತ್ತಾರೆಂದರು.
ಇನ್ನೊಂದೆಡೆ ಕಾಂಗ್ರೆಸ್ ಪ್ರಸಕ್ತ ಸ್ಥಿತಿಯ ಲಾಭ ಪಡೆಯಲು ಯತ್ನಿಸುತ್ತಿದೆ. ಉಸ್ತುವಾರಿ ಸಚಿವ ಸಂತೋಷ್ ಲಾಡ್ ಮಯೂರ್ ಹೊಟೆಲ್ ನಲ್ಲಿ ತಂತ್ರಗಾರಿಕೆ ನಡೆಸಿದ್ದು ಅಹಿಂದ ಮಾತುಗಳು ಕ್ರೋಢೀಕರಿಸಲು ಮುಂದಾಗಿದ್ದಾರೆ.
*ಜೋಶಿ ಬ್ರಿಗೇಡ್ ಪೋಸ್ಟ್*
ಮತ್ತೊಂದೆಡೆ ದಿಂಗಾಲೇಶ್ವರ ಸ್ವಾಮೀಜಿ ವಿರುದ್ಧ ಪ್ರಹ್ಲಾದ ಜೋಶಿ ಬ್ರಿಗೇಡ್ ಹೆಸರಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದ್ದು,
ಸ್ವಾಮೀಜಿ ವಿರುದ್ಧ ಆಕ್ರೋಶ ಹೊರಹಾಕಿದ್ದು, ಸನಾತನ ಧರ್ಮದ ಮೇಲೆ ನಂಬಿಕೆ ಇದ್ದರೆ ಇಂತಹ ಚೀಟಿಂಗ್ ರಾಜಕೀಯ ಮಾಡಬೇಡಿ. ರಾಜಕೀಯಕ್ಕೆ ಬರುವುದಾದರೆ ಖಾವಿ ತೊರೆದು ನೇರವಾಗಿ ರಾಜಕೀಯಕ್ಕೆ ಬನ್ನಿ. ಲಿಂಗಾಯತರಿಗೆ ಅನ್ಯಾಯವೆಂಬ ನಿಮ್ಮಹೇಳಿಕೆ ನಾಚಿಕೆಗೇಡು, ನೇರ ರಾಜಕೀಯಕ್ಕೆ ಬಂದರೆ ಬ್ರಾಹ್ಮಣ ಸಮಾಜ, ಎಸ್ಎಸ್ ಕೆ ಹಾಗೂ ಎಸ್ ಸಿ, ಎಸ್ಸ್ಟಿ ಸಮಾಜ ನಿಮಗೆ ಬುದ್ದಿಕಲಿಸಲಿದೆ ಎಂದು ಪೋಸ್ಟ್ ನಲ್ಲಿ ಬರೆಯಲಾಗಿದೆ.
ಈ ಹಿಂದೆ ಮೂರು ಸಾವಿರ ಮಠದ ವಿಚಾರದಲ್ಲೂ ದಾರಿ ತಪ್ಪಿಸುವ ಕೆಲಸ ಮಾಡಿದ್ದೀರಿ. ಹಣದ ಆಸೆಗಾಗಿ ಡಬಲ್ ಗೇಮ್ ರಾಜಕೀಯ ಮಾಡುವುದನ್ನು ಬಿಡಿ ಎಂದೂ ಹೇಳಲಾಗಿದೆ.