ಅನಿಲ ಪಾಟೀಲ ಮಗನ ರಿಸೆಪ್ಷನ್ ನಲ್ಲಿ ಸಿಎಂ, ಡಿಸಿಎಂ , ಸಚಿವರು, ಶಾಸಕರು ಭಾಗಿ*
ಹುಬ್ಬಳ್ಳಿ: ಹು.ಧಾ. ಅವಳಿ ನಗರದ ಮಹಾನಗರಪಾಲಿಕೆಯ ಮಾಜಿ ಮೇಯರ್ ಹಾಗೂ ಧಾರವಾಡ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ, ಆತ್ಮೀಯರ ವಲಯದಲ್ಲಿ “ಚಾಂಪ್”ಎಂದೇ ಕರೆಸಿಕೊಳ್ಳುವ ಜನಾನುರಾಗಿ ಅನೀಲ್ಕುಮಾರ್ ಪಾಟೀಲ್ ಅವರ ಹಿರಿಯ ಪುತ್ರ ಅರ್ಜುನ್ ಪಾಟೀಲ ವಿವಾಹ ಇಂದು ನವೀನ್ ಹೊಟೆಲ್ ನಲ್ಲಿ ಹೆಜಲ್ ಜತೆ ಆಪ್ತೇಷ್ಟರು, ಬಂಧು ಬಳಗದ ಎದುರು ನೆರವೇರಿತು.
ಸಂಜೆ 7 ರ ನಂತರ ನವೀನ ಹೊಟೆಲ್ ಲಾನ್ನಲ್ಲಿ ನಡೆಯಲಿರುವ ಆರತಕ್ಷತೆ ಸಮಾರಂಭಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಗೃಹ ಸಚಿವ ಡಾ.ಪರಮೇಶ್ವರ, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಸೇರಿದಂತೆ ಕೈ ಸಂಪುಟದ ಬಹುತೇಕ ಸಚಿವರು, 75ಕ್ಕೂ ಹೆಚ್ಚು ಆಡಳಿತ ಮತ್ತು ವಿಪಕ್ಷದ ಶಾಸಕರು, ಹಿರಿಯ,ಕಿರಿಯ ನಾಯಕರು, ಉದ್ಯಮಿಗಳು, ಅಧಿಕಾರಿಗಳು ಪಾಲ್ಗೊಂಡು ನೂತನ ವಧು-ವರರಿಗೆ ಶುಭ ಕೋರಲಿದ್ದಾರೆ.
ಬಂಧು- ಬಳಗ ಅಭಿಮಾನಿಗಳು ಸೇರಿದಂತೆ ಸುಮಾರು 20ಸಾವಿರಕ್ಕೂ ಹೆಚ್ಚು ಜನ ಈ ಆರತಕ್ಷತೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಈಗಾಗಲೇ ಅರಿಶಿಣ ಶಾಸ್ತ್ರ , ಸಂಗೀತ ,ಮೆಹಂದಿ, ನಿಶ್ಚಿತಾರ್ಥ ಕಾರ್ಯಕ್ರಮಗಳು ನಿನ್ನೆ ಸಂಜೆ ಗೋಕುಲ್ ರಸ್ತೆಯ ಕ್ಯೂಬಿಕ್ಸ್ ಹೊಟೆಲ್ನಲ್ಲಿ ಅದ್ದೂರಿಯಾಗಿ ನಡೆದಿದೆ. ಅಲ್ಲದೇ ಉತ್ತಮ ಕರೋಕೆ ಗಾಯಕರಾಗಿರುವ ಅನಿಲ ಪಾಟೀಲ ಅವರು, ಅನೇಕ ಹಳೆಯ .ಹಿಂದಿ, ಕನ್ನಡ ಹಾಡುಗಳಿಗೆ ಜೀವ ತುಂಬಿ ಹಾಡುವವರು. ನಿನ್ನೆ ಅನೇಕ ಗೀತೆಗಳನ್ನು ಹಾಡಿ ಎಲ್ಲರ ಮನಸ್ಸು ಸೂರೆಗೊಂಡರಲ್ಲದೇ ತಾವೂ ಕುಣಿದು ಉಳಿದವರು ಹೆಜ್ಜೆ ಹಾಕುವಂತೆ ಮಾಡಿದರು.