*ಮಾಜಿ ಮುಖ್ಯಮಂತ್ರಿ ಬೊಮ್ಮಾಯಿಗೆ ಇಂತಹ ವಂಚನೆ ಶೋಭೆ ತರದು : ಭಾವುಕರಾಗಿ ಕಣ್ಣೀರು ಹಾಕಿದ ಜನಾನುರಾಗಿ ಮುಖಂಡ*
ಹುಬ್ಬಳ್ಳಿ : ಶಿಗ್ಗಾಂವಿ ಉಪಸಮರದ
ಬಿಜೆಪಿ ಟಿಕೆಟ್ ವಂಚಿತ ಶ್ರೀಕಾಂತ್ ದುಂಡಿಗೌಡ್ರು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸದೇ ತಟಸ್ಥರಾಗಿ ಉಳಿಯುವುದಾಗಿ ಹೇಳಿದ್ದು 30ರ ನಂತರ ಮುಂದಿನ ನಿರ್ಧಾರ ಕೈಗೊಳ್ಳಲಿದ್ದಾರೆ . ಇದು ಕಮಲ ಪಾಳಯಕ್ಕೆ ಸ್ವಲ್ಪ ನಿಟ್ಟುಸಿರು ಬಿಡುವಂತೆ ಮಾಡುವಂತೆ ಮಾಡಿದ್ದರೂ ಸಣ್ಣ ಆತಂಕದ ಬೆಂಕಿ ಹೊಗೆಯಾಡುತ್ತಲೇ ಇದೆ.
ಇನ್ನೊಂದೆಡೆ ಕೈ ಟಿಕೆಟ್ ವಂಚಿತ ಅಜಂಪೀರ್ ಖಾದ್ರಿ ಬಂಡಾಯದ ಬಾವುಟ ಹಾರಿಸುವುದು ಖಚಿತವಾಗಿದ್ದು ನಾಳೆ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಲು ಮುಂದಾಗಿದ್ದಾರೆ.
ಇಂದು ಸಾಯಂಕಾಲ ಶ್ರೀಕಾಂತ್ ದುಂಡಿಗೌಡ್ರ ಅವರ ನಿವಾಸದಲ್ಲಿ ಕರೆಯಲಾಗಿದ್ದ ಕಾರ್ಯಕರ್ತರು ಅಭಿಮಾನಿಗಳ ಸಭೆಯಲ್ಲಿ ತಾಲೂಕಿನ ಗಣ್ಯರ ತೀರ್ಮಾನಕ್ಕೆ ತಲೆಬಾಗುವುದಾಗಿ ಶ್ರೀಕಾಂತ ದುಂಡಿಗೌಡ್ರು ಹೇಳಿ ನಂತರ ಸಭೆಯಲ್ಲಿದ್ದ ಅನೇಕರ ಅಭಿಪ್ರಾಯವನ್ನು ಸಂಗ್ರಹಿಸಿದ ಹಿರಿಯರು ಚರ್ಚಿಸಿ ಸಂಗಮೇಶ ಕಂಬಾಳಿಮಠ ಹಿರಿಯರ ತೀರ್ಮಾನವನ್ನು ಸಭೆಗೆ ತಿಳಿಸಿದರು. ಶಿಗ್ಗಾವಿಯಲ್ಲಿ ನಡೆಯುತ್ತಿರುವ ಉಪಚುನಾವಣೆಯಲ್ಲಿ ಶ್ರೀಕಾಂತ ದುಂಡಿಗೌಡ್ರ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸದೆ ತಟಸ್ಥವಾಗಿದ್ದು 30 ನೇ ತಾರೀಖಿಗೆ ಮುಂದಿನ ರಾಜಕೀಯ ನಡೆಯ ಕುರಿತಾಗಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಇದಕ್ಕೂ ಮುಂಚೆ ದುಂಡಿಗೌಡ್ರ ಭಾವುಕರಾಗಿ ಮಾತನಾಡಿ, ಟಿಕೇಟ ವಂಚಿಸಿದ್ದಕ್ಕೆ ದು:ಖವಿದ್ದು, ನಮಗೆ ಸಿಕ್ಕಿರುವ ಸಂವಿಧಾನಿಕ ಹುದ್ದೆ ಕುರಿತು ಬಸವರಾಜ ಬೊಮ್ಮಾಯಿ ಮಾತನಾಡುತ್ತಿದ್ದು ಸಾಮಾನ್ಯ ಕಾರ್ಯರ್ತರಿಗೆ ಬೊಮ್ಮಾಯಿ ಟಿಕೆಟ್ ಕೊಡಿಸಿದರೆ ಅವರು ಕೊಡಸಿರುವ ಸಂವಿಧಾನಿಕ ಹುದ್ದೆಗೆ ರಾಜಿನಾಮೆ ನೀಡುತ್ತೇನೆ, ನಾವು ನೀವು ಬೇರಲ್ಲಾ ಎಂದು ಹೇಳುತ್ತ ನಮ್ಮ ಅಂತರಾಳದ ಅಶೆಗಳಿಗೆ ನೀರೆರೆದು ಬೆಳಸಿ, ವಂಚನೆ ಮಾಡಿದ್ದು ಬಸವರಾಜ ಬೊಮ್ಮಾಯಿಯವರಿಗೆ ಶೋಭೆ ತರುವುದಿಲ್ಲಾ ಎಂದರು.
ಈ ಸಂದರ್ಭದಲ್ಲಿ ಟಿ.ವಿ.ಸೂರ್ಗಿಮಠ, ತಿಪ್ಪಣ್ಣಾ ಸಾತಣ್ಣವರ, ಹನುಮರೆಡ್ಡಿ ನಡುವಿನಮನಿ, ರಮೇಶ ಸಾತಣ್ಣವರ, ಎಮ್.ಎನ್.ವೆಂಕೋಜಿ, ಬಸವರಾಜ ನಾರಾಯಣಪುರ, ಬಾಪುಗೌಡ ಪಾಟೀಲ, ಮಲ್ಲೇಶಪ್ಪಾ ಚೋಟಪ್ಪನವರ, ಭರ್ಮಜ್ಜ ನವಲಗುಂದ, ಬಸಲಿಂಗಪ್ಪಾ ನರಗುಂದ ಇತರರಿದ್ದರು.
2023ರ ವಿಧಾನಸಭಾ ಚುನಾವಣೆಯಲ್ಲಿ ಬೊಮ್ಮಾಯಿ ಗೆಲುವಿಗೆ ಬಹುವಾಗಿ ಶ್ರಮಿಸಿದ ದುಂಡಿಗೌಡರು ಲೋಕಸಭಾ ಚುನಾವಣೆಯಲ್ಲಿ ದಿಲ್ಲಿಗೆ ಬಲಗಾಲಿಡಲು ದೊಡ್ಡ ಪ್ರಯತ್ನ ಮಾಡಿದ್ದರು ಎಂಬುದನ್ನು ಯಾರೂ ಅಲ್ಲಗಳೆಯುವಂತಿಲ್ಲ.
ಬಿಜೆಪಿಯಲ್ಲಿ ತಟಸ್ಥ ಭಿನ್ನಮತದ ಬೆಂಕಿ ಇದ್ದರೆ ಕಾಂಗ್ರೆಸ್ ನಲ್ಲಿ ಖಾದ್ರಿ ಹಾಗೂ ಬೆಂಬಲಿಗರು ಬಹಿರಂಗ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೈ ಅಧಿಕೃತ ಅಭ್ಯರ್ಥಿ ಯಾಸೀರ್ ಪಠಾಣ್ ನಾಮಪತ್ರ ಸಲ್ಲಿಕೆಗೆ ಸಿಎಂ ಸಿದ್ದರಾಮಯ್ಯ ಆಗಮಿಸುವ ಸಾಧ್ಯತೆ ಇದೆ. ಯಾವ ರೀತಿ ಪರಿಸ್ಥಿತಿ ತಿಳಿಗೊಳಿಸುವರು ಎಂಬುದು ಮುಂದಿನ ಮೂರ್ನಾಲ್ಕು ದಿನಗಳ ನಂತರ ಸ್ಪಷ್ಟ ಚಿತ್ರಣಹೊರಬೀಳಲಿದೆ.