*ಮಹಜರು ವೇಳೆ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿ ಯತ್ನ*
ಹುಬ್ಬಳ್ಳಿ : ತಾರಿಹಾಳ ಬಳಿ ಸ್ಥಳ ಮಹಜರಿಗೆ ತೆರಳಿದ ವೇಳೆ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಕುಖ್ಯಾತ ದರೋಡೆಕೋರನ ಮೇಲೆ ಬೆಂಡಿಗೇರಿ ಪೊಲೀಸರು ಗುಂಡು ಹಾರಿಸಿದ್ದಾರೆ.
ವಿನೋದ್ ಗುಡಿಹಾಳ ಎಂಬಾತನ ಕಾಲಿಗೆ ಗುಂಡು ಹಾರಿಸಿ ಪುನಃ ವಶಕ್ಕೆ ತೆಗೆದುಕೊಂಡಿದ್ದು, ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.
ಹಾವೇರಿ ಮೂಲದ ಲಾರಿ ಚಾಲಕನಿಗೆ ಮಾರಕಾಸ್ತ್ರ ತೋರಿಸಿ ಬೆಳಗಿನ ಜಾವ ದರೋಡೆ ಮಾಡಿದ ಬೆನ್ನಲ್ಲೇ ಬೆಂಡಿಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತಕ್ಷಣ ಕಾರ್ಯಪ್ರವೃತ್ತವಾದ ಇನ್ಸ್ಪೆಕ್ಟರ್ ಎಸ್.ಆರ್.ನಾಯಕ ತಂಡ ದರೋಡೆ ಮಾಡಿದ ವಿನೋದ್ ಸಹಿತ ಮೂವರನ್ನು ಬಂಧಿಸಿತ್ತು.
ಬಳಸಿದ ವಾಹನ, ಮಾರಕಾಸ್ತ್ರ ಮುಚ್ಚಿಟ್ಟ ಸ್ಥಳ ತೋರಿಸಲು ಹೋದಾಗ ಪಿಎಸ್ಐ ಜಯಶ್ರೀ ಛಲವಾದಿ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ವೇಳೆ ಕಾಲಿಗೆ ಗುಂಡು ಹಾರಿಸಿದ್ದಾರೆ. ಪಿಎಸ್ಐ ಜಯಶ್ರೀ ಅಲ್ಲದೆ ಕಾನ್ಸ್ಟೇಬಲ್ ರಮೇಶ್ ಹಿತ್ತಲಮನಿಗೂ ಗಾಯವಾಗಿದೆ.ಅವರೂ ಕೆಎಂಸಿ ಗೆ ದಾಖಲಾಗಿದ್ದಾರೆ.
ವಿನೋದ್ ಮೇಲೆ ಹುಬ್ಬಳ್ಳಿ ಧಾರವಾಡ ದ ವಿವಿಧ ಠಾಣೆಗಳಲ್ಲಿ 17 ಕ್ಕೂ ಹೆಚ್ಚು ಪ್ರಕರಣಗಳು ಇವೆ.ನೂತನ ಪೊಲೀಸ್ ಆಯುಕ್ತ ಶಶಿಕುಮಾರ್ ಬಂದ ಮೇಲೆ ಖಾಕಿಗಳ ಪಿಸ್ತೂಲ್ ಸದ್ದು ಮಾಡುತ್ತಿದೆ.