*ಮೂವತ್ತೈದು ಪ್ರಕರಣದಲ್ಲಿ ಬೇಕಾಗಿದ್ದ ಸೌದಾಗರ, ಅಣ್ಣಿಗೇರಿ / ಪೊಲೀಸರಿಗೂ ಗಾಯ*
ಧಾರವಾಡ : ಪೇಡಾ ನಗರಿಯಲ್ಲಿ ಇಂದು ಬೆಳಗಿನ ಜಾವ ಮತ್ತೆ ಪೋಲೀಸರ ರಿವಾಲ್ವರ್ ಸದ್ದು ಮಾಡಿದ್ದು,ಮನೆ ಕಳ್ಳತನ, ದರೋಡೆಯಲ್ಲಿ ತೊಡಗಿದ್ದ ಇಬ್ಬರು ಕುಖ್ಯಾತ ದರೋಡೆಕೋರರ ಮೇಲೆ ಬೆಳಗಿನ ಜಾವ ಫೈರಿಂಗ್ ಮಾಡಲಾಗಿದೆ.
ಇಲ್ಲಿನ ರಾಜೀವಗಾಂಧಿ ನಗರದ ನಿವಾಸಿಗಳಾದ ಮುಜಮ್ಮಿಲ್ ಸೌದಾಗರ ಮತ್ತು ವಿಜಯ ಅಣ್ಣಿಗೇರಿ ಎಂಬವರ ಕಾಲಿಗೆ ವಿದ್ಯಾಗಿರಿ ಠಾಣೆಯ ಪೊಲೀಸರು ಗುಂಡು ಹೊಡೆದು ಬಂಧಿಸಿದ್ದಾರೆ.
ಈ ಇಬ್ಬರು ಆರೋಪಿಗಳು 35 ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಬೇಕಾದವರಾಗಿದ್ದು ಇಬ್ಬರೂ ಪರಾರಿಯಾಗಲು ಯತ್ನಿಸಿ ವಿದ್ಯಾಗಿರಿ ಪಿ ಎಸ್ ಐ ಮಲ್ಲಿಕಾರ್ಜುನ್ ಹೂಸೂರ ಹಾಗೂ ಪೊಲೀಸ್ ಪೇದೆ ಮೊಹಮ್ಮದ ಇಸಾಕ್ ಎಂಬುವವರ ಮೇಲೆ ಹಲ್ಲೆ ಮಾಡಿದ್ದಾರೆ. ಆಗ ಅದಕ್ಕೆ ಪ್ರತ್ಯುತ್ತರವಾಗಿ ಪೋಲೀಸರು ಗುಂಡು ಹಾರಿಸಿದ್ದಾರೆ.ಪೊಲೀಸರಿಗೂ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
*ಸಿಲಿಂಡರ್ ಸ್ಪೋಟ: ನಾಲ್ವರಿಗೆ ಗಾಯ*
ಹುಬ್ಬಳ್ಳಿ: ನಗರದ ಅಶೋಕ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಶಕ್ತಿ ಕಾಲನಿಯಲ್ಲಿ ಅಡುಗೆ ಅನಿಲ ಸೋರಿಕೆಯಿಂದಾಗಿ ಕುಟುಂಬದ ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಂದು ನಡೆದಿದೆ.
ಕ್ರೀಡಾ ತರಬೇತುದಾರ ಮಹಾಂತೇಶ ಬಳ್ಳಾರಿ, ಅವರ ಪತ್ನಿ ಹಾಗೂ ದೈಹಿಕ ಶಿಕ್ಷಣ ಶಿಕ್ಷಕಿ ಗಂಗಮ್ಮ ಬಳ್ಳಾರಿ, ಮಕ್ಕಳು ಮನೋರಂಜನ್ ಮತ್ತು ಕಾರುಣ್ಯ ಗಾಯಗೊಂಡವರಾಗಿದ್ದಾರೆ.
ಅಡುಗೆ ಅನಿಲ ಸೋರಿಕೆಯಿಂದ ಉಂಟಾದ ಸ್ಫೋಟದಲ್ಲಿ ನಾಲ್ವರೂ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ತಕ್ಷಣವೇ ಕೆ.ಎಂ.ಸಿ.ಆರ್.ಐ. ಅಸ್ಪತ್ರೆಗೆ ದಾಖಲಾಗಿಸಲಾಗಿದೆ.
ಗಂಗಮ್ಮ ಬಳ್ಳಾರಿ ಅವರ ಸ್ಥಿತಿ ಗಂಭೀರವಾಗಿದೆ. ಪೊಲೀಸರು ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.