ಬೆಂಗಳೂರು :ರಾಜ್ಯ ಸರ್ಕಾರದಿಂದ ಹುಬ್ಬಳ್ಳಿಯ ಹಿರಿಯ ಕಾಂಗ್ರೆಸ್ ಮುಖಂಡ ಎಫ್.ಎಚ್.ಜಕ್ಕಪ್ಪನವರ, ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಸೇರಿದಂತೆ ನಾಲ್ವರು ವಿಧಾನ ಪರಿಷತ್ ಸದಸ್ಯರಾಗಿ ನಾಮ ನಿರ್ದೇಶನ ಗೊಂಡಿದ್ದು ಅಧಿಕೃತ ಆದೇಶ ಹೊರಬಿದ್ದಿದೆ.
ರಾಜ್ಯ ಸರ್ಕಾರ ವತಿಯಿಂದ ಕಳುಹಿಸಿದ ನಾಲ್ವರ ಹೆಸರುಗಳಿಗೆರಾಜ್ಯಪಾಲ ಥಾವರಚಂದ ಗೆಹ್ಲೋಟ್ ಅನುಮೋದನೆ ನೀಡುವದರೊಂದಿಗೆ ಜಕ್ಕಪ್ಪನವರ, ರಮೇಶ್ ಬಾಬು, ಆರತಿ ರಾವ್ , ಶಿವಕುಮಾರ್ ಮೇಲ್ಮನೆ ಸದಸ್ಯರಾಗಿ ನೇಮಕಗೊಂಡಿದ್ದು ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಗೊಂಡಿದೆ.
ಕಾಂಗ್ರೆಸ್ ವಕ್ತಾರ ಹಾಗೂ ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್ ಬಾಬು, ಎನ್ಆರ್ ಐ ಸೆಲ್ ಉಪಾಧ್ಯಕ್ಷೆಯಾಗಿರುವಂತ ಡಾ.ಆರತಿ ಕೃಷ್ಣ, ಮೈಸೂರು ಮೂಲದ ಪತ್ರಕರ್ತರಾಗಿರುವ ಶಿವಕುಮಾರ್ ಹಾಗೂ ಅಂಬೇಡ್ಕರ್ ಪ್ರಭಾವಳಿಯಲ್ಲಿ ಬೆಳೆದ ಹೋರಾಟಗಾರ ಜಕ್ಕಪ್ಪನವರ ಸೇರಿ ನಾಲ್ವರ ಹೆಸರನ್ನು ಸರ್ಕಾರ ಅಂತಿಮಗೊಳಿಸಿ ರಾಜ್ಯಪಾಲರ ಬಳಿ ಕಳುಹಿಸಿತ್ತು.
ಕಾಂಗ್ರೆಸ್ ಪಕ್ಷದ ಬಗೆಗಿನ ನನ್ನ ನಾಲ್ಕು ದಶಕಗಳ ನಿಷ್ಠೆ, ಪ್ರಾಮಾಣಿಕತೆ ಹಾಗೂ ಸಾಮಾಜಿಕ ಸೇವೆ ಗುರುತಿಸಿ ಪಕ್ಷದ ಹಿರಿಯರು ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಆಯ್ಕೆ ಮಾಡಿದ್ದಾರೆ. ಈ ಮೂಲಕ ಉತ್ತರ ಕರ್ನಾಟಕ್ಕೆ ಪ್ರಾತಿನಿಧ್ಯ ಮತ್ತು ಸಾಮಾಜಿಕ ನ್ಯಾಯ ಲಭಿಸಿದೆ ಎಂದು ಭಾವಿಸಿದ್ದೇನೆ ಎಂದು ವಿಧಾನ ಪರಿಷತ್ಗೆ ಆಯ್ಕೆಯಾಗಿರುವ ಹಿರಿಯ ಮುಖಂಡ ಎಫ್.ಎಚ್. ಜಕ್ಕಪ್ಪನವರ ಹೇಳಿದ್ದಾರೆ.
ಪರಿಷತ್ ಸದಸ್ಯರಾಗಿ ಅಧಿಕೃತ ಆದೇಶ ಹಿನ್ನೆಲೆಯಲ್ಲಿ ಕನ್ನಡ ಧ್ವನಿ ಮಾತನಾಡಿಸಿದಾಗ ಅವರು ನೀಡಿದ ಮೊದಲ ಪ್ರತಿಕ್ರಿಯೆ ಇದು. ಪಕ್ಷಕ್ಕೆ ಅತ್ಯಂತ ನಿಷ್ಠನಾಗಿ ಕೆಲಸ ಮಾಡಿಕೊಂಡು ಬಂದಿದ್ದೇನೆ. ಪಕ್ಷವೂ ನನ್ನನ್ನು ಗುರುತಿಸಿಕೊಂಡು ಬಂದಿದೆ ಎಂದರು.
2008ರಲ್ಲಿ ಹು-ಧಾ ಪೂರ್ವ ವಿಧಾನಸಭಾ ಕ್ಷೇತ್ರಕ್ಕೆ ನನಗೆ ಟಿಕೆಟ್ ನೀಡಿತ್ತು. ಅಲ್ಪ ಮತಗಳಲ್ಲಿ ಪರಾಭವಗೊಂಡಿದ್ದೆ. ಬಳಿಕ ನಾನಾ ಚುನಾವಣೆಗಳಲ್ಲಿ, ಪಕ್ಷ ಸಂಘಟನಾ ಚಟುವಟಿಕೆಗಳ ಜವಾಬ್ದಾರಿ ವಹಿಸಿತ್ತು. ವಹಿಸಿದ ಎಲ್ಲ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿಕೊಂಡು ಬಂದಿದ್ದೆ. ಇದೆಲ್ಲವನ್ನೂ ಪರಿಗಣಿಸಿ ಈಗ ಪಕ್ಷವು ಪರಿಷತ್ ಸದಸ್ಯನನ್ನಾಗಿ ಆಯ್ಕೆ ಮಾಡುವ ಮೂಲಕ ಜನಸೇವೆಗೆ ಅವಕಾಶ ಮಾಡಿಕೊಟ್ಟಿದೆ. ಇದಕ್ಕಾಗಿ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.
ಜಕ್ಕಪ್ಪನವರ ಕ್ರಾಂತಿ ನಾಯಕ ಬಿ ಬಸವಲಿಂಗಪ್ಪನವರ ” ಭೂಸಾ ಬಂಡಾಯ” ಚಳುವಳಿಯಲ್ಲಿ ಧುಮುಕಿ,ನಂತರ ಪ್ರೊ ಬಿ ಕೃಷ್ಣಪ್ಪರವರು ಹುಟ್ಟುಹಾಕಿದ ದಲಿತ ಸಂಘರ್ಷ ಸಮಿತಿ ಜೊತೆ ಗುರುತಿಸಿಕೊಂಡರು. ಪದವೀ ಶಿಕ್ಷಣ ಮುಗಿದ ಮೇಲೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಕೆನರಾ ಬ್ಯಾಂಕ ಸೇವೆಗೆ ಸೇರಿದರು.
ಕೆನರಾ ಬ್ಯಾಂಕ ಸೇವೆಯಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರಿಗೆ ಆಗುತ್ತಿದ್ದ ಜಾತೀ ತಾರತಮ್ಯಗಳ ವಿರುದ್ಧ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ನೌಕರರನ್ನು ಸಂಘಟಿಸಿ ಅಖಿಲ ಭಾರತ ಕೆನರಾ ಬ್ಯಾಂಕ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ನೌಕರರರನ್ನು ಸಂಘಟಿಸಿ ಆ ಸಂಘದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾಗಿ ಆಯ್ಕೆಯಾಗಿ ಕೆನರಾ ಬ್ಯಾಂಕ ಸೇವೆಯಲ್ಲಿ ಬಡ್ತಿ ನೇಮಕಾತಿಯಲ್ಲಿ ಮೀಸಲಾತಿ ಮತ್ತು ಇತರ ರಿಯಾಯಿತಿಗಳನ್ನು ಜಾರಿಗೊಳಿಸುವ ಹೋರಾಟದಲ್ಲಿ ಯಶಸ್ವಿಯಾದರು.
ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಡಾ ಅಂಬೇಡಕರ ಪ್ರತಿಷ್ಠಾನದ 2011- 13 ಉಪಾಧ್ಯಕ್ಷರಾಗಿ ಸೇವೆಸಲ್ಲಿಸಿದ್ದಾರೆ. ಹರಿಹರದಲ್ಲಿ ಬಾಬಾಸಾಹೇಬ ಅಂಬೇಡಕರ ಚಾರಟಿ ಟ್ರಸ್ಟ ಸ್ಥಾಪಿಸಿ ಪ್ರಾಥಮಿಕ ಶಾಲೆಯಿಂದ ಪದವೀ ಕಾಲೇಜವರೆಗೆ ಶಾಲಾ ಕಾಲೇಜು ಪ್ರಾರಂಭಿಸಿ ಪರಿಶಿಷ್ಟರ ಶಿಕ್ಷಣೋನ್ನತಿ ಕಾರಣೀಭೂತರಾಗಿದ್ದಾರೆ.ಡಾ ಬಾಬಾಸಾಹೇಬ ಅವರು ಧಾರವಾಡದಲ್ಲಿ 1929 ಸ್ಥಾಪಿಸಿದ ಸಂಸ್ಥೆಯ ಶಿಕ್ಷಣ ಸಂಸ್ಥೆಗಳು ಅವರ ಮೊಮ್ಮಗ ಪ್ರಕಾಶ ಅಂಬೇಡ್ಕರ್ ನೇತೃತ್ವದಲ್ಲಿ ಅಭಿವೃದ್ಧಿ ಪಡಿಸುತ್ತಿದ್ದಾರೆ.ಬೃಹತ್ತಾದ ಬುದ್ಧ ವಿಹಾರ ಕಟ್ಟಿ ಅನೇಕ ಚಿಂತಕರೊಂದಿಗೆ ಸೇರಿ ಸಂವಿಧಾನ ಶಿಲ್ಪಿಯ ಬೃಹತ್ ಗ್ರಂಥಾಲಯ ಸ್ಥಾಪನೆ ಮಾಡುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದ್ದಾರೆ. ವೃತ್ತಿಯಲ್ಲಿ ಹೋಟೆಲ್ ಉದ್ಯಮಿಯಾಗಿರುವ ಮೂಲತ ಈಗಿನ ಅಣ್ಣಿಗೇರಿ ತಾಲ್ಲೂಕಿನ ನಾವಳ್ಳಿ ಗ್ರಾಮದವರಾದ ಜಕ್ಕಪ್ಪನವರ ಹವ್ಯಾಸಿ ಕೃಷಿಕರಾಗಿದ್ದಾರೆ. ದಲಿತ ಆದಿವಾಸಿಗಳು ಮೀಸಲಾತಿಯಿಂದಾಚೆ ಸ್ವಾಭಿಮಾನಿ-ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕೆಂಬುದಕ್ಕೆ ಅವರೇ ದೊಡ್ಡ ಉದಾಹರಣೆಯಾಗಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ರಾಜ್ಯ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷರಾಗಿ, ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸೇರಿದಂತೆ ಅನೇಕ ಆಯಕಟ್ಟಿನ ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ.