ಹುಬ್ಬಳ್ಳಿ, ಧಾರವಾಡ ಅಂಜುಮನ್ ಸಂಸ್ಥೆಯ ಅಧ್ಯಕ್ಷರಿಂದ ಆಗ್ರಹ*
ಧಾರವಾಡ: ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆಯಲ್ಲಿ ಮುಸ್ಲಿಂ ಸಮಾಜದವರಿಗೆ ಟಿಕೆಟ್ ಕೊಡಬೇಕು ಎಂದು ಹುಬ್ಬಳ್ಳಿ- ಧಾರವಾಡ ಅಂಜುಮನ್ ಸಂಸ್ಥೆಯ ಪದಾಧಿಕಾರಿಗಳು ಕಾಂಗ್ರೆಸ್ ಪಕ್ಷವನ್ನು ಆಗ್ರಹಿಸಿದರು.
ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹುಬ್ಬಳ್ಳಿ ಅಂಜುಮನ್ ಸಂಸ್ಥೆಯ ಅಧ್ಯಕ್ಷ ಎ.ಎಂ.ಹಿಂಡಸಗೇರಿ ಮತ್ತು ಧಾರವಾಡ ಅಂಜುಮನ್ ಸಂಸ್ಥೆಯ ಅಧ್ಯಕ್ಷ ಮೊಹಮದ್ ಇಸ್ಮಾಯಿಲ್ ತಮಟಗಾರ ಅವರು ಜಂಟಿ ಹೇಳಿಕೆ ನೀಡಿದರು.
ಕ್ಷೇತ್ರದಲ್ಲಿ ಹಲವಾರು ವರ್ಷಗಳಿಂದ ಮುಸಲ್ಮಾನ ಸಮಾಜದವರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತ ಬಂದಿದ್ದಾರೆ. ಈ ಕಾರಣದಿಂದ ಹಿರಿಯ ನಾಯಕರಾಗಿದ್ದ ಶಾಮನೂರು ಶಿವಶಂಕರಪ್ಪ ಅವರು ಆಯ್ಕೆಯಾಗುತ್ತ ಬಂದಿದ್ದಾರೆ. ಇದೀಗ ಅವರ ಅಗಲಿಕೆಯಿಂದ ಉಪಚುನಾವಣೆ ನಡೆಯುತ್ತಿದ್ದು, ಈ ಬಾರಿ ಅಲ್ಪಸಂಖ್ಯಾತ ಮುಸಲ್ಮಾನ ಸಮಾಜದವರಿಗೆ ಅವಕಾಶ ನೀಡಬೇಕು ಎಂದರು.

ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯದ ಜನರು ಬಹಳಷ್ಟಿದ್ದು, ನಿರ್ಣಾಯಕ ಹಂತದಲ್ಲಿ ಸಮಾಜದ ಮತದಾರರಿದ್ದಾರೆ.
ಕಳೆದ ಹಲವು ವರ್ಷಗಳಿಂದ ಶಿವಶಂಕರಪ್ಪ ಅವರನ್ನು ಬೆಂಬಲಿಸುತ್ತ ಬಂದ ಪರಿಣಾಮ ಕಾಂಗ್ರೆಸ್ ಕ್ಷೇತ್ರದಲ್ಲಿ ಹಿಡಿತ ಸಾಧಿಸಲು ಸಾಧ್ಯವಾಗಿದೆ.
ಕಾಂಗ್ರೆಸ್ ಪಕ್ಷದಲ್ಲಿ ಮುಸ್ಲಿಂ ಸಮಾಜದ ಅನೇಕ ನಾಯಕರಿದ್ದು, ಅವರಲ್ಲಿ ಒಬ್ಬರಿಗೆ ಟಿಕೆಟ್ ಕೊಡಬೇಕು
ಈ ಮೂಲಕ ಕ್ಷೇತ್ರದಲ್ಲಿನ ಮುಸಲ್ಮಾನರ ಭಾವನೆಗೆಗಳಿಗೆ ಸ್ಪಂದಿಸುವ ಕೆಲಸವನ್ನು ಕಾಂಗ್ರೆಸ್ ವರಿಷ್ಠರು ಮಾಡಬೇಕು.
ನನ್ನ ನಂತರ ಮುಸ್ಲಿಂ ಸಮಾಜದವರಿಗೆ ಟಿಕೆಟ್ ಕೊಡಬೇಕು ಎಂಬ ಮಾತನ್ನು ಸ್ವತಃ ಶಾಮನೂರ ಶಿವಶಂಕರಪ್ಪ
ಈ ಹಿಂದಿನ ಚುನಾವಣೆಗಳಲ್ಲಿ ಹೇಳಿರುವುದು ಕ್ಷೇತ್ರದ ಜನರಿಗೆ ಗೊತ್ತಿದೆ. ಹೀಗಾಗಿ ಈ ಬಾರಿ ಕಾಂಗ್ರೆಸ್ ನಾಯಕರು ಕ್ಷೇತ್ರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮುಸ್ಲಿಂರಿಗೆ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದರು.
ಗೆಲ್ಲುವ ಅರ್ಹ ವ್ಯಕ್ತಿಗೆ ಟಿಕೆಟ್ ಕೊಡುವುದು ಸಾಮಾನ್ಯ ಸಂಗತಿ.
ಕಾಂಗ್ರೆಸ್ ಗೆ ನಿಷ್ಠರಾಗಿರುವ ಅನೇಕ
ಮುಸ್ಲಿಂ ಸಮಾಜದ ಅರ್ಹ ಕಾರ್ಯಕರ್ತರಿದ್ದಾರೆ.
ಕಾಂಗ್ರೆಸ್ ಪಕ್ಷ ಕೈಕೊಳ್ಳುವ ತೀರ್ಮಾನವನ್ನು ಪಕ್ಷದ ಎಲ್ಲರೂಗೌರವಿಸಲೇಬೇಕಾಗುತ್ತದೆ. ಆದರೆ, ಮುಸ್ಲಿಂ ಸಮಾಜದ ಬೇಡಿಕೆಯನ್ನು ಈಡೇರಿಸದಿದ್ದರೆ, ಆ ಕ್ಷೇತ್ರದಲ್ಲಿನ ಸಮಾಜ ಬಾಂಧವರು ಮುಂದೆ ತಮ್ಮ ತೀರ್ಮಾನ ಕೈಕೊಳ್ಳಲಿದ್ದಾರೆ ಎಂದು ಉತ್ತರಿಸುವ ಮೂಲಕ ಸೂಚ್ಯವಾಗಿ ಎಚ್ಚರಿಕೆ ಕೂಡ ನೀಡಿದರು.
ಪದಾಧಿಕಾರಿಗಳಾದ ಎ.ಎ. ಅತ್ತಾರ, ಎಸ್.ಎ.ಸರಗಿರೋ,ಮಹ್ಮದರಫೀಕ್ ಬಂಕಾಪೂರ, ರಫೀಕ್ ಶಿರಹಟ್ಟಿ, ಮುಖಂಡರಾದ ಯಾಸೀನ್ ಹಾವೇರಿಪೇಟ್,ಉಸ್ಮಾನ ಬಬರ್ಚಿ, ಮೆಹಬೂಬ ಪಠಾಣ, ವಸೀಂ ಮೊಯಿನ್ ಇತರರು ಸುದ್ದಿಗೋಷ್ಠಿಯಲ್ಲಿದ್ದರು.



