ಧಾರವಾಡ: ಅರ್ಜೆಂಟೀನಾದ ರಾಜಧಾನಿ ಬ್ಯೂನಸ್ ಐರಿಸ್ದಲ್ಲಿ ಜರುಗಲಿರುವ ಅಂತರ ರಾಷ್ಟ್ರೀಯ ಶಿಕ್ಷಕರ ಸಮಾವೇಶದಲ್ಲಿ ಅಖಿಲ ಭಾರತ ಶಿಕ್ಷಕರ ಫೆಡರೇಶನ್ ಕಾರ್ಯಾಧ್ಯಕ್ಷ, ರಾಜ್ಯದ ಶಿಕ್ಷಕರ ಸಂಘಟನೆಯ ಹಿರಿಯ ಧುರೀಣ ಬಸವರಾಜ ಗುರಿಕಾರ
ಪಾಲ್ಗೊಳ್ಳಲಿದ್ದಾರೆ.
ಎಜ್ಯುಕೇಶನ್ ಇಂಟರ್ನ್ಯಾಷನಲ್ ವತಿಯಿಂದ 10ನೇ ಅಂತರ್ ರಾಷ್ಟ್ರೀಯ ಶಿಕ್ಷಕರ ಸಮಾವೇಶ ಅರ್ಜೆಂಟೀನಾ ದೇಶದ ರಾಜಧಾನಿ ಬ್ಯೂನಸ್ ಐರಿಸ್ದಲ್ಲಿ ಜು.27 ರಿಂದ ಆ.2 ವರೆಗೆ ಜರುಗಲಿದೆ.
ಸಮಾವೇಶದಲ್ಲಿ 147 ದೇಶದ ಶಿಕ್ಷಕ ಪ್ರತಿನಿಧಿಗಳು ಭಾಗವಹಿಸಲಿದ್ದು, ಅಖಿಲ ಭಾರತ ಶಿಕ್ಷಕರ ಫೆಡರೇಷನ್ ವತಿಯಿಂದ ಕಾರ್ಯಾಧ್ಯಕ್ಷ ಬಸವರಾಜ್ ಗುರಿಕಾರ, ಮಹಾ ಪ್ರಧಾನ ಕಾರ್ಯದರ್ಶಿ ಕಮಲಕಾಂತ ತ್ರಿಪಾಠಿ, ಖಜಾಂಜಿ ಹರಿಗೋವಿಂದನ್ ಭಾಗವಹಿಸಲಿದ್ದಾರೆ.
ಸಮಾವೇಶದಲ್ಲಿ ಶಿಕ್ಷಕರ ಸೇವಾ ಭದ್ರತೆ, ಶಿಕ್ಷಕರ ವೇತನ ನೀತಿ, ಸೇವಾ ಸೌಲಭ್ಯಗಳು, ಕಲಿಕೆ ಹಾಗೂ ಕಲಿಸುವಿಕೆಯ ಅಂಶಗಳು ಗುಣಾತ್ಮಕ ಶಿಕ್ಷಣ ಹಾಗೂ ಇನ್ನಿತರ ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ. ವಿವಿಧ ದೇಶದ ಶಿಕ್ಷಕ ಸಂಘಟನೆಯ ನಾಯಕರು ತಮ್ಮ ದೇಶದ ಶಿಕ್ಷಣ ನೀತಿ ಹಾಗೂ ಶಿಕ್ಷಕರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಲಿದೆ.