*ಐತಿಹಾಸಿಕ ಕಾರ್ಯಕ್ರಮಕ್ಕೆ ಕ್ಷಣಗಣನೆ – ಎರಡೂವರೆ ಲಕ್ಷಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ*
*ಖರ್ಗೆ, ಸಿಎಂ ಸಹಿತ ಸಚಿವರ ದಂಡು ಹುಬ್ಬಳ್ಳಿಗೆ*
ಹುಬ್ಬಳ್ಳಿ : ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ 42,345ಮನೆಗಳ ಹಂಚಿಕೆ ಕಾರ್ಯಕ್ರಮದ ಎಲ್ಲ ಸಿದ್ಧತೆ ಪೂರ್ಣಗೊಂಡಿದ್ದು ನಾಳೆ ಬೆಳಗ್ಗೆ 11ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದೆ ಎಂದು ಕಳೆದ ಒಂದು ವಾರದಿಂದ ವಾಣಿಜ್ಯ ರಾಜಧಾನಿಯಲ್ಲೇ ಮೊಕ್ಕಾಂ ಹೂಡಿರುವ ವಸತಿ ಸಚಿವ ಜಮೀರ್ ಅಹಮದ್ ಖಾನ್ ಹೇಳಿದರು.

ಸಾಯಂಕಾಲ ಅಂತಿಮ ಸಿದ್ದತೆಗಳನ್ನು ಪರಿಶೀಲಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು , ಕಾರ್ಯಕ್ರಮ ಕ್ಕೆ ಎ ಐ ಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಸತೀಶ್ ಜಾರಕಿಹೊಳಿ, ಎಚ್. ಸಿ. ಮಹದೇವಪ್ಪ, ಎಚ್. ಕೆ. ಪಾಟೀಲ್ ಕೆ. ಎಚ್. ಮುನಿಯಪ್ಪ, ಸಂತೋಷ್ ಲಾಡ್ ಸೇರಿದಂತೆ ಎಲ್ಲ ಸಚಿವರು ಭಾಗವಹಿಸಲಿದ್ದು ಕಾರ್ಯಕ್ರಮದಲ್ಲಿ ಎರಡೂ ವರೆ ಲಕ್ಷ ಕ್ಕೂ ಹೆಚ್ಚು ಜನ ಸೇರಲಿದ್ದಾರೆ. ಹುಬ್ಬಳ್ಳಿ ಭಾಗದಲ್ಲಿ ಹಬ್ಬದ ವಾತಾವರಣ ನಿರ್ಮಾಣ ಗೊಂಡಿದೆ ಎಂದರು.

ಹುಬ್ಬಳ್ಳಿ-ಧಾರವಾಡ, ಹಾವೇರಿ, ಗದಗ, ಬೆಳಗಾವಿ, ಕೊಪ್ಪಳ ದಿಂದ ಕಾರ್ಯಕ್ರಮಕ್ಕೆ ಆಗಮಿಸಲಿದ್ದು ಇದು ಇಡೀ ದೇಶಕ್ಕೆ ಒಂದು ಹೊಸ ಸಂದೇಶ ಹೋಗಲಿದೆ. ಏಕ ಕಾಲದಲ್ಲಿ ರಾಜ್ಯಾ ದ್ಯಂತ 42,345ಬಡ ಕುಟುಂಬಗಳಿಗೆ ಮನೆಗಳು ನೀಡುತ್ತಿರುವುದು ಇದೇ ಮೊದಲು. ಈ ಹಿಂದೆ 32,789 ಮನೆ ಹಂಚಿಕೆ ಮಾಡಲಾಗಿತ್ತು. ಮುಂದಿನ ಹಂತದಲ್ಲಿ 30 ಸಾವಿರ ಮನೆ ಹಂಚುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಿಂದ ಇಡೀ ಹುಬ್ಬಳ್ಳಿ ಯಲ್ಲಿ ಹಬ್ಬದ ವಾತಾವರಣ ನಿರ್ಮಾಣಗೊಂಡಿದ್ದು ಇಡಿ ಹುಬ್ಬಳ್ಳಿ ಕೈ ನಾಯಕರಿಗೆ ಸ್ವಾಗತ ಕೋರುವ ಬ್ಯಾನರ್ ಬಂಟಿಂಗ್ಳಿಂದ ತುಂಬಿ ಹೋಗಿದ್ದು ಹುಬ್ಬಳ್ಳಿಯಲ್ಲೆ ವಾಸ್ತವ್ಯ ಹೂಡಿರುವ ಜಮೀರ ಅಹ್ಮದ ಕಾಲಿಗೆ ಚಕ್ರ ಕಟ್ಟಿಕೊಂಡು ಯಶಸ್ಸಿಗಾಗಿ ಪ್ರತಿ ವಾರ್ಡಗಳಿಗೂ ತೆರಳಿ ಸಭೆ ನಡೆಸಿದ್ದಾರೆ. ಸ್ಲಂ ಬೋರ್ಡ್ ಅಧ್ಯಕ್ಷ ಪ್ರಸಾದ್ ಅಬ್ಬಯ್ಯ ಸಹ ಅವರೊಂದಿಗೆ ಹಗಲಿರುಳು ಯಶಸ್ಸಿಗಾಗಿ ಶ್ರಮಿಸುತ್ತಿದ್ದಾರೆ.
ಬೆಳಿಗ್ಗೆಯಿಂದಲೂ ಅಧಿಕಾರಿಗಳೊಂದಿಗೆ ಸಮಾಲೋಚನೆಯನ್ನು ಸಚಿವರು ನಡೆಸಿದ್ದು ಎಲ್ಲೆಡೆ ಬಿಗಿ ಬಂದೋಬಸ್ತ ಏರ್ಪಡಿಸಲಾಗಿದೆ. ಉಸ್ತುವಾರಿ ಸಚಿವರಾದ ಲಾಡ್ ಸಹ ಅನೇಕ ಸಭೆಗಳನ್ನು ನಡೆಸಿದ್ದಾರೆ.
ಗೋಷ್ಠಿಯಲ್ಲಿ ಮಾಜಿ ಸಂಸದ ಪ್ರೊ. ಐ. ಜಿ. ಸನದಿ, ಮಾಜಿ ಸಚಿವ ಅಂಜುಮನ್ ಅಧ್ಯಕ್ಷ ಎ.ಎಂ. ಹಿಂಡಸ ಗೇರಿ, ಶಾಸಕ ಎನ್.ಎಚ್. ಕೋನರೆಡ್ಡಿ, ಮಾಜಿ ಪರಿಷತ್ ಸದಸ್ಯ ಎಂ. ಸಿ. ವೇಣುಗೋಪಾಲ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಅಳ್ಳೂರ್, ಅನಿಲಕುಮಾರ ಪಾಟೀಲ, ಸದಾನಂದ ಡಂಗನವರ ಸಹಿತ ಹಲವು ಮುಖಂಡರು ಇದ್ದರು.




