*ಧಾರವಾಡಕ್ಕೆ ದಕ್ಕಿದ ಪಟ್ಟ – ವಿನಯ ಶಿಷ್ಯನಿಗೆ ಮಹತ್ವದ ಹುದ್ದೆ*
ಹುಬ್ಬಳ್ಳಿ : ರಾಜ್ಯದ ಅತಿದೊಡ್ಡ ಎರಡನೇ ಮಹಾನಗರಪಾಲಿಕೆ ಹಿರಿಮೆಯ ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ವಿರೋಧ ಪಕ್ಷದ ನಾಯಕರಾಗಿ ಧಾರವಾಡ ಗ್ರಾಮೀಣ ಕ್ಷೇತ್ರ ವ್ಯಾಪ್ತಿಯ ನಾಲ್ಕನೇ ವಾರ್ಡಿನ ಕಾಂಗ್ರೆಸ್ ಸದಸ್ಯ ರಾಜಶೇಖರ ಬಸವಣ್ಣೆಪ್ಪ ಕಮತಿ ನಿಯುಕ್ತಿಗೊಂಡಿದ್ದಾರೆ.
ಈ ನೇಮಕವನ್ನು ಮಹಾನಗರ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಹುಸೇನ ಹಳ್ಳೂರ ಇಂದು ಪ್ರಕಟಿಸಿದ್ದಾರೆ.
ಪಾಲಿಕೆಯ ನೂತನ ಮೇಯರ್ ಆಗಿ ನಾಲ್ಕು ಬಾರಿ ಚುನಾಯಿತರಾದ ರಾಮಣ್ಣ ಬಡಿಗೇರ, ದುರ್ಗಮ್ಮ ಬಿಜವಾಡ ಉಪಮೇಯರ್ ಆಗಿ ಆಯ್ಕೆಯಾಗಿದ್ದು ಆಡಳಿತ ಪಕ್ಷದ ಸಭಾನಾಯಕರಾಗಿ ಹಿರಿಯ ಸದಸ್ಯ ವೀರಣ್ಣ ಸವಡಿ ನಿಯುಕ್ತಿಗೊಂಡ ನಂತರ ಕಾಂಗ್ರೆಸ್ ಪಕ್ಷದಿಂದ ವಿಪಕ್ಷ ನಾಯಕನ ಪಟ್ಟ ಯಾರಿಗೆ ಎಂಬುದು ತೀವ್ರ ಕುತೂಹಲ ಕೆರಳಿಸಿತ್ತು.
ಮೊದಲ ಎರಡು ಅವಧಿ ದೊರೆರಾಜ ಮಣಿಕುಂಟ್ಲ( ಪೂರ್ವ), ಸುವರ್ಣಾ ಕಲಕುಂಟ್ಲ( ಸೆಂಟ್ರಲ್) ವಿರೋಧ ಪಕ್ಷದ ನಾಯಕರಾಗಿ ಕಾರ್ಯ ನಿರ್ವಹಿಸಿದ ಹಿನ್ನೆಲೆಯಲ್ಲಿ ಈ ಬಾರಿ ಪಶ್ಚಿಮ ಅಥವಾ ಧಾರವಾಡ ಗ್ರಾಮೀಣದ ಪಾಲಾಗುವುದು ಖಚಿತವಾಗಿತ್ತು.
ಮೊದಲ ಬಾರಿ ಪಾಲಿಕೆಗೆ ಬಲಗಾಲಿಟ್ಟ ನಾಲ್ಕನೇ ವಾರ್ಡಿನಿಂದ ಚುನಾಯಿತರಾದ ರಾಜಶೇಖರ ಕಮತಿ, ಶಂಭುಗೌಡ ಸಾಲಮನಿ( 15), ಕವಿತಾ ದಾನಪ್ಪ ಕಬ್ಬೇರ( 20), ಶಂಕರ ಹರಿಜನ( 31),ಇಮ್ರಾನ್ ಯಲಿಗಾರ( 33) ಅಲ್ಲದೇ ಸೆಂಟ್ರಲ್ ಕ್ಷೇತ್ರ ವ್ಯಾಪ್ತಿಯ ಆರೀಫ ಭದ್ರಾಪುರ(53) ಇವರುಗಳ ಹೆಸರುಗಳ ಹೆಸರು ಕೇಳಿ ಬಂದಿದ್ದವು.
ಮಹಾನಗರ ಅಧ್ಯಕ್ಷ ಕಾಂಗ್ರೆಸ್ ಶಾಸಕರುಗಳಾದ ವಿನಯ ಕುಲಕರ್ಣಿ,ಪ್ರಸಾದ ಅಬ್ಬಯ್ಯ, ಮುಖಂಡ ದೀಪಕ ಚಿಂಚೋರೆ ಹಾಗೂ ಉಸ್ತುವಾರಿ ಸಚಿವ ಸಂತೋಷ ಲಾಡ್ ಜತೆ ಮಹಾನಗರ ಅಧ್ಯಕ್ಷ ಅಲ್ತಾಫ್ ಹಳ್ಳೂರ ಒಂದು ಚರ್ಚೆ ನಡೆಸಿ ಅಂತಿಮವಾಗಿ ಮುಂದಿನ 31ಕ್ಕೆ ಪಾಲಿಕೆ ಮಾಸಿಕ ಸಾಮಾನ್ಯ ಸಭೆ ನಡೆಯಲಿರುವ ಹಿನ್ನೆಲೆಯಲ್ಲಿ ವಿಪಕ್ಷ ನಾಯಕನ ನೇಮಕವಾಗಿದೆ.
ನೂತನ ವಿಪಕ್ಷ ನಾಯಕ ಕಮತಿಯವರನ್ನು ರಾಣಿ ಚೆನ್ನಮ್ಮ ಬ್ಲಾಕ್ ಅಧ್ಯಕ್ಷ ನಾಗರಾಜ ಗೌರಿ ಅಭಿನಂದಿಸಿದ್ದಾರಲ್ಲದೇ ಆಡಳಿತ ಪಕ್ಷಕ್ಕೆ ಚಾಟಿ ಬೀಸುವಂತಹ ಕೆಲಸ ಮಾಡಲಿದ್ದಾರೆಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.