ಹುಬ್ಬಳ್ಳಿ : ವಾಣಿಜ್ಯ ರಾಜಧಾನಿಯ ಮುಸ್ಲಿಂ ಸಮುದಾಯದ ಪ್ರಾತಿನಿಧಿಕ ಸಂಸ್ಥೆ ಅಂಜುಮನ್ ಇಸ್ಲಾಂ ಸಂಸ್ಥೆಯ ನೂತನ ಆಡಳಿತ ಮಂಡಳಿ ಆಯ್ಕೆಗೆ ಇಂದು ಮತದಾನ ನಡೆದು ಮತ ಎಣಿಕೆಯಲ್ಲಿ ಮಾಜಿ ಸಚಿವ ಎ.ಎಂ. ಹಿಂಡಸಗೇರಿ ಗುಂಪು ಸಂಪೂರ್ಣ ಮೇಲುಗೈ ಸಾಧಿಸಿದೆ.
ಶತಮಾನದ ಇತಿಹಾಸವಿರುವ ಸಂಸ್ಥೆಯ ಆಡಳಿತ ಮಂಡಳಿಯ ಅಧಿಕಾರಕ್ಕಾಗಿ ಇದೇ ಮೊದಲ ಬಾರಿಗೆ, ನಾಲ್ಕು ಬಣಗಳು ಚುನಾವಣಾ ಕಣದಲ್ಲಿದ್ದವು.
ಟ್ರಾಕ್ಟರ್ ಚಿಹ್ನೆಯಡಿ ಸ್ಪರ್ಧೆ ಮಾಡಿದ ಮಾಜಿ ಸಚಿವ ಎ.ಎಂ.ಹಿಂಡಸಗೇರಿ( ಅಧ್ಯಕ್ಷ) ನೇತೃತ್ವದ ಗುಂಪಿನ ಅಬ್ದುಲ್ಲಾ ಅತ್ತಾರ (ಉಪಾಧ್ಯಕ್ಷ), ಬಶೀರ್ ಹಳ್ಳೂರ (ಕಾರ್ಯದರ್ಶಿ), ದಾದಾ ಹಯಾತ ಖೈರಾತಿ (ಖಜಾಂಚಿ,) ಮಹಮದ್ ರಫೀಕ್ ಬಂಕಾಪುರ (ಜಂಟಿ ಕಾರ್ಯದರ್ಶಿ), ಮಹಮದ್ ಇರ್ಷಾದ್ ಆಸ್ಪತ್ರೆ ಮಂಡಳಿಗೆ ಸಹಿತ 52 ಜನಮುನ್ನಡೆಯಲ್ಲಿ ದ್ದಾರೆ.ಕಳೆದ ಬಾರಿ ನಿರ್ಣಾಯಕ ಪಾತ್ರ ವಹಿಸಿದ್ದ ಅಲ್ತಾಫ್ ಹಳ್ಳೂರ ಈ ಬಾರಿಯೂ ನಿರ್ಣಾಯಕ ಪಾತ್ರ ವಹಿಸಿದ್ದಾರೆ.
ಪ್ರಸಕ್ತ ಅಧಿಕಾರದಲ್ಲಿರುವ ಮಹ್ಮದ ಯೂಸೂಫ್ ಸವಣೂರ, ಅಲ್ತಾಫ್ ಕಿತ್ತೂರ ಬಣ( ಅಟೋ ರಿಕ್ಷಾ) ಮೂರನೇ ಬಾರಿಗೆ ಅಧಿಕಾರ ಹಿಡಿಯಲು ವಿಫಲವಾಗಿದೆ.
ದಿ.ಹೊನ್ನಳ್ಳಿ ಗುಂಪಿನಿಂದ ಸ್ಪರ್ಧೆಗಿಳಿದಿರುವ ಎನ್.ಡಿ.ಗದಗಕರ,ವಹಾಬ್ ಮುಲ್ಲಾ ತಂಡ( ಹೆಲಿಕ್ಯಾಪ್ಟರ್) ಹಾಗೂ ಮಜಹರ ಖಾನ್ ಮತ್ತು ಅನ್ವರ ಮುಧೋಳ ಸಾರಥ್ಯದ ( ಪೆನ್ ) ಬಾಣ ಪೈಪೋಟಿ ನೀಡಿದರೂ ಯಶಸ್ವಿಯಾಗಲಿಲ್ಲ.
ಒಟ್ಟು 11903 ಮತದಾರರು ಇದ್ದು ಬೆಳಿಗ್ಗೆ 8ಗಂಟೆಗೆ ಆರಂಭಗೊಂಡ ಮತದಾನ ಸಾಯಂಕಾಲ 5ರವರೆಗೆ ಶೇ.79ರಷ್ಟು ಮತದಾನ ನಡೆಯಿತು.. ತದನಂತರ ಘಂಟೀಕೇರಿಯ ಸರಕಾರಿ ಪ್ರೌಢಶಾಲೆ, ಸರದಾರ ಮೆಹಬೂಬ್ ಅಲಿ ಖಾನ್ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಮಾತು ಎಣಿಕೆ ನಡೆದವು.
ಮತದಾನಕ್ಕೆ ಎರಡು ದಿನಗಳ ಮೊದಲು ಹಳೇ ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ 108 ಮಂದಿಗೆ ಹೈಕೋರ್ಟ ಜಾಮೀನು ದೊರೆತಿರುವುದು ಸ್ವಲ್ಪ ಮಟ್ಟಿಗೆ ಮತದಾನದ ಮೇಲೆ ಪರಿಣಾಮ ಬೀರಿತ್ತು.
1983ರಿಂದ 1989ರವರೆಗೆ ಎರಡು ಅವಧಿ ಸಂಸ್ಥೆಯ ಚುಕ್ಕಾಣಿ ಹಿಡಿದಿದ್ದ ಮಾಜಿ ಸಚಿವ ಎ.ಎಂ. ಹಿಂಡಸಗೇರಿ ಮತ್ತೆ ಈ ಬಾರಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದರು.