*ತುತ್ತಿನ ಚೀಲ ತುಂಬಿಸಲು ಊರು ಬಿಟ್ಟ* *ರೇಲ್ವೆ ಉದ್ಯೋಗಿ ಮಗನ ಜೀವನಚರಿತ್ರೆ ನಾಳೆ ಬಿಡುಗಡೆ*
ಹುಬ್ಬಳ್ಳಿ: ಹುಬ್ಬಳ್ಳಿ ಮೂಲದ ಶಾರ್ಜಾ ಉದ್ಯಮಿ ಡಾ. ಅಲ್ಫ್ರೆಡ್ ಮಿರಾಂಡಾ ಅವರ ಜೀವನ ಚರಿತ್ರೆ ʼರೇಲ್ವೆ ಮ್ಯಾನ್ಸ್ ಸನ್ʼ ಕೃತಿಯನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ನಾಳೆ ದಿ.6ರಂದು ರವಿವಾರ ಸಂಜೆ ನಾಲ್ಕು ಗಂಟೆಗೆ ಕೇಶ್ವಾಪುರದ ವುಡ್ಲ್ಯಾಂಡ್ಸ್ ಹೋಟೆಲ್ನಲ್ಲಿ ಬಿಡುಗಡೆ ಮಾಡಲಿದ್ದಾರೆ.
ಹುಬ್ಬಳ್ಳಿಯ ಸೇಂಟ್ ಮೇರೀಸ್ ಶಾಲೆ ಮತ್ತು ಪಿ.ಸಿ. ಜಾಬಿನ್ ಕಾಲೇಜಿನಲ್ಲಿ ಪಿಯುಸಿ ಓದಿದ ಅಲ್ಫ್ರೆಡ್, ರೈಲ್ವೆಯಲ್ಲಿ ಟ್ರೇನ್ ಗಾರ್ಡ್ ಆಗಿದ್ದ ಓರ್ಲಾಂಡೊ ಮಿರಾಂಡಾ ಅವರಿಗೆ ಮನೆ ಖರ್ಚು ನಿಭಾಯಿಸಲು ಹಾಗೂ ನಾಲ್ಕು ಸಹೋದರಿಯರ ಶಿಕ್ಷಣ ಮತ್ತು ವಿವಾಹದ ಖರ್ಚು ನಿಭಾಯಿಸಲು ಅವೆರಿ ಇಂಡಿಯಾ ಕಂಪನಿಯಲ್ಲಿ ಟೆಕ್ನಿಷಿಯನ್ ಆಗಿ ಕೆಲಸಕ್ಕೆ ಸೇರಿದರು. ಮೈಸೂರು, ಹುಬ್ಬಳ್ಳಿಯಲ್ಲಿ ನಾಲ್ಕು ವರ್ಷ ಕೆಲಸ ಮಾಡಿ, ಕುವೈತ್ಗೆ ವಲಸೆ ಹೋದ ಅಲ್ಫ್ರೆಡ್, ನಂತರ ಗೋವಾದಲ್ಲಿ ಹೇಯ್ಸ್ ಅಂಡ್ ಜಾರ್ವಿಸ್ ಕಂಪನಿಯಲ್ಲಿ ಟೂರಿಸ್ಟ್ ಗೈಡ್ ಆಗಿ ಕಾರ್ಯ ನಿರ್ವಹಿಸಿದರು. 2001ರಲ್ಲಿ ಅಲಯನ್ಸ್ ಇನ್ಸೂರೆನ್ಸ್ ಕಂಪನಿಯಲ್ಲಿ ಅಡ್ವೈಸರ್ ಆಗಿ ದುಬೈಗೆ ಹೊರಟರು. ಸಾಕಷ್ಟು ಪರಿಶ್ರಮದ ನಂತರ ೨೦೦೬ರಲ್ಲಿ ವಿಮಾ ಸಂಗ್ರಹಣೆಯಲ್ಲಿ ಸಾಧನೆ ಮಾಡಿ ವಿಶ್ವದ ಪ್ರತಿಷ್ಠಿತ ಮಿಲಯನ್ ಡಾಲರ್ ರೌಂಡ್ ಟೇಬಲ್ (ಎಂ.ಡಿ.ಆರ್.ಟಿ.) ಸದಸ್ಯತ್ವಕ್ಕೆ ಅರ್ಹತೆ ಪಡೆದು, ಅಮೆರಿಕಕ್ಕೆ ಆಹ್ವಾನಿತರಾದರು.
2004ರಲ್ಲಿ ಅಲ್-ಮನ್ಸೌರ್ ಲೇಡೀಸ್ ಸಲೂನ್ ಆರಂಭಿಸಿದರು. ಆರಂಭದಲ್ಲಿ ಸಾಕಷ್ಟು ಸಂಕಷ್ಟ ಎದುರಿಸಿ, ಸ್ವತಃ ಮಕ್ಕಳನ್ನೇ ಸಲೂನಿನ ಪ್ರಚಾರಕ್ಕೆ ಕಳಿಸಿ, ನಂತರದಲ್ಲಿ ಶಾರ್ಜಾ-ದುಬೈನಲ್ಲಿ ಆರು ಸಲೂನುಗಳನ್ನು ಆರಂಭಿಸಿದ ಇವರ ಪ್ರಯಾಣ ಇಂದಿನ ಯುವಕರಿಗೆ ಮಾದರಿಯಾಗಿದೆ. ಇದುರುವರೆಗೆ ಸುಮಾರು 80 ದೇಶಗಳನ್ನು ಸುತ್ತಿರುವ ಅಲ್ಫ್ರೆಡ್ ತಾನ್ಯಾ ಬ್ಯೂಟಿ ಪ್ರೊಡಕ್ಟ್ಸ್ ಎಂಬ ಕಂಪನಿಯನ್ನೂ ಹುಟ್ಟುಹಾಕಿದ್ದಾರೆ.
ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಮಾಜಿ ಸಂಸದ ಪ್ರೊ ಐ.ಜಿ. ಸನದಿ, ನೈಋತ್ಯ ರೇಲ್ವೆಯ ಪ್ರಧಾನ ವ್ಯವಸ್ಥಾಪಕ ಮುಕುಲ್ ಸರಣ್ ಮಾಥುರ್, ಫಾತಿಮಾ ಪಿ.ಯು. ಕಾಲೇಜಿನ ಪ್ರಾಚಾರ್ಯ ಫಾ. ಫೆಲಿಕ್ಸ್ ಮೊಂಟೀರೊ, ಸೇಂಟ್ ಮೇರೀಸ್ ಪ್ರೌಢ ಶಾಲೆಯ ಪ್ರಾಚಾರ್ಯ ಫಾ. ಥಾಮಸ್ ಚಂಪ್ಕಾರ ಅವರು ಅತಿಥಿಯಾಗಿ ಆಗಮಿಸಲಿದ್ದಾರೆ.
ರೈಲ್ವೆ ಉದ್ಯೋಗಿಯ ಪುತ್ರ ಅಲ್ಫ್ರೆಡ್ ಜೀವನ ಚರಿತ್ರೆಯನ್ನು ಬರೆದಿರುವ ಪತ್ರಕರ್ತ ಸಂಗಮೇಶ ಮೆಣಸಿನಕಾಯಿ ಕೂಡ ರೈಲ್ವೆ ಉದ್ಯೋಗಿಯ ಪುತ್ರರಾಗಿದ್ದು, ಬಿಡುಗಡೆ ಮಾಡುತ್ತಿರುವ ಕೇಂದ್ರ ಸಚಿವ ಜೋಶಿ ಅವರೂ ರೈಲ್ವೆ ಉದ್ಯೋಗಿಯ ಪುತ್ರ ಎಂಬುದು ವಿಶೇಷ.
ಪತ್ರಿಕಾಗೋಷ್ಠಿಯಲ್ಲಿ ಅಲ್ಫ್ರೆಡ್ ಮಿರಾಂಡಾ ಅವರೇ ಪುಸ್ತಕ ಬಿಡುಗಡೆ ವಿವರ ನೀಡಿದರು. ಉದ್ಯಮಿಗಳಾದ ಅಪ್ಪಾಸಾಹೇಬ ಕಟ್ಟಿ, ಪ್ರಕಾಶ ಹೆಗಡೆ, ಒಕೆಲಿ,ಅಂಜುಮನ್,
ಸುನಿಲ್ ನಲವಡೆ, ಸತೀಶ ಡಬೀರ,
ನಿನಾದ ಭಾಗವತ,ಸಂಜೀವ ಕುಲಕರ್ಣಿ ಇತರರು ಇದ್ದರು.