*ಸುಮಾರು ಐದು ಗಂಟೆ ಸಾಗಿದ ಅದ್ಧೂರಿ ಮೆರವಣಿಗೆ* / *ಖಾಕಿ ಬಿಗಿ ಭದ್ರತೆ*
ಹುಬ್ಬಳ್ಳಿ: ನಗರದ ಈದಗಾ ( ರಾಣಿ ಚೆನ್ನಮ್ಮ) ಮೈದಾನದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶನ ಮೂರ್ತಿಯ ವಿಸರ್ಜನೆಯ ಭವ್ಯ ಮೆರವಣಿಗೆ ಸಾವಿರಾರು ಭಕ್ತರೊಂದಿಗೆ ಸಾಗಿ ಸಂಜೆ 5-30ರ ನಂತರ ಸಂಪನ್ನಗೊಂಡಿತು.
ಬೆಳಿಗ್ಗೆ 11-30ರ ಸುಮಾರಿಗೆ ಆರಂಭವಾದ ಸುಮಾರು ಒಂದು ಕಿಲೋಮೀಟರ್ ಅಂತರ ಮೆರವಣಿಗೆ ಸಾಗಲು ಸುಮಾರು ಐದು ಗಂಟೆಗೂ ಹೆಚ್ಚು ಕಾಲ ತೆಗೆದುಕೊಂಡು ಇಂದಿರಾ ಗಾಜಿನ ಮನೆಯ ಆವರಣದ ಬಾವಿಯಲ್ಲಿ ವಿಸರ್ಜನೆ ಆಗುವುದರೊಂದಿಗೆ ನಿರ್ವಿಘ್ನವಾಗಿ ಮುಕ್ತಾಯಗೊಂಡಿತು. ವಿಧಾನ ಪರಿಷತ್ ಸದಸ್ಯ ಮತ್ತು ದಕ್ಷಿಣದ ಫೈರ್ ಬ್ರಾಂಡ್ ಸಿ.ಟಿ.ರವಿ ಗಣೇಶ ಮೂರ್ತಿಗೆ ಮಾಲಾರ್ಪಣೆ ಮಾಡಿ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು .
ಶಾಸಕರಾದ ಮಹೇಶ ಟೆಂಗಿನಕಾಯಿ,ಪ್ರದೀಪ ಶೆಟ್ಟರ್, ಮೇಯರ್ ರಾಮಣ್ಣ ಬಡಿಗೇರ, ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಸುಭಾಷ್ ಸಿಂಗ್ ಜಮಾದಾರ, ಪಾಲಿಕೆ ಸದಸ್ಯರಾದ ರಾಜಣ್ಣ ಕೊರವಿ, ಸಂತೋಷ ಚವ್ಹಾಣ, ಶಿವು ಮೆಣಸಿನಕಾಯಿ, ಮಾಜಿ ಶಾಸಕ ಅಶೋಕ ಕಾಟವೆ, ಯುವ ಮುಖಂಡ ವೆಂಕಟೇಶ್ ಕಾಟವೆ ಮುಂತಾದವರು ಇದ್ದರು.
ರಾಣಿ ಚೆನ್ನಮ್ಮ ಮೈದಾನ ಗಜಾನನೋತ್ಸವ ಮಹಾಮಂಡಳ ಅಧ್ಯಕ್ಷ ಸಂಜು ಬಡಸ್ಕರ, ಸ್ವಾಗತ ಸಮಿತಿ ಅಧ್ಯಕ್ಷ ಡಾ.ಚಿಗರುಪಾಟಿ ವಿ.ಎಸ್.ವಿ.ಪ್ರಸಾದ ನೇತೃತ್ವದಲ್ಲಿ ವಿಶೇಷ ಪೂಜೆ ಜರುಗಿ, ಸವಾಲ್ ನಂತರ ಮೆರವಣಿಗೆಗೆ ಚಾಲನೆ ನೀಡಲಾಯಿತು.
ಡೋಲು, ಜಾಂಝ್, ಡಿಜೆ ಮೇಳಗಳು ಮೆರವಣಿಗೆ ಮೆರಗು ನೀಡಿದ್ದವಲ್ಲದೇ, ಗಣೇಶ ಮಹಾರಾಜಕಿ ಜೈ, ಜೈ ಶ್ರೀರಾಮ, ಜೈ ಜೈ ಶ್ರೀರಾಮ, ಹನುಮಾನ ಮಹಾರಾಜಕೀ ಜೈ ಎಂಬ ಘೋಷಣೆ ಚೆನ್ನಮ್ಮ ವರ್ತುಲದಲ್ಲಿ ಮಾರ್ದನಿಸಿತು. ವಿಸರ್ಜನೆ ಹಿನ್ನೆಲೆಯಲ್ಲಿ ವ್ಯಾಪಕ ಪೊಲೀಸ್ ಬಂದೋಬಸ್ತ ಏರ್ಪಡಿಸಲಾಗಿತ್ತು.
ಬಿಜೆಪಿ, ಆರ್ಎಸ್ಎಸ್, ಹಿಂದೂ ಜಾಗರಣ ವೇದಿಕೆ, ಶ್ರೀರಾಮ ಸೇನೆ, ವಿಹೆಚ್ಪಿ ಸೇರಿದಂತೆ ವಿವಿಧ ಹಿಂದೂ ಸಂಘಟನೆಗಳ ಕಾರ್ಯಕರ್ತರು ಹಾಗೂ ಭಕ್ತರು ಪಾಲ್ಗೊಂಡಿದ್ದರು.
ಬೆಳಿಗ್ಗೆ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ ಸೇರಿ ಅನೇಕ ಗಣ್ಯರು ಈದಗಾ ಗಣೇಶನ ದರ್ಶನ ಪಡೆದು ಮೆರವಣಿಗೆಯಲ್ಲಿ ಪಾಲ್ಗೊಂಡರು.
ಈದಗಾ ಗಣೇಶ ವಿಸರ್ಜನೆ ಹಿನ್ನೆಲೆಯಲ್ಲಿ ನಗರದ ಮುಖ್ಯ ರಸ್ತೆಗಳಲ್ಲಿ ವಾಹನ ಸಂಚಾರ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿತ್ತು.ಮೊದಲೆರಡು ವರ್ಷಗಳಿಗೆ ಹೋಲಿಸಿದರೆ ಮೆರವಣಿಗೆಯಲ್ಲಿ ಈ ಬಾರಿ ಭಕ್ತರ ಸಂಖ್ಯೆ ಸ್ವಲ್ಪ ಕಡಿಮೆಯಿತ್ತು.