*ಸರ್ಕಾರಿ ಶಾಲೆಗಳನ್ನು ಉನ್ನತಿಕರಿಸಿ , ಮಹಿಷಿ ವರದಿ ಅನುಷ್ಠಾನಗೊಳಿಸಿ*/*ಅಕ್ಷರ ಜಾತ್ರೆಯಲ್ಲಿ ಸಮ್ಮೇಳನಾಧ್ಯಕ್ಷ ಗೊ.ರು.ಚ. ಅಭಿಮತ/ ನುಡಿ ಹಬ್ಬಕ್ಕೆ ಜನಸಾಗರ*/ *ಸಿಎಂ ಸಿದ್ದರಾಮಯ್ಯ ಉದ್ಘಾಟನೆ*
ಮಂಡ್ಯ: ಸಕ್ಕರೆ ನಾಡಿನ ಹಿರಿಮೆಯ ಮಂಡ್ಯದಲ್ಲಿಂದು ಮೂರು ದಿನಗಳ ಕಾಲ 87ನೇ ಅಕ್ಷರ ಜಾತ್ರೆ ಆರಂಭಗೊಂಡಿದ್ದು ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿರುವ ಗೊ.ರು.ಚನ್ನಬಸಪ್ಪ ಸರ್ಕಾರಿ ಶಾಲೆಗಳನ್ನು ಉನ್ನತೀಕರಿಸಬೇಕು. ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ಕೈಂಕರ್ಯದಲ್ಲಿ ಉದ್ಯಮಿಗಳು, ಸ್ವಯಂ ಸೇವಾ ಸಂಸ್ಥೆಗಳು, ವಿದೇಶಿ ಕನ್ನಡಿಗರು ಕೈಜೋಡಿಸಬೇಕು ಎಂದು ಕರೆ ನೀಡಿದರು.
ಜನಪ್ರಧಿನಿಧಿಗಳಲ್ಲಿ, ಉನ್ನತ ಅಧಿಕಾರಿಗಳಲ್ಲಿ ಕನ್ನಡ ಭಾಷಾ ಪ್ರೇಮದ ಕೊರತೆ ಇದ್ದು, ಹಿಂದಿ ಭಾಷೆಯನ್ನು ರಾಷ್ಟ್ರ ಭಾಷೆ ಎಂಬುದನ್ನು ಪ್ರತ್ಯಕ್ಷ, ಪರೋಕ್ಷವಾಗಿ ಹೇರುವ ಹುನ್ನಾರವನ್ನು ಕೇಂದ್ರ ಸರ್ಕಾರಗಳು ಮಾಡುತ್ತಲೇ ಬಂದಿದ್ದು ಇದು ಅಪಾಯಕಾರಿ ಎಂದು ಹೇಳಿದರು.
ಸರೋಜಿನಿ ಮಹಿಷಿ ಸಮಿತಿ ವರದಿ ಇನ್ನೂ ಅನುಷ್ಠಾನಗೊಂಡಿಲ್ಲ. ಕೂಡಲೇ ಅನುಷ್ಠಾನಗೊಳಿಸಬೇಕು ಎಂದು ಅಭಿಪ್ರಾಯಪಟ್ಟರು.
ಬ್ಯಾಂಕ್, ಅಂಚೆ ಕಚೇರಿಗಳಲ್ಲಿ ಹಿಂದಿ ಭಾಷಿಕರು ತುಂಬಿ ಹೋಗಿದ್ದಾರೆ. ಕೇಂದ್ರ ಸರ್ಕಾರವು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹಿಂದಿಗೆ ಪ್ರಾಶಸ್ತ್ಯ ನೀಡುತ್ತಾ ಕನ್ನಡವನ್ನು ನಿರ್ಲಕ್ಷ್ಯ ಮಾಡುತ್ತಿದೆ. ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಿಡುವುದು ಸಂವಿಧಾನ ಅಥವಾ ಒಕ್ಕೂಟ ತತ್ವಕ್ಕೆ ವಿರೋಧಿ ಕ್ರಮವೇನಲ್ಲ ಎಂದು ಹೇಳಿದರು.
ಕನ್ನಡ ವಿಶ್ವವಿದ್ಯಾನಿಲಯಕ್ಕೆ ವಿಶೇಷ ಗಮನ ಹರಿಸಬೇಕು ಎಂದು ಕರೆ ನೀಡಿದ ಅವರು, ಕೇಂದ್ರ ರಾಜ್ಯಗಳ ಹಣಕಾಸು ಸಂಬಂಧದ ಕುರಿತು ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗಬೇಕು. ಕೇಂದ್ರ ಸರ್ಕಾರ ಸಂವಿಧಾನ ಮತ್ತು ಹಣಕಾಸು ತಜ್ಞರ ಒಂದು ವಿಶೇಷ ಆಯೋಗ ರಚಿಸಬೇಕು.ಕನ್ನಡಿಗರಿಗೆ ಉದ್ಯೋಗದ ಅವಕಾಶಗಳು ಹೆಚ್ಚು ದೊರೆಯುತ್ತಿಲ್ಲ. ನಿರುದ್ಯೋಗ ಯುವಜನತೆಯ ಬದುಕನ್ನು ದುರ್ಭರಗೊಳಿಸುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಸಮ್ಮೇಳನವನ್ನು ಉದ್ಘಾಟಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಆಡಳಿತದಲ್ಲಿ ಕನ್ನಡ ಭಾಷೆ ಬಳಸಲು ಸರ್ಕಾರ ಬದ್ಧವಾಗಿದೆ. ಸಮಗ್ರ ಕನ್ನಡ ಭಾಷಾ ಬಳಕೆಯನ್ನು ಜಾರಿಗೆ ತಂದಿದ್ದೇವೆ. ಕನ್ನಡಕ್ಕೆ ಮೊದಲ ಪ್ರಾಶಸ್ತ ಕಲ್ಪಿಸಲು ಸರ್ಕಾರ ಬದ್ಧವಾಗಿದೆ. ಎಷ್ಟೇ ಭಾಷೆ ಕಲಿತರು ಕೂಡ ಹೃದಯದ ಭಾಷೆ ಮಾತೃ ಭಾಷೆಯಾಗಿರುತ್ತದೆ ಎಂದರಲ್ಲದೇ ಹಿಂದಿ ಹೇರಿಕೆಯಿಂದ ಕನ್ನಡ ಸಹಿತ ಇತರ ಭಾಷೆಗಳ ದಮನಕ್ಕೆ ಕೆಂದ್ರ ಸರ್ಕಾರ ಯತ್ನಿಸುತ್ತಿದೆ ಎಂದರು.
ಆದಿ ಚುಂಚನಗಿರಿ ನಿರ್ಮಲಾನಂದನಾಥ ಸ್ವಾಮೀಜಿ ಸಾನಿಧ್ಯದಲ್ಲಿ ಸಮ್ಮೇಳನಾಧ್ಯಕ್ಷರಾದ ನಾಡೋಜ ಡಾ. ಗೊ.ರು.ಚನ್ನಬಸಪ್ಪ, ಹಿರಿಯ ಸಾಹಿತಿಗಳಾದ ಡಾ. ದೊಡ್ಡರಂಗೇಗೌಡ, ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತರಾದ ಡಾ ಚಂದ್ರ ಶೇಖರ ಕಂಬಾರ, ವೇದಿಕೆಯ ಮೇಲೆ ಇದ್ದರು.
ಸಚಿವರಾದ ಚೆಲುವನಾರಾಯಣಸ್ವಾಮಿ, ಡಾ ಹೆಚ್.ಸಿ.ಮಹದೇವಪ್ಪ, ಮುನಿಯಪ್ಪ, ಶಿವರಾಜ್ ತಂಗಡಗಿ, ಕರ್ನಾಟಕ ವಿಧಾನಸಭೆ ಅಧ್ಯಕ್ಷ ಯು.ಟಿ.ಖಾದರ, ಕಸಾಪ ಅಧ್ಯಕ್ಷ ಡಾ.ಮಹೇಶ ಜೋಶಿ, ಶಾಸಕರು ಹಾಗೂ ಗಣ್ಯರು ಉಪಸ್ಥಿತರಿದ್ದರು.
ಸಕ್ಕರೆ ನಗರಿ ಸಾಹಿತ್ಯ ಸಮ್ಮೇಳನಕ್ಕೆ ನಿರೀಕ್ಷೆಗೂ ಮೀರಿ ಜನ ಸಾಗರ ಹರಿದು ಬಂತು.
ಬೆಳಗ್ಗೆ ಸಮ್ಮೇಳನಾಧ್ಯಕ್ಷರಾದ ಗೊ.ರು.ಚನ್ನಬಸಪ್ಪ ಅವರ ಉಪಸ್ಥಿತಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಮ್ಮೇಳನ ಸ್ವಾಗತ ಸಮಿತಿಯ ಅಧ್ಯಕ್ಷರಾದ ಎನ್. ಚಲುವರಾಯಸ್ವಾಮಿ ಅವರು ರಾಷ್ಟ್ರಧ್ವಜಾರೋಹಣ ಮಾಡಿದರು. ರಾಜ್ಯದ ವಿವಿಧೆಡೆಯಿಂದ ಬಂದ ಅಲ್ಲದೇ ಹೊರ ರಾಜ್ಯದ ಕಲಾ ತಂಡಗಳು ಮೆರವಣಿಗೆಗೆ ಮೆರಗು ತಂದವು.
*ಇತರ ಮಹತ್ವದ ಸುದ್ದಿಗಳು*
1) ಪರಿಷತ್ತಿನಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ಗೆ ಆಕ್ಷೇಪಾರ್ಹ ಪದ ಬಳಕೆ ಮಾಡಿ ಬಂಧಿಸಲ್ಪಟ್ಟಿದ್ದ ಪರಿಷತ್ ಸದಸ್ಯ ಸಿ.ಟಿ.ರವಿಗೆ ಜನಪ್ರತಿನಿಧಿಗಳ ಕೋರ್ಟ ಷರತ್ತು ಬದ್ದ ಜಾಮೀನು ಮಂಜೂರು ಮಾಡಿದ್ದು ತಕ್ಷಣ ಬಿಡುಗಡೆ ಮಾಡುವಂತೆ ಆದೇಶ ನೀಡಿದೆ.
2) ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ವಿರುದ್ಧ ಬಿಜೆಪಿಯ ಪರಿಷತ್ ಸದಸ್ಯ ಸಿಟಿ ರವಿ ಅವ್ಯಾಚ ಶಬ್ದ ಬಳಸಿ ನಿಂದಿಸಿರುವುದನ್ನು ಖಂಡಿಸಿ ಹು.ಧಾ ಮಹಾನಗರ ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಅಧ್ಯಕ್ಷೆ ದೀಪಾ ನಾಗರಾಜ ಗೌರಿ ನೇತೃತ್ವದಲ್ಲಿ ಹುಬ್ಬಳ್ಳಿಯ ಸಂಗೋಳ್ಳೀ ರಾಯಣ್ಣ ವೃತ್ತದಲ್ಲಿ ರವಿಯವರ ಭಾವಚಿತ್ರಕ್ಕೆ ಚಪ್ಪಲಿ ಸೇವೆ ಮಾಡುವ ಮೂಲಕ ತಿಥಿ ಆಚರಿಸಿದರು. ಉಣಕಲ್ ಬ್ಲಾಕ್ ಕಾಂಗ್ರೆಸ್ಸಿಗರು ಪ್ರತಿಭಟನೆ ನಡೆಸಿದರು.
3) ಹು.ಧಾ.ಮಹಾನಗರ ಮತ್ತು ಧಾರವಾಡ ಗ್ರಾಮೀಣ ಬಿಜೆಪಿಯವರು ಸಿ.ಟಿ.ರವಿ ಬಂಧನ ಖಂಡಿಸಿ ಧಾರವಾಡದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.