*ಮನುಷ್ಯ ಪ್ರೀತಿಯ ಜನನಾಯಕ : ಸಿದ್ದರಾಮಯ್ಯ ಬಣ್ಣನೆ/ 85ರ ಸಂಭ್ರಮದಲ್ಲಿ ಅಭಿನಂದನೆಯ ಮಳೆ*
ಹುಬ್ಬಳ್ಳಿ : ಒಬ್ಬ ಉದ್ಯಮಿಯಾಗಿ, ರಾಜಕಾರಣಿಯಾಗಿ, ಕಲಾರಾಧಕರಾಗಿ ಅವರು ಎಲ್ಲರಿಗೂ ಬೆಲ್ಲದಚ್ಚು.ಕನ್ನಡದ ಪ್ರೀತಿಯ ಜನನಾಯಕ. ಚಿರಂತನ ಚಿಲುಮೆಯ ಸಾಂಸ್ಕೃತಿಕ ರಾಯಭಾರಿ.ಸಾಮಾಜಿಕ ಬದ್ಧತೆಯ ಅಪರೂಪದ ವ್ಯಕ್ತಿತ್ವದ ಚಂದ್ರಕಾಂತ ಗುರಪ್ಪ ಬೆಲ್ಲದ ಸಾಂಸ್ಕೃತಿಕ ಕಲೆಯ ನಗರ ಧಾರವಾಡದಲ್ಲಲ್ಲದೇ ಇಡೀ ರಾಜ್ಯಕ್ಕೆ ಚಿರಪರಿಚಿತ ಹೆಸರು. ಇಂದು ಅವರ 85ನೇ ಜನ್ಮದಿನದ ಸಮಾರಂಭ ಮತ್ತೊಮ್ಮೆ ಈ ಹಿರಿಯ ಚೇತನವನ್ನು ಭಾವ ಸಾಗರದ ಸಂಭ್ರಮದಲ್ಲಿ ಮಿಂದೇಳುವಂತೆ ಮಾಡಿತು.
ಧಾರವಾಡ ಬಳಿಯ ಅಂಬರೈ ಗಾರ್ಡನ್ನಲ್ಲಿ ಶನಿವಾರ ಸಂಜೆ ನಡೆದ ಅರ್ಥಪೂರ್ಣ ಸಮಾರಂಭದಲ್ಲಿ ಅವರ ಒಡನಾಡಿಗಳು, ಹಿತೈಷಿಗಳು, ರಾಜಕಾರಣಿಗಳು,ಕಲಾವಿದರು,ಸಾಹಿತಿಗಳು ಸೇರಿದಂತೆ ಜನಸಾಗರವೇ ನೆರೆದಿತ್ತು. ಅವರ ಒಡನಾಟದ ಬುತ್ತಿ ಬಿಚ್ಚಿದರು. ಅವರ ಸಾಧನೆಯ ಮೇಲೆ ಬೆಳಕು ಚೆಲ್ಲಿದರು. ಅಭಿನಂದನೆಗಳ ಮಳೆ ಸುರಿಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ “ಅಲ್ಲಮಲೋಕ”, ” ದೊಡ್ಡಹೊಳೆ ದಾಟಿದವರು”, “ಬೆಲ್ಲದಚ್ಚು” ಕೃತಿಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮನುಷ್ಯರನ್ನು ಜಾತಿ-ಧರ್ಮಗಳಾಚೆಗೆ ಪರಸ್ಪರ ಪ್ರೀತಿಸುವ, ಗೌರವಿಸುವ ಸಂಸ್ಕೃತಿಯನ್ನು ಚಂದ್ರಕಾಂತ ಬೆಲ್ಲದ್ ಅವರು ತಮ್ಮ ಬದುಕಿನಲ್ಲಿ ಆಚರಿಸಿಕೊಂಡು ಬಂದಿದ್ದಾರೆ ಎಂದು ತಮ್ಮ ಮತ್ತು ಬೆಲ್ಲದ್ ಅವರ ನಡುವಿನ ಬಾಂಧ್ಯವ್ಯವನ್ನು ಸ್ಮರಿಸಿದರು.
ತಾವು ಹಾಗೂ ಬೆಲ್ಲದ್ ಗೋಕಾಕ್ ಚಳವಳಿಯ ಒಡನಾಡಿಗಳು. ಬಸವಣ್ಣನವರ ಮನುಷ್ಯ ಪ್ರೀತಿ, ಜಾತಿ ತಾರತಮ್ಯ ವಿರೋಧಿ ವಿಚಾರಗಳಲ್ಲಿ ಬೆಲ್ಲದ್ ಅವರಿಗೆ ಅಪಾರ ನಂಬಿಕೆ ಇದೆ ಎಂದ ಅವರು, ಇನ್ನೊಬ್ಬರ ಮನಸ್ಸಿಗೆ ನೋವು ಮಾಡುವಂತಹ ಮಾತುಗಳನ್ನು ಯಾವತ್ತೂ ಆಡದ ಬೆಲ್ಲದ್ ಅವರು ಅತ್ಯುನ್ನತ ಮನುಷ್ಯ ಗೌರವವನ್ನು ಹೊಂದಿದ್ದು, ಇವರದ್ದು ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತಹ ಅಪರೂಪದ ವ್ಯಕ್ತಿತ್ವ ಹೊಂದಿದ್ದಾರೆ ಎಂದು ಅಪಾರವಾಗಿ ಮೆಚ್ಚುಗೆ ಸೂಚಿಸಿದರು.
ಚಂದ್ರಕಾಂತ ಬೆಲ್ಲದ್ ಅವರು ಉದ್ಯಮಶೀಲತೆ, ಮನುಷ್ಯ ಪ್ರೀತಿ, ಮೂಲಕ ವಿಶಾಲವಾಗಿ ಬೆಳೆದಿದ್ದಾರೆ. ಎಲ್ಲಾ ವರ್ಗದ ಜನರಿಂದ ಅಪಾರ ಪ್ರೀತಿ ಗಳಿಸಿ ಅತ್ಯಂತ ನಿಷ್ಠುರ ನ್ಯಾಯಪರವಾದ ಪ್ರಾಮಾಣಿಕತೆ ವ್ಯಕ್ತಿತ್ವ ಹೊಂದಿದ್ದಾರೆ ಎಂದು ಮೆಚ್ಚಿಕೊಂಡರು.
ಸಾನಿಧ್ಯ ವಹಿಸಿದ್ದ ಡಂಬಳದ ಜಗದ್ಗುರು ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳು, ಭಾಲ್ಕಿಯ ಹಿರೇಮಠ ಸಂಸ್ಥಾನದ ಶ್ರೀ ಮ.ಘ.ಚ.ಡಾ.ಬಸವಲಿಂಗ ಪಟ್ಟದೇವರು, ಧಾರವಾಡ ಮುರುಘಾಮಠದ ಮ.ನಿ.ಪ್ರ.ಡಾ.ಮಲ್ಲಿಕಾರ್ಜುನ ಮಹಾಸ್ವಾಮಿಗಳು ಸಿಹಿಯನ್ನೂ ಮೀರಿದ ಸಿರಿವಂತ ಎಂದು ಬಣ್ಣಿಸಿದರು.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಧಾರವಾಡ ಜಿಲ್ಲಾ ಉಸ್ತುವಾರಿ ಸಂತೋಷ್ ಲಾಡ್, ಶಾಸಕರಾದ ಪ್ರಸಾದ್ ಅಬ್ಬಯ್ಯ, ಶ್ರೀನಿವಾಸ ಮಾನೆ , ಮಹೇಶ್ ಟೆಂಗಿನಕಾಯಿ, ಬೆಲ್ಲದ ಅವರ ಪುತ್ರ ಅರವಿಂದ ಬೆಲ್ಲದ ಉಪಸ್ಥಿತರಿದ್ದರು.
ಅಧ್ಯಕ್ಷತೆಯನ್ನು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಗೋ.ರು.ಚನ್ನಬಸಪ್ಪ ಅವರು ವಹಿಸಿದ್ದರು.
ಸಾಹಿತಿಗಳಾದ ನಾ.ಮೊಗಸಾಲೆ, ಡಾ.ಶಂಭು ಬಳಿಗಾರ, ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಚಂದ್ರಕಾಂತ ಗುರಪ್ಪ ಬೆಲ್ಲದ, ಅಭಿನಂದನ ಗ್ರಂಥದ ಸಂಪಾದಕಾರದ ಸಾಹಿತಿ ರಂಜಾನ್ ದರ್ಗಾ, ಇತರೆ ಗ್ರಂಥಗಳ ಸಂಪಾದಕರಾದ ಪ್ರೊ ಶಶಿಧರ ತೋಡಕರ, ದಿವಾಕರ ಹೆಗಡೆ, ಶಂಕರ ಕುಂಬಿ ಮತ್ತು ಚಿತ್ರಕಲಾವಿದ ಚಂದ್ರು ಗಂಗೊಳ್ಳಿ ಸೇರಿ ಹಲವು ಪ್ರಮುಖರು ವೇದಿಕೆಯಲ್ಲಿದ್ದರು.
*ಕಾನೂನು ರೀತಿ ಕ್ರಮ*
ಬೆಲ್ಲದ ಕಾರ್ಯಕ್ರಮಕ್ಕೆ ಮೊದಲು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಸಿದ್ದರಾಮಯ್ಯ
ಬೆಳಗಾವಿ ವಂಟಮೂರಿ ಗ್ರಾಮದಲ್ಲಿ ಮಹಿಳೆಯ ಮೇಲಾದ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿಯ ಸತ್ಯಶೋಧನಾ ತಂಡ ಭೇಟಿ ನೀಡಿರುವ ಬಗ್ಗೆಪ್ರತಿಕ್ರಿಯೆ ನೀಡಿ, ಮಹಿಳೆಯ ಮೇಲೆ ದೌರ್ಜನ್ಯವಾಗಿದ್ದು, ಸರ್ಕಾರ ಕಾನೂನು ರೀತ್ಯ ಎಲ್ಲ ಕ್ರಮಗಳನ್ನು ತೆಗೆದುಕೊಂಡಿದೆ. ಗೃಹಸಚಿವರು ಆಸ್ಪತ್ರೆಯಲ್ಲಿ ಸಂತ್ರಸ್ಥೆಯನ್ನು ಭೇಟಿ ಮಾಡಿ ಸಾಂತ್ವನ ನೀಡಿ ಪರಿಹಾರ ನೀಡಲು ಕ್ರಮಕೈಗೊಳ್ಳಲಾಗಿದ್ದು, ಆರೋಪಿಗಳನ್ನು ತಕ್ಷಣ ಬಂಧಿಸಲಾಗಿದೆ ಎಂದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಈ ಪ್ರಕರಣದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ನ್ಯಾಷನಲ್ ಕ್ರೈಂ ಬ್ಯೂರೋ ರ ಪ್ರಕಾರ ಅವರ ಅವಧಿಯಲ್ಲಿ ಮಹಿಳಾ ದೌರ್ಜನ್ಯ ಪ್ರಕರಣಗಳು ಹೆಚ್ಚು ನಡೆದಿವೆ. ಉತ್ತರಪ್ರದೇಶದ ಬಿಜೆಪಿಯ ಶಾಸಕರೊಬ್ಬರು ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಅಪರಾಧಕ್ಕಾಗಿ 25 ವರ್ಷ ಜೈಲುಶಿಕ್ಷೆ ವಿಧಿಸಿದೆ. ಇದರ ಬಗ್ಗೆ ನಡ್ಡಾ ಅವರ ಪ್ರತಿಕ್ರಿಯೆ ಏನು ಎಂದು ಪ್ರಶ್ನಿಸಿದರು.
ಸಂಸತ್ ಭವನದಲ್ಲಿ ಭದ್ರತಾ ಲೋಪವಾಗಿರುವ ಬಗ್ಗೆ ಸಂಸತ್ತಿನ ವಿಪಕ್ಷಗಳು ರಾಜಕೀಯ ಮಾಡುತ್ತಿರುವುದಾಗಿ ಬಿಜೆಪಿಯವರ ಹೇಳಿಕೆಗೆ ಉತ್ತರಿಸುತ್ತಾ, ಸಂಸತ್ತಿನಲ್ಲಿ ಭದ್ರತಾ ಲೋಪವಾಗಿರುವುದು ಸತ್ಯ. ನಿಜವನ್ನು ಹೇಳಿದರೆ ರಾಜಕೀಯವಾಗುವುದಿಲ್ಲ ಎಂದರು.
ಜಾತಿ ಗಣತಿ ವರದಿ ಹೊರಬರಲು ಪ್ರಬಲ ಜಾತಿಯವರು ಅಡ್ಡಿಪಡಿಸುತ್ತಿರುವ ರೇ ಎಂಬ ಬಗ್ಗೆ ಪ್ರತಿಕ್ರಿಯೆ ನೀಡಿ, ಜಾತಿ ಗಣತಿ ವರದಿ ಇನ್ನೂ ಬಂದಿಲ್ಲ. ಯಾರಿಗೂ ಆ ವರದಿಯಲ್ಲಿರುವ ಅಂಶಗಳೇನು ಎಂಬ ಮಾಹಿತಿ ಇಲ್ಲ, ಕೇವಲ ಊಹೆಗಳ ಮೇಲೆ ಮಾತನಾಡುತ್ತಿದ್ದಾರೆ ಎಂದರು.