*ಸಿದ್ದರಾಮಯ್ಯ ರಾಜೀನಾಮೆ ನಿಶ್ಚಿತ – ಬಿಜೆಪಿ ರಾಜ್ಯಾಧ್ಯಕ್ಷರ ವಿಶ್ವಾಸ*
ಹುಬ್ಬಳ್ಳಿ: ಹುಬ್ಬಳ್ಳಿಗೆ ಇಂದು ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ನಿವಾಸಕ್ಕೆ ತೆರಳಿ ಪ್ರಸ್ತುತ ರಾಜಕೀಯ ವಿದ್ಯಮಾನಗಳ ಕುರಿತು ಕೆಲ ಕಾಲ ಗಹನ ಚರ್ಚೆ ನಡೆಸಿದರು.
ಕೇಂದ್ರ ಸಚಿವ ಕುಮಾರಸ್ವಾಮಿಗೂ ಪ್ರಾಸಿಕ್ಯೂಷನ್ ಭಯ ಆರಂಭವಾಗಿದ್ದು, ಅಲ್ಲದೇ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ ಬೆಂಬಲಿತರ ಬಂಡಾಯದ ಹಿನ್ನೆಲೆಯಲ್ಲಿ ಇಂದಿನ ಭೇಟಿ, ಗುಪ್ತ ಚರ್ಚೆ ಭಾರೀ ಕೂತೂಹಲಕ್ಕೆ ಕಾರಣವಾಗಿದೆ.
ಜೋಶಿ ಅವರು, ತಮ್ಮ ನಿವಾಸಕ್ಕೆ ಆಗಮಿಸಿದ ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವರಿಗೆ ಹೂ ಹಾರ, ಶಾಲು ಹಾಕಿ ಆತ್ಮೀಯವಾಗಿ ಬರಮಾಡಿಕೊಂಡರು.
*ಸಿಎಂ ಸಿದ್ದರಾಮಯ್ಯ ಮುಖವಾಡ ಕಳಚಿದೆ*
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ವಿಜಯೇಂದ್ರ ವಾಲ್ಮೀಕಿ ಮತ್ತು ಮೂಡಾ ಹಗರಣದಿಂದ ಸಿಎಂ ಸಿದ್ದರಾಮಯ್ಯ ಅವರ ಸಮಾಜವಾದಿ ಮುಖವಾಡ ಕಳಚಿ ಬಿದ್ದಿದೆ, ಭ್ರಷ್ಟಾಚಾರದ ಕಳಂಕ ಮೆತ್ತಿದೆ. ಪರಿಣಾಮ ತಮ್ಮ ಸ್ಥಾನಕ್ಕೆ ಅವರು ರಾಜೀನಾಮೆ ಕೊಡುತ್ತಾರೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧದ ಮೂಡಾ ಹಗರಣ ಪ್ರಸ್ತುತದಲ್ಲಿ ಕೇವಲ 14 ನಿವೇಶನಗಳಿಗೆ ಸೀಮಿತವಾಗಿ ಚರ್ಚೆ ನಡೆಯುತ್ತಿದೆ. ಆದರೆ, ಇದು ಇಷ್ಟಕ್ಕೇ ಸೀಮಿತವಾದದ್ದಲ್ಲ. 5000 ಕೋಟಿಗೂ ಮೀರಿದ ಸಾವಿರಾರು ನಿವೇಶನಗಳ ಬಹುದೊಡ್ಡ ಹಗರಣ ಎಂದು ವಿಜಯೇಂದ್ರ ಗುಡುಗಿದರು.
ಸಿಎಂ ತವರು ಜಿಲ್ಲೆಯಲ್ಲಿ ಬಡವರನ್ನು ತಲುಪಬೇಕಿದ್ಧ 5000 ಕೋಟಿ ಬೆಲೆ ಬಾಳುವ ಸಾವಿರಾರು ಮೂಡಾ ನಿವೇಶನಗಳು ರಿಯಲ್ ಎಸ್ಟೇಟ್ ಮಾಫಿಯಾ ಮತ್ತು ಕಾಂಗ್ರೆಸ್ ನಾಯಕರ ಪಾಲಾಗಿವೆ ಎಂದು ವಿಜಯೇಂದ್ರ ಗಂಭೀರ ಆರೋಪ ಮಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪತ್ನಿ ಹೆಸರಿನಲ್ಲಿ ಕಾನೂನು ಬಾಹಿರವಾಗಿ 14 ನಿವೇಶನಗಳನ್ನು ಪಡೆದಿದ್ದಾರೆ. ಆದರೆ, ಇದು 14 ನಿವೇಶನಕ್ಕೆ ಸೀಮಿತವಾದುದಲ್ಲ ಎಂದು ಪುನರುಚ್ಚರಿಸಿದರು ವಿಜಯೇಂದ್ರ.
ಸಿದ್ಧರಾಮಯ್ಯ ಅವರು ಸಿಎಂ ಆದ 18 ತಿಂಗಳಲ್ಲಿ ಇದೊಂದು ಬಹುದೊಡ್ಡ ಹಗರಣವಾಗಿದೆ. ಹಾಗಾಗಿ ಬಿಜೆಪಿ ಸಿಬಿಐ ತನಿಖೆಗೆ ಒತ್ತಾಯಿಸುತ್ತಲೇ ಬಂದಿದೆ ಎಂದರು.
ವಾಲ್ಮೀಕಿ ಅಭಿವೃದ್ಧಿ ನಿಗಮದ ಭ್ರಷ್ಟಾಚಾರದಲ್ಲಿ SIT ನಾಗೇಂದ್ರ ಮತ್ತು ಬಸವರಾಜ ದದ್ದಲ್ ಮೇಲೆ ಚಾರ್ಜ್ ಶೀಟ್ ಹಾಕಿದರೂ ಸಿಎಂ ಮತ್ತು ಡಿಸಿಎಂ ಇವರನ್ನು ರಕ್ಷಿಸಲು ಯತ್ನಿಸಿದರು. ಹಾಗಾಗಿ ವಾಲ್ಮೀಕಿ ಮತ್ತು ಮೂಡಾ ಹಗರಣ ಎರಡರಲ್ಲೂ SIT ತನಿಖೆಯಿಂದ ನ್ಯಾಯ ನಿರೀಕ್ಷೆ ಅಸಾಧ್ಯವೆಂದು ವಿಜಯೇಂದ್ರ ಹೇಳಿದರು.
*ಸಿಬಿಐ ತನಿಖೆಗೇ ವಹಿಸಬೇಕು:* ಸಿಎಂ ನೇತೃತ್ವದ ಸಿಂಗಲ್ ಮ್ಯಾನ್ ಎನ್ಕ್ ವೈರಿ ಕಮಿಷನ್, ಎಸ್ ಐಟಿಯಿಂದ ತನಿಖೆ ಸಾಧ್ಯವಿಲ್ಲ. ಹಾಗಾಗಿ ಮುಖ್ಯಮಂತ್ರಿ ಅವರು ಇದನ್ನು ಸಿಬಿಐ ತನಿಖೆಗೇ ವಹಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಲಿಂಗರಾಜ
ಪಾಟೀಲ್, ತಿಪ್ಪಣ್ಣ ಮಜ್ಜಗಿ. ವೀರಣ್ಣ ಸವಡಿ, ಸಂತೋಷ್ ಚವ್ಹಾಣ, ಪ್ರಭು ನವಲಗುಂದಮಠ, ವೆಂಕಟೇಶ್ ಕಾಟವ,ಮತ್ತಿತರರು ಇದ್ದರು.