ಹುಬ್ಬಳ್ಳಿ ಧಾರವಾಡ ಪಾಲಿಕೆಯಲ್ಲಿ ಉರಿಯಲಿದೆ ಹೊಸ ‘ಜ್ಯೋತಿ’ / ಪೂರ್ವ ಕ್ಷೇತ್ರಕ್ಕೆ ಕೈ ಗೆ ಬಂದ ತುತ್ತು ಬಾಯಿಗೆ ಬರಲಿಲ್ಲ*
ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ 24ನೆ ಪ್ರಥಮ ಪ್ರಜೆಯಾಗಿ ಕಮಲ ಪಡೆಯ 19ನೇ ವಾರ್ಡ ಸದಸ್ಯೆ ಜ್ಯೋತಿ ಪಾಟೀಲ್ ಹಾಗೂ ಉಪ ಮೇಯರ್ ಆಗಿ ಸೆಂಟ್ರಲ್ ಕ್ಷೇತ್ರದ ನಿಕಟಪೂರ್ವ ಅಧ್ಯಕ್ಷ ಸಂತೋಷ್ ಚವ್ಹಾಣ ಆಯ್ಕೆಯಾಗುವುದರೊಂದಿಗೆ ಶಾಸಕ ಅರವಿಂದ ಬೆಲ್ಲದ ಹಟ ಗೆದ್ದಂತಾಗಿದ್ದು , ಕೇಂದ್ರ ಸಚಿವ ಪ್ರಹ್ಲಾದ್ ಜೋಷಿಯವರ ಶಿಷ್ಯನಿಗೆ ಡೆಪ್ಯುಟಿ ಸಿಕ್ಕಂತಾಗಿದೆ.
ಇಲ್ಲಿನ ಪಾಲಿಕೆ ಸಭಾಭವನದಲ್ಲಿಂದು ಚುನಾವಣಾಧಿಕಾರಿ ಪ್ರಾದೇಶಿಕ ಆಯುಕ್ತ ಸಂಜಯ ಶೆಟ್ಟೆಣ್ಣವರ ಸಮ್ಮುಖದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಬಿಜೆಪಿಯ19 ನೇ ವಾರ್ಡಿನ ಸದಸ್ಯೆ ಜ್ಯೋತಿ ಪಾಟೀಲ47 ಮತಗಳನ್ನು ಪಡೆದು ಮಹಾಪೌರರಾಗಿ ಆಯ್ಕೆಯಾದರು. ಕಾಂಗ್ರೆಸ್ ಅಭ್ಯರ್ಥಿ ಸುವರ್ಣ ಕಲಕುಂಟಲಾ , ಎಐಎಂಐಎಂನ ವಹೀದಾ ಖಾನ್ ಸಹ ಸ್ಪರ್ಧೆ ಮಾಡಿದ್ದರು.
ನಂತರ ನಡೆದ ಉಪಮೇಯರ್ ಚುನಾವಣೆಯಲ್ಲಿ ನಲವತ್ತೊಂದನೇ ವಾರ್ಡಿನ ಸದಸ್ಯ ಚವ್ಹಾಣ ಸಹ 47 ಮತ ಪಡೆದು ಆಯ್ಕೆ ಆದರು. ಕಾಂಗ್ರೆಸ್ಸಿನ ಶಂಭು ಸಾಲಮನಿ ಸ್ಪರ್ಧೆ ಮಾಡಿದ್ದರು.
ಬಿಜೆಪಿಯಲ್ಲಿ ಮಹಾಪೌರರ ಸ್ಥಾನಕ್ಕೆ ಪೈಪೋಟಿಯಿದ್ದರೂ ಪಶ್ಚಿಮ ಶಾಸಕ ಅರವಿಂದ ಬೆಲ್ಲದ ಸಹಿತ ಎಲ್ಲರೂ ಮುಂದಿನ ಬಾರಿ ಮೇಯರ್ ಪಟ್ಟ ಪರಿಶಿಷ್ಟ ಮಹಿಳೆಗೆ ಮೀಸಲಿಟ್ಟ ಕಾರಣ ಯಾರೊಬ್ಬರೂ ಸ್ಪರ್ಧೆಗೆ ಅರ್ಹರಿಲ್ಲದ ಕಾರಣ ಧಾರವಾಡಕ್ಕೆ ನೀಡಲೆಬೇಕೆಂದು ಪಟ್ಟು ಹಿಡಿದ ಪರಿಣಾಮ ಪೂರ್ವ ಮತ್ತು ಸೆಂಟ್ರಲ್ ಕ್ಷೇತ್ರದ ಸದಸ್ಯರು ಮತ್ತೆ ನಿರಾಸೆ ಅನುಭವಿಸಿದರು. ರೇಸ್ ನಲ್ಲಿ ಇದ್ದ ಪೂರ್ವ ಕ್ಷೇತ್ರದ ಶೀಲಾ ಕಾಟ್ಕರ್, ಪೂಜಾ ಶೇಜವಾಡಕರ, ಸೆಂಟ್ರಲ್ ಕ್ಷೇತ್ರದ ಮೀನಾಕ್ಷಿ ವಂಟಮೂರಿ, ರೂಪಾ ಶೆಟ್ಟಿಯವರ ಕನಸು ನನಸಾಗಲಿಲ್ಲ.
ನಿನ್ನೆ ರಾತ್ರಿ ಆಗಮಿಸಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ನೇತೃತ್ವದಲ್ಲಿ ಸಭೆ ನಡೆದರೂ ಯಾವುದೇ ಅಂತಿಮ ನಿರ್ಧಾರ ಕೈಗೊಂಡಿರಲಿಲ್ಲ. ಇಂದು ಬೆಳಿಗ್ಗೆ ಶಾಸಕರುಗಳಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಮಹಾನಗರ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ ಎಲ್ಲರೂ ಸುದೀರ್ಘವಾಗಿ ಚರ್ಚೆ ನಡೆಸಿ ಹೆಸ ಪ್ರಕಟಿಸಿ ನಾಮಪತ್ರ ಸಲ್ಲಿಕೆಗೆ ಸೂಚನೆ ನೀಡಿದರು.
ಅಭ್ಯರ್ಥಿಗಳ ಘೋಷಣೆ ಮಾಡಿದ ನಂತರ ನಾಮಪತ್ತ ಸಲ್ಲಿಸಲು ಎಲ್ಲರೂ ಜತೆಯಾಗಿ ಬಂದರು. ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರ ಮತ್ತು ಉಪಮಹಾಪೌರ ಚುನಾವಣೆಗೆ ಪಾಲಿಕೆ ಸದಸ್ಯರು, ಲೋಕಸಭಾ ಸದಸ್ಯರು, ಶಾಸಕರು ಮತ್ತು ವಿಧಾನ ಪರಿಷತ್ತು ಸದಸ್ಯರು ಸೇರಿ ಒಟ್ಟು 90 ಜನ ಮತದಾರರು ಇದ್ದು, ಇಂದಿನ ಮಹಾಪೌರ ಮತ್ತು ಉಪಮಹಾಪೌರ ಚುನಾವಣೆಯಲ್ಲಿ 87 ಜನರು ಪಾಲ್ಗೊಂಡಿದ್ದರು. ಮೂರು ಜನ ಸದಸ್ಯರು ಗೈರು ಹಾಜರಾಗಿದ್ದರು.
ಹೆಚ್ಚುವರಿ ಪ್ರಾದೇಶಿಕ ಆಯುಕ್ತರಾದ ಎಸ್.ಎಸ್.ಬಿರಾದಾರ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರಾದ ರುದ್ರೇಶ ಘಾಳಿ ಅವರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.