*ವಿವಿಧ ಸಮಸ್ಯೆಗಳ ಬಗ್ಗೆ ಡಿಸಿಎಂಗೆ ಶೀಘ್ರ ಮನವಿ*
ಹುಬ್ಬಳ್ಳಿ: ಉತ್ತರ ಕರ್ನಾಟಕದ ವರ್ತಕರ, ಉದ್ಯಮಿಗಳ ಪ್ರಾತಿನಿಧಿಕ ಸಂಸ್ಥೆ ಹುಬ್ಬಳ್ಳಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಮಹಿಳಾ ಉದ್ದಿಮೆದಾರರ ಸಮಿತಿಯ ಅಡಿಯಲ್ಲಿ ವೃದ್ದಿ-2025 ಮಹಿಳಾ ದಿನಾಚರಣೆ ಮತ್ತು ಮಹಿಳಾ ಸಾಧಕಿಯರ ಸನ್ಮಾನವನ್ನು ದಿ. 4ರಂದು ಸಂಸ್ಥೆಯ ಸಭಾಭವನದಲ್ಲಿ ಆಯೋಜಿಸಿದೆ.
ಸಂಸ್ಥೆಯ ಅಧ್ಯಕ್ಷ ಎಸ್.ಪಿ.ಸಂಶಿಮಠ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿ,ಸೃಜನಶೀಲತೆ, ಸಂಪರ್ಕ ಮತ್ತು ಜಯಿಸಿ ಎಂಬ ವಿಷಯದ ಅಡಿಯಲ್ಲಿ ಮುಂದಿನ ಪೀಳಿಗೆಯ ಮಹಿಳಾ ಉದ್ಯಮಿಗಳು ಮತ್ತು ನಾಯಕಿಯರನ್ನು ಪ್ರೇರೇಪಿಸುವ ಜೊತೆಗೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಮಹಿಳಾ ಸಾಧಕರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಹುಬ್ಬಳ್ಳಿ ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ವೈಶಾಲಿ ಎಂ.ಎಲ್, ವಾಯುವ್ಯ ಸಾರಿಗೆ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಂಗಾ ಎಂ ಸೇರಿದಂತೆ ಮುಂತಾದವರು ಭಾಗವಹಿಸಲಿದ್ದಾರೆ.
ಕಿರಿಯ ಬೋಯಿಂಗ್ 777 ಪೈಲಟ್ ಆಗಿರುವ ಕ್ಯಾಪ್ಟನ್ ಝೋಯಾ ಆಗರವಾಲ್,2017ರ ಮಿಸ್ ಇಂಡಿಯಾ ಹಾಗೂ ಕಲಾವಿದೆ ಸಿಮ್ರಾನ್ ಅಹುಜಾ ಅವರು ಉದ್ಯಮಶೀಲತೆ , ಮಹಿಳೆಯರ ಅವಕಾಶ ಕುರಿತು ಮಾತನಾಡುವರೆಂದರು.
ರಾಯಚೂರು ಮೂಲದ ಬಸವತತ್ವ ಪ್ರಚಾರಕಿ ಗಿರಿಜಕ್ಕ ಧರ್ಮ ರೆಡ್ಡಿ, ವೈದ್ಯಕೀಯ ಕ್ಷೇತ್ರದ ಜ್ಯೋತಿ ಹಿರೇಮಠ, ಶಿಲ್ಪಾ ಬಯೋಲಾಜಿಕಲ್ ಸೊಸೈಟಿ ನಿರ್ದೇಶಕಿ ಕೆ.ಆರ್.ರಾಜಶ್ರೀ ಅವರನ್ನು ಸನ್ಮಾನಿಸಲಾಗುವುದು ಎಂದರು.
ಸಂಸ್ಥೆಯ ಗೌರವ ಕಾರ್ಯದರ್ಶಿ ರವೀಂದ್ರ ಬಳಿಗಾರ, ಜಂಟಿ ಗೌರವ ಕಾರ್ಯದರ್ಶಿ ಮಹೇಂದ್ರ ಸಿಂಘಿ ಉತ್ತರ ಕರ್ನಾಟಕದ ಅಭಿವೃದ್ಧಿ, ಕೈಗಾರಿಕಾ ಸಮಸ್ಯೆ, ಉದ್ಯಮಿಗಳಿಗೆ ಇ ಸ್ವತ್ತು ಸಿಗದೆ ತೊಂದರೆ, ಹುಬ್ಬಳ್ಳಿ ಧಾರವಾಡದ ಸಂಚಾರ ತೊಂದರೆ ಮುಂತಾದ ಸಮಸ್ಯೆಗಳ ಬಗ್ಗೆ ಶೀಘ್ರ ಡಿಸಿಎಂ ಹಾಗೂ ಸಚಿವರನ್ನು ಭೇಟಿಯಾಗಿ ಮನವಿ ಅರ್ಪಿಸುವುದಾಗಿ ಹೇಳಿದರು.
ಮಹಿಳಾ ಉದ್ಯಮಿದಾರರ ಸಮಿತಿ ಚೇರ್ಮನ್ ನೀಪಾ ಮೆಹ್ತಾ, ಸಹ ಚೇರಮನ್ ಪಲ್ಲವಿ ಮಲಾನಿ ಇತರರು ಇದ್ದರು.