*ಮೇ. 25ಕ್ಕೆ ಮತದಾನ / ಹಾಲಿಗಳಿಗೆ ಸೆಡ್ಡು ಹೊಡೆಯುವ ಯತ್ನದಲ್ಲಿ ಉಡಕೇರಿ ಬಣ*
ಧಾರವಾಡ : ಕನ್ನಡ ಕೈಂಕರ್ಯ ಕಾರ್ಯದಲ್ಲಿ ಶತಮಾನದ ಹಿರಿಮೆ ಹೊಂದಿರುವ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ನೂತನ ಆಡಳಿತ ಮಂಡಳಿ ಚುನಾವಣೆಗೆ ಮೇ. 25ರ ಮುಹೂರ್ತ ನಿಗದಿಯಾಗಿದ್ದು, ಹಾಲಿ ಅಧ್ಯಕ್ಷ, ಮಾಜಿ ಶಾಸಕ ಚಂದ್ರಕಾಂತ್ ಬೆಲ್ಲದ ಅವರು ಪುನಃ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡುವುದು ಖಚಿತವಾಗಿದ್ದು, ಅವರಿಗೆ ಮಾಜಿ ಶಾಸಕ, ಹಿರಿಯ ನ್ಯಾಯವಾದಿ ಮೋಹನ್ ಲಿಂಬಿಕಾಯಿ ಸೆಡ್ಡು ಹೊಡೆಯುವ ಸಾಧ್ಯತೆ ದಟ್ಟವಾಗಿದೆ.
ಈಗಾಗಲೇ ಬೆಂಬಲಿಗರ ಹಾಗೂ ಅಭಿಮಾನಿಗಳ ಸಭೆಯನ್ನೂ ಸಹ ಲಿಂಬಿಕಾಯಿ ನಡೆಸಿದ್ದು, ಒಂದೆರಡು ದಿನಗಳಲ್ಲಿ ನಿರ್ಧಾರ ಅಂತಿಮಗೊಳಿಸುವ ಸಾಧ್ಯತೆಗಳಿವೆ.
ದಿ. 9ರಿಂದ ನಾಮಪತ್ರ ಪ್ರಕ್ರಿಯೆ ಆರಂಭಗೊಳ್ಳಲಿದ್ದು, ಬೆಲ್ಲದ ಗುಂಪಿನಿಂದ ಹಾಲಿ ಇರುವ ಪದಾಧಿಕಾರಿಗಳು, ನಿರ್ದೇಶಕ ಮಂಡಳಿ ಸದಸ್ಯರು ಕಣಕ್ಕೆ ಇಳಿಯಲು ತಂಡ ಅಂತಿಮಗೊಂಡಿದೆ. ವೀರಶೈವ ಲಿಂಗಾಯತ ಮಹಾಸಭಾ ಮಾಜಿ ಅಧ್ಯಕ್ಷ ಗುರುರಾಜ್ ಹುಣಸೀಮರದ ಸಹ ಬೆಲ್ಲದ ಅವರ ವಿರುದ್ಧ ತೊಡೆ ತಟ್ಟಲು ಮುಂದಾಗಿದ್ದಾರೆ ಎನ್ನಲಾಗುತ್ತಿದ್ದರೂ ಅವರ ನಿರ್ಧಾರ ಸಹ ಇನ್ನೂ ಅಂತಿಮಗೊಂಡಿಲ್ಲ.
ಕವಿವ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಉಡಕೇರಿ ಈಗಾಗಲೇ ತಮ್ಮ ತಂಡ ಅಂತಿಮಗೊಳಿಸುತ್ತಿದ್ದು ಹಿರಿಯ ಪತ್ರಕರ್ತ ಮನೋಜ್ ಪಾಟೀಲ್, ಮಾರ್ತಾಂಡಪ್ಪ ಕತ್ತಿ, ಸಹಿತ ಹಲವಾರ ಹೆಸರು ಕೇಳಿ ಬಂದಿದೆ. ಮೋಹನ್ ಲಿಂಬಿಕಾಯಿ ಇದೇ ಬಣದ ಅಧ್ಯಕ್ಷ ಹುರಿಯಾಳಾಗುವ ಸಾಧ್ಯತೆಗಳಿವೆ.
ಕಳೆದ ಬಾರಿಯ 7545 ಮತದಾರರ ಪಟ್ಟಿಗೆ ಈ ಬಾರಿ 1600 ಹೊಸ ಮತದಾರರು ಸೇರ್ಪಡೆಯಾಗಿದ್ದರೂ ಸುಮಾರು ಎರಡು ಸಾವಿರ ಮೃತರ ಹೆಸರುಗಳು ಸಹ ಇರುವುದರಿಂದ ಏಳು ಸಾವಿರಕ್ಕೂ ಹೆಚ್ಚು ಮತದಾರರು ಮಾತ್ರ ಮತದಾನ ಮಾಡಬಹುದಾಗಿದೆ.
ಕವಿವಿ ಸಂಘದ ಅಧ್ಯಕ್ಷರಾಗಿ ಪಾಟೀಲ್ ಪುಟ್ಟಪ್ಪನವರ ಉತ್ತರಾಧಿಕಾರಿಯಾದ ಬೆಲ್ಲದ ವಿರುದ್ಧ ಲಿಂಬಿಕಾಯಿ ಕಣಕ್ಕೆ ಇಳಿದಲ್ಲಿ ಹಣಾಹಣಿ ತೀವ್ರ ರೋಚಕವಾಗುವುದು ನಿಶ್ಚಿತವಾಗಿದೆ.
ನಾಮಪತ್ರ ಸಲ್ಲಿಕೆಗೆ ಮೇ.13 ಅಂತಿಮ ದಿನವಾಗಿದ್ದು ತದನಂತರ ಉಭಯ ಬಣಗಳ ಹಣಾಹಣಿಯ ಸ್ಪಷ್ಟ ಚಿತ್ರಣ ದೊರೆಯಲಿದೆ. ದಿ.25ಕ್ಕೆ ಮತದಾನ ನಡೆದು 26ರಂದು ಫಲಿತಾಂಶ ಹೊರಬೀಳಲಿದೆ.