ಹುಬ್ಬಳ್ಳಿ: ಗದಗ, ಧಾರವಾಡ, ಕಲಬುರಗಿ ಜಿಲ್ಲೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿರುವ ಭ್ರಷ್ಟ ಅಧಿಕಾರಿಗಳ ಮನೆಗಳ ಮೇಲೆ
ಇಂದು ದಾಳಿ ಮಾಡಿದ್ದು ಪೇಡೆನಗರದ ಕರ್ನಾಟಕ ನೀರಾವರಿ ನಿಗಮದ ಮಲಪ್ರಭಾ ಪ್ರಾಜೆಕ್ಟ್ ಇಂಜಿನಿಯರ್ ಅಶೋಕ ವಾಸನದ ಹಾಗೂ ಗದಗ ನಗರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಡಿ.ಬಿ. ಪಾಟೀಲ ಬಲೆಗೆ ಬಿದ್ದಿದ್ದಾರೆ.
ಧಾರವಾಡದ ಲೋಕಾಯುಕ್ತ ಕಚೇರಿ ಬಳಿಯೇ ಕರ್ನಾಟಕ ನೀರಾವರಿ ನಿಗಮದ ಕಚೇರಿ ಇದ್ದು, ಅಲ್ಲಿಯಲ್ಲದೇ ಅಶೋಕ ವಾಸನದ ಅವರ ಬೆಳಗಾವಿಯಲ್ಲಿ ಮೂಲ ಮನೆ, ಬಾಗಲಕೋಟೆ ಜಿಲ್ಲೆಯ ಕಜ್ಜಿದೋಣಿ ಸೇರಿ, ಜಮಖಂಡಿ ಹಾಗೂ ಜಕನೂರಿನಲ್ಲೂ ಮನೆ ಹೊಂದಿದ್ದು ಅಲ್ಲಿಯೂ ದಾಳಿ ನಡೆಸಲಾಗಿದೆ.
ಗದಗ ಪಟ್ಟಣದ ಶಿವಾನಂದ ನಗರದಲ್ಲಿನ ಸಿಪಿಐ ಡಿ.ಬಿ. ಪಾಟೀಲ ವಾಸಿಸುತ್ತಿರುವ ಬಾಡಿಗೆ ಮನೆಯ ಮೇಲೆಯೂ ಪರಿಶೀಲನೆ ನಡೆದಿದೆ. ಅಲ್ಲದೆ, ಪಾಟೀಲರ ಮೂಲ ವಾಸಸ್ಥಳಗಳಾದ ಬಾಗಲಕೋಟೆ, ಜಮಖಂಡಿ ಮತ್ತು ಕೆರೂರ ಪ್ರದೇಶದಲ್ಲಿರುವ ಅವರ ಸ್ವಂತ ಮನೆಗಳ ಮೇಲೆಯೂ ಏಕಕಾಲದಲ್ಲಿ ತಪಾಸಣೆ ನಡೆದಿದೆ. ಪರಿಶೀಲನೆ ವೇಳೆ ದಾಖಲೆಗಳು, ಆಸ್ತಿ ಪಟ್ಟಿ, ಲ್ಯಾಪ್ಟಾಪ್, ಮೊಬೈಲ್, ಬ್ಯಾಂಕ್ ಪಾಸ್ಬುಕ್ಗಳು ಸೇರಿದಂತೆ ಪ್ರಮುಖ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.
ಲೋಕಾಯುಕ್ತ ಡಿವೈಎಸ್ಪಿ ಪುಷ್ಪಲತಾ ಅವರ ನೇತೃತ್ವವಿದ್ದು, ಅವರೊಂದಿಗೆ ಪಿ.ಎಸ್. ಪಾಟೀಲ, ಸಿಪಿಐ ಪರಶುರಾಮ ಕವಟಗಿ ಹಾಗೂ ಲೋಕಾಯುಕ್ತ ವಿಭಾಗದ ಇತರ ಅಧಿಕಾರಿಗಳು ಕೂಡ ಪಾಲ್ಗೊಂಡಿದ್ದಾರೆ.
ಬೆಂಗಳೂರಿನಲ್ಲಿ ಲೋಕಾಯುಕ್ತ ಅಧಿಕಾರಿಗಳು ಬಿಬಿಎಂಪಿ ಎಕ್ಸಿಕ್ಯೂಟಿವ್ ಇಂಜಿನಿಯರ್ ಪ್ರಕಾಶ್ ಮನೆ ಮೇಲೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ.ಕಚೇರಿ, ನಿವಾಸ ಸೇರಿದಂತೆ ನಗರದ ಒಟ್ಟು ಐದು ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.