*ಸಚಿವ ಲಾಡ್ ಕಾರ್ಯಕ್ಕೆ ಪ್ರವಾಸಿಗರಿಂದ ಕೃತಜ್ಞತೆ/ ಸರ್ಕಾರಿ ಗೌರವಗಳೊಂದಿಗೆ ಉಗ್ರರ ಗುಂಡಿಗೆ ಬಲಿಯಾದ ಮಂಜುನಾಥ, ಭೂಷಣ ಅಂತ್ಯಕ್ರಿಯೆ/ ಘಟನೆ ಖಂಡಿಸಿ ಹುಬ್ಬಳ್ಳಿಯಲ್ಲಿ ಅಂಜುಮನ್ ಪ್ರತಿಭಟನೆ*
ಬೆಂಗಳೂರು, : ಪಹಲ್ಗಾಂನಲ್ಲಿ ಪ್ರವಾಸಿಗರನ್ನು ಗುರಿಯಾಗಿರಿಸಿ ನಡೆದ ಭಯೋತ್ಪಾದಕರ ಹಿನ್ನೆಲೆಯಲ್ಲಿ 178 ಕನ್ನಡಿಗರನ್ನು ಕಾಶ್ಮೀರದಿಂದ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಇಂದು ಬೆಂಗಳೂರಿಗೆ ಸುರಕ್ಷಿತವಾಗಿ ಕರೆತಂದರು.
ಕಾಶ್ಮೀರದಲ್ಲಿ ನಡೆದ ದಾಳಿ ನಂತರ ರಾಜ್ಯ ಸರ್ಕಾರದ ಪರವಾಗಿ ಸಚಿವ ಲಾಡ್ ಅವರನ್ನು ಕನ್ನಡಿಗರ ರಕ್ಷಣಾ ಕಾರ್ಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳುಹಿಸಿದ್ದರು.
ಕಳೆದ ಎರಡು ದಿನಗಳಿಂದ ಅವಿರತವಾಗಿ, ಬಿಡುವಿಲ್ಲದೆ ಪಹಲ್ಗಾಂನಲ್ಲಿ ಸಚಿವ ಲಾಡ್ ಅವರು ಕನ್ನಡಿಗ ಪ್ರವಾಸಿಗರನ್ನು ಭೇಟ ಮಾಡಿ ಅವರಿಗೆ ರಾಜ್ಯಕ್ಕೆ ಮರಳಲು ಮಾಹಿತಿ ನೀಡಿ ವಿಮಾನ ನಿಲ್ದಾಣಕ್ಕೆ ಬರಲು ತಿಳಿಸಿದ್ದರು. ಇದೀಗ 178 ಕನ್ನಡಿಗ ಪ್ರವಾಸಿಗರು ಶ್ರೀನಗರ ವಿಮಾನ ನಿಲ್ದಾಣದಿಂದ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ.
ಪಹಲ್ಗಾಂನಲ್ಲಿ ಭಯೋತ್ಪಾದಕರ ದಾಳಿಯಲ್ಲಿ ಹತ್ಯೆಯಾದ ಕನ್ನಡಿಗರ ಕುಟುಂಬಗಳನ್ನೂ ಭೇಟಿ ಮಾಡಿದ್ದ ಸಚಿವ ಲಾಡ್ ಅವರು ಸಾಂತ್ವನ ಹೇಳಿ ಧೈರ್ಯ ತುಂಬಿದ್ದರು. ಬೇರೆ ಬೇರೆ ಸ್ಥಳಗಳಲ್ಲಿ ತಂಗಿದ್ದ ಪ್ರವಾಸಿಗರನ್ನು ಭೇಟಿ ಮಾಡಿ ತಾವು ಯಾವಾಗ ಕರ್ನಾಟಕಕ್ಕೆ ಮರಳಲು ವಿಮಾನದ ಟಿಕೆಟ್ ಗಳನ್ನು ಬುಕ್ ಮಾಡಿದ್ದೀರಿ ಎಂಬ ಮಾಹಿತಿಯನ್ನು ಕಲೆ ಹಾಕಿದ್ದರು. ವಿಮಾನದ ಟಿಕೆಟ್ ಬುಕ್ ಮಾಡದವರಿಗೆ ವಿಶೇಷ ವಿಮಾನದ ವ್ಯವಸ್ಥೆ ಮಾಡಿ ಲಾಡ್ ಅವರು ಪ್ರವಾಸಿಗರೊಂದಿಗೆ ಬೆಂಗಳೂರಿಗೆ ಬಂದಿದ್ದಾರೆ.
ಕಾಶ್ಮೀರದಿಂದ ಬೆಂಗಳೂರಿಗೆ ಮರಳಲು ವ್ಯವಸ್ಥೆ ಮಾಡಿದ ಸಚಿವ ಸಂತೋಷ್ ಲಾಡ್ ಅವರಿಗೆ ಪ್ರವಾಸಿಗರು ಕೃತಜ್ಷತೆ ಸಲ್ಲಿಸಿದ್ದಾರೆ. ಊರಿಗೆ ಮರಳುವ ಆತಂಕ ಮತ್ತು ಭಯದಲ್ಲಿ ಇದ್ದವರಿಗೆ ದೇವರಂತೆ ಸಚಿವರು ಬಂದು ಇಲ್ಲಿಗೆ ಕರೆತಂದರು. ಇವರ ಸಹಾಯವನ್ನು ಎಂದೂ ಮರೆಯಲಾಗದು ಎಂದು ಪ್ರವಾಸಿಗರು ಹೇಳಿದ್ದಾರೆ.
ರಾಜ್ಯದ ಹೊರಗೆ ಅವಘಡಗಳು ಸಂಭವಿಸಿದ ಸಂದರ್ಭದಲ್ಲಿ ಸಂತೋಷ್ ಲಾಡ್ ಅವರು ಭೇಟಿ ನೀಡಿ ಕನ್ನಡಿಗರ ರಕ್ಷಣಾ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ. ಕೆಲವು ವರ್ಷಗಳ ಹಿಂದೆ ಉತ್ತರಾಖಂಡದಲ್ಲಿ ಮೇಘಸ್ಫೋಟ ಸಂಭವಿಸಿದಾಗ,
ಒಡಿಶಾದಲ್ಲಿ ಭಾರಿ ರೈಲು ದುರಂತ, ವಯನಾಡಿನಲ್ಲಿ ಉಂಟಾಗಿದ್ದ ಜಳಪ್ರಳಯದ ವೇಳೆ ಸ್ವತಃ ಲಾಡ್ ಅವರು ಹೋಗಿದ್ದರು ಎಂಬುದನ್ನು ಸ್ಮರಿಸಬಹುದು.
ಉಗ್ರರ ದಾಳಿಗೆ ಬಲಿಯಾದ ಶಿವಮೊಗ್ಗದ ಮಂಜುನಾಥ ಮತ್ತು ಬೆಂಗಳೂರಿನ ಭರತ ಭೂಷಣ ಇವರುಗಳ ಮೃತದೇಹ ಬೆಳಿಗ್ಗೆ ಆಗಮಿಸಿದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆಯಂತೆ ಸಕಲ ಸರಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ದುಃಖದ ಮಡುವಿನಲ್ಲಿ ನೆರವೇರಿಸಲಾಯಿತು .
ಜೋಶಿ ಶ್ರದ್ಧಾಂಜಲಿ: ಪಹಲ್ಗಾಮ್ ಭಯೋತ್ಪಾದನಾ ದಾಳಿಗೆ ತುತ್ತಾದ ಮಲೆನಾಡಿನ ಮಗನಿಗೆ ಕೇಂದ್ರ ಸರ್ಕಾರದ ಪರವಾಗಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಶ್ರದ್ಧಾಂಜಲಿ ಸಲ್ಲಿಸಿದರು.
ಇದೇ ವೇಳೆ ಮಂಜುನಾಥ ರಾವ್ ಪತ್ನಿ ಪಲ್ಲವಿ ಮತ್ತು ಅವರ ತಾಯಿಗೆ ಸಾಂತ್ವನ ಹೇಳಿದ ಸಚಿವರು, ಕೇಂದ್ರ ಸರ್ಕಾರ ಮತ್ತು ಇಡೀ ದೇಶದ ಜನ ತಮ್ಮ ಜತೆಗಿದೆ ಎಂದು ಆತ್ಮಸ್ಥೈರ್ಯ ತುಂಬಿದರು. ಭಗವಂತ ಮಂಜುನಾಥ ಅವರ ಆತ್ಮಕ್ಕೆ ಚಿರಶಾಂತಿ ಕರುಣಿಸಲಿ ಹಾಗೂ ಕುಟುಂಬಕ್ಕೆ ದುಃಖ ಸಹಿಸಿಕೊಳ್ಳುವ ಶಕ್ತಿ ಭರಿಸಲಿ ಎಂದು ಪ್ರಾರ್ಥಿಸಿದರು. ಮಂಜುನಾಥ ಅವರ ಪಾರ್ಥೀವ ಶರೀರವನ್ನು ಶಿವಮೊಗ್ಗ ನಗರಕ್ಕೆ ತರುತ್ತಲೇ ನೆರೆದವರು “ಪಾಪಿ(ಕಿ)ಸ್ತಾನಕ್ಕೆ ದಿಕ್ಕಾರ-ಮಂಜುನಾಥ್ ರಾವ್ ಅಮರ್ ರಹೇ..” ಘೋಷಣೆ ಮೊಳಗಿಸಿದರು.
ಪಹಲ್ಗಾಮ್ನಲ್ಲಿ ಅಮಾಯಕ ಪ್ರವಾಸಿಗರ ಮೇಲೆ ಪಾಕಿಸ್ತಾನ ಪ್ರೇರಿತವಾಗಿ ಭಯೋತ್ಪಾದನಾ ದಾಳಿ ನಡೆದಿದ್ದು, ಭಾರತ ಇದಕ್ಕೆ ತಕ್ಕ ಪ್ರತೀಕಾರ ತೀರಿಸಿಕೊಳ್ಳುವುದು ಶತಸಿದ್ಧ ಎಂದು ಸಚಿವ ಪ್ರಲ್ಹಾದ ಜೋಶಿ ಘೋಷಿಸಿದರು.
ಸಂಸದ ಬಿ.ವೈ.ರಾಘವೇಂದ್ರ ಹಾಗೂ ಇತರರು ಇದ್ದರು.
*ಅಂಜುಮನ್ ಪ್ರತಿಭಟನೆ* : ಪಹಲ್ಗಾಮ್ ನರಮೇಧ ಖಂಡಿಸಿ ಹುಬ್ಬಳ್ಳಿಯಲ್ಲಿ ಅಂಜುಮನ್ ಇಸ್ಲಾಂ ಸಂಸ್ಥೆಯಿಂದ ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸಲಾಯಿತು.
ಮೌಲಾನಾ ಜಹಿರುದ್ದೀನ ಖಾಜಿ, ಮೌಲಾನಾ ನಯೀಮುದ್ದೀನ, ಅಧ್ಯಕ್ಷ ಎ.ಎಂ. ಹಿಂಡಸಗೇರಿ, ಗೌ. ಕಾರ್ಯದರ್ಶಿ ಬಶೀರ್ ಹಳ್ಳೂರ, ಇತರ ಪದಾಧಿಕಾರಿಗಳು ,ಮಹಾನಗರ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಹುಸೇನ್ ಹಳ್ಳೂರ, ಪಾಲಿಕೆ ಸದಸ್ಯರಾದ ಆರೀಫ್ ಭದ್ರಾಪುರ, ಇಕ್ಬಾಲ್ ನವಲೂರ, ಇಲಿಯಾಸ್ ಮನಿಯಾರ, ಇಮ್ರಾನ್ ಯಲಿಗಾರ, ಮುಖಂಡರಾದ ಹಾಜಿ ಅಲಿ ಹಿಂಡಸಗೇರಿ,ಮಹಮದ್ ಕೋಳೂರು ಸಹಿತ ಅನೇಕರಿದ್ದರು.