*ಕುಂದಗೋಳ ಕ್ಷೇತ್ರದ ಬರಗಾಲ ಬಿಚ್ಚಿಟ್ಟ ಬಿಜೆಪಿ ಶಾಸಕ*
ಹುಬ್ಬಳ್ಳಿ : ಸಹಕಾರ ಮತ್ತು ಕೃಷಿ ಕ್ಷೇತ್ರದಲ್ಲಿ ಕಳೆದ ಎರಡೂವರೆ ದಶಕಗಳಿಂದ ಸಕ್ರೀಯವಾಗಿ ಇರುವ ಕುಂದಗೋಳ ಕ್ಷೇತ್ರದ ಕಮಲ ಪಡೆ ಶಾಸಕ ಎಂ.ಆರ್.ಪಾಟೀಲ ಮೊದಲ ಬಾರಿ ವಿಧಾನಸಭೆಗೆ ಬಲಗಾಲಿಟ್ಟವರಾದರೂ ಅನ್ನದಾತರ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಸದನದಲ್ಲಿ ಗಮನ ಸೆಳೆದು ಮೊದಲ ಅಧಿವೇಶನದಲ್ಲೇ ತಮ್ಮ ಛಾಪು ಮೂಡಿಸಿದ್ದಾರೆ.
ಕುಂದಾನಗರಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಮೊದಲ ವಾರದ ಕೊನೆಯ ದಿನದಂದು (ಶುಕ್ರವಾರ) ಬರದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ರೈತರ ಸಂಕಷ್ಟಗಳಿಗೆ ಧನಿಯಾದರು.
ರೈತರಿಗೆ ನಮ್ಮ ಹೊಲ ನಮ್ಮ ರಸ್ತೆಯಲ್ಲಿ ಕೆಲಸ ನೀಡಿ ಗುಳೇ ಹೋಗುವುದನ್ನು ತಪ್ಪಿಸಿ ಎಂದರಲ್ಲದೇ ರೈತರ ಪ್ರತಿ ಎಕರೆಗೆ 25 ರಿಂದ 30 ಸಾವಿರ ನೀಡಿ ಅನ್ನದಾತನಿಗೆ ಜೀವ ನೀಡುವ ಕೆಲಸವಾಗಬೇಕೆಂದರು.
ಕುಂದಗೋಳ ಮತ್ತು ಹುಬ್ಬಳ್ಳಿ ತಾಲೂಕಿನ ಅನೇಕ ಹಳ್ಳಿಗಳನ್ನೊಳಗೊಂಡ ಕುಂದಗೋಳ ಕ್ಷೇತ್ರದ ರೈತರ ಸಮಸ್ಯೆಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರಲ್ಲದೇ ಈ ಬಾರಿಯ ಬರಗಾಲದ ಬವಣೆಗೆ ಜರಡಿ ಹಿಡಿದರಲ್ಲದೇ ರೈತರು ತಮ್ಮ ಜಾನುವಾರುಗಳನ್ನು ಸಾಕುವುದು ಕಷ್ಟವಾಗಿದ್ದು ಮೇವು ಬ್ಯಾಂಕ್ ಸ್ಥಾಪನೆ ಅನಿವಾರ್ಯವಾಗಿದೆ. ತಕ್ಷಣ ಅದನ್ನು ಸ್ಥಾಪಿಸಿ ಉಚಿತ ಮೇವು ನೀಡಬೇಕು ಎಂದು ವಿನಂತಿಸಿದರಲ್ಲದೇ ಕಳೆದ ಎರಡು ತಿಂಗಳ ಅವಧಿಯಲ್ಲಿ ತಮ್ಮ ಕ್ಷೇತ್ರದಲ್ಲಿ ನಾಲ್ವರು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಭೀಕರ ಬರಗಾಲದಿಂದ ಕುಡಿಯುವ ನೀರಿನ ಸಮಸ್ಯೆ ಇಡಿ ಜಿಲ್ಲೆಯಲ್ಲಿ ಕಂಡು ಬಂದಿದ್ದು ಕುಡಿಯುವ ನೀರಿಗಾಗಿ ಅನುದಾನವನ್ನೇ ಸರ್ಕಾರ ಇಟ್ಟಿಲ್ಲ. ಎಲ್ಲಾ ತಾಲೂಕುಗಳಿಗೆ ಟಾಸ್ಕಫೋರ್ಸನಲ್ಲಿ ಒಂದು ಕೋಡಿ ನೀಡಿ ಅಲ್ಲದೇ ಕಿಸಾನ್ ಸಮ್ಮಾನ ಅಡಿ ಪ್ರತಿ ರೈರಿಗೆ ನೀಡಲಾಗುತ್ತಿದ್ದುದು ನಿಂತು ಹೋಗಿದೆ.ಅತೀವೃಷ್ಟಿ ಆದಾಗ ಎನ್ ಡಿಆರ್ಎಫ್ ಮತ್ತು ಎಸ್ ಡಿಆರ್ ಎಫ್ ನಲ್ಲಿ ನೀಡಿದಂತೆ ಕಳೆದ ವರ್ಷ ನೀಡಿದಂತೆ ಪರಿಹಾರ ನೀಡಬೇಕು ಅಲ್ಲದೇ ತ್ರೀಫೇಸ್ನನ್ನು ರಾತ್ರಿ ಬದಲು ಹಗಲು ನೀಡಬೇಕು. ರಾತ್ರಿ ರೈತರು ಹೊಲಕ್ಕೆ ತೆರಳುವಾಗ ಹಾವು ಕಡಿದು ಸಾವನ್ನಪ್ಪಿದ ಉದಾಹರಣೆಯನ್ನೂ ನೀಡಿ ಸರ್ಕಾರದ ಮೇಲೆ ಒತ್ತಡ ಹಾಕಿದರು.
ಶಾಸಕರಾದಂದಿನಿಂದ ಕಾಲಿಗೆ ಚಕ್ರ ಕಟ್ಟಿಕೊಂಡು ಕ್ಷೇತ್ರದ ಪ್ರತಿ ಗ್ರಾಮಕ್ಕೂ ಭೇಟಿ ನೀಡಿ ಅಲ್ಲಿನ ಸಮಸ್ಯೆ ಆಲಿಸುತ್ತಿರುವ ಎಂ.ಆರ್.ಪಾಟೀಲರು ಅಧಿಕಾರಿಗಳಿಗೂ ಕಿವಿ ಹಿಂಡುತ್ತ ಜನ ಸಾಮಾನ್ಯರ ಸಮಸ್ಯೆಗೆ ಸ್ಪಂದಿಸದೇ ಇದ್ದಲ್ಲಿ ಜಾಗ ಖಾಲಿ ಮಾಡಿ ಎಂದು ಹೇಳುತ್ತಲೇ ಬಂದಿದ್ದು. ಇಂದು ಸದನದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರ ಆಪ್ತ ಬಳಗದಲ್ಲಿ ಗುರುತಿಸಿಕೊಳ್ಳುವ ಎಂ.ಆರ್.ಪಾಟೀಲರ ಅನ್ನದಾತನ ಬಗೆಗಿನ ಕಳಕಳಿ ಉಳಿದ ಶಾಸಕರ ಚಪ್ಪಾಳೆಗೂ ಕಾರಣವಾಯಿತು.