*ಪಾಕಿಸ್ತಾನ ವಿರುದ್ಧ ಯುದ್ದ ಮಾಡಲೇಬಾರದು ಎಂದು ಹೇಳಿಲ್ಲ : ಸಿಎಂ*
ಬೆಂಗಳೂರು : ಪಾಕಿಸ್ತಾನ ವಿರುದ್ಧ ತಕ್ಷಣಕ್ಕೆ ಯುದ್ಧ ಬೇಡ, ಆದರೆ ಯುದ್ಧ ಮಾಡಲೇಬಾರದು ಎಂದೇನೂ ತಾವು ಹೇಳಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಇಂದು ಇಸ್ರೋ ಮಾಜಿ ಅಧ್ಯಕ್ಷರಾಗಿದ್ದ ಡಾ: ಕೆ ಕಸ್ತೂರಿ ರಂಗನ್ ರವರ ಪಾರ್ಥಿವ ಶರೀರಕ್ಕೆ ಅಂತಿಮ ಗೌರವವನ್ನು ಸಲ್ಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಯುದ್ಧ ಬೇಡ ಎಂಬ ತಮ್ಮ ಹೇಳಿಕೆಯ ಬಗ್ಗೆ ಚರ್ಚೆಗಳಾಗುತ್ತಿರುವ ಬಗ್ಗೆ ಕೇಳಿದಾಗ,ಯುದ್ಧ ಅನಿವಾರ್ಯವಾದಾಗ ಮಾತ್ರ ಮಾಡಬೇಕು. ಯುದ್ಧದಿಂದ ಪರಿಹಾರವಾಗಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರದ ಭದ್ರತಾ ವ್ಯವಸ್ಥೆಯ ವೈಫಲ್ಯ ಸಹ ಇದೆ ಎಂದು ಹೇಳಿದ್ದೇನೆ. 28 ಜನ ಪ್ರವಾಸಿಗರು ಉಗ್ರರ ದಾಳಿಯಲ್ಲಿ ಅಸುನೀಗಿದ್ದಾರೆ. ಹಿಂದೆ ಪುಲ್ವಾಮಾ ದಾಳಿಯಲ್ಲಿ 40 ಸೈನಿಕರು ಮೃತಪಟ್ಟಿದ್ದರು. ಕೇಂದ್ರ ಸರ್ಕಾರ ಭದ್ರತೆಯನ್ನು ಸರಿಯಾದ ರೀತಿಯಲ್ಲಿ ಕೊಟ್ಟಿರಲಿಲ್ಲ ಎಂದರು.
ತಾವು ಓಲೈಕೆ ರಾಜಕಾರಣ ಮಾಡುತ್ತಾರೆ ಎಂಬ ಬಿಜೆಪಿ ಆರೋಪವನ್ನು ತಳ್ಳಿ ಹಾಕಿದ ಸಿಎಂ ಬಿಜೆಪಿ ಹೇಳುವುದೆಲ್ಲ ಸರಿಯಲ್ಲ ಎಂದರು.
ನಿನ್ನೆ ಸಿಎಂ ಹೇಳಿಕೆ ಪಾಕಿಸ್ತಾನದ ಮಾಧ್ಯಮಗಳಲ್ಲಿ ಪ್ರಕಟಗೊಂಡ ನಂತರ ಬಿಜೆಪಿ ಸಿದ್ದರಾಮಯ್ಯ ವಿರುದ್ಧ ಸಿಡಿದೆದ್ದು ರಾಜ್ಯ ಅಧ್ಯಕ್ಷ ವಿಜಯೇಂದ್ರ, ವಿಪಕ್ಷ ನಾಯಕb ಆರ್.ಅಶೋಕ, ಉಪ ನಾಯಕ ಅರವಿಂದ್ ಬೆಲ್ಲದ, ಶಾಸಕ ಮಹೇಶ ಟೆಂಗಿನಕಾಯಿ ಸೇರಿದಂತೆ ಹಲವು ಮುಖಂಡರು ಖಂಡಿಸಿದ್ದರು.
ಇನ್ನೊಂದೆಡೆ ಪ್ರಧಾನಿ ನರೇಂದ್ರ ಮೋದಿ ತಮ್ಮ ಮನ್ ಕೀ ಬಾತ್ ನಾ 121 ನೇ ಸಂಚಿಕೆಯಲ್ಲಿ ದೇಶದ 140 ಕೋಟಿ ಜನರ ಒಗ್ಗಟ್ಟು, ಸಂಕಲ್ಪದಿಂದ ಉಗ್ರರಿಗೆ ತಕ್ಕ ಪಾಠ ಕಲಿಸುವುದಾಗಿ ಗುಡುಗಿದ್ದಾರೆ.