ಹತ್ಯೆಗೆ ಬಳಸಿದ್ದ ಥಾರ್ ಸಹಿತ ನಾಲ್ವರ ಬಂಧನ
ಇನ್ನೋರ್ವ ಆರೋಪಿ ಪರಾರಿ/ *ಹಿಟ್ ಆ್ಯಂಡ್ ರನ್ ಅಲ್ಲ…. ಕೊಲೆ*
ಧಾರವಾಡ: ತಾಲೂಕಿನ ನರೇಂದ್ರ ಮಹಿಳೆ ಸಾವನ್ನಪ್ಪಿದ್ದು ರಸ್ತೆ ಅಪಘಾತದಲ್ಲಿ ಅಲ್ಲ,ಬದಲಾಗಿ ಕೊಲೆ ಎಂಬುದನ್ನು ಇದೀಗ ಗ್ರಾಮೀಣ ಠಾಣೆಯ ಪೊಲೀಸರು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಧಾರವಾಡ-ಸವದತ್ತಿ ರಸ್ತೆಯಲ್ಲಿ
ನರೇಂದ್ರದ ಲಲಿತಾ ಉದಯ ಹಾತರಕಿ ಎಂಬ ಮಹಿಳೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾಳೆ ಎಂದು ನಂಬಲಾಗಿತ್ತು. ಆದರೆ, ಲಲಿತಾಳನ್ನು ಆಕೆಯ ಪತಿ ಉದಯ ಸುಪಾರಿ ಕೊಟ್ಟು ಕೊಲೆಗೈದ ಸಂಗತಿ ಇದೀಗ ಬಯಲಾಗಿದೆ.
ಪತಿ ಉದಯನು ನಿಚ್ಚಣಕಿ, ದೊಡವಾಡ, ಬೆಳವಡಿ ಮತ್ತು ಗರಗ ಗ್ರಾಮದ ನಾಲ್ವರಿಗೆ ಹಣ ನೀಡಿದ್ದನು. ಬಳಿಕ ಅವರು ಥಾರ್ ಹಾಯಿಸಿ ತೀವ್ರವಾಗಿ ಗಾಯಗೊಳಿಸಿದ್ದರಿಂದ ಆಕೆ ಸಾವನ್ನಪ್ಪಿದ್ದಳು.
ನಂತರ ಪ್ರಕರಣದ ಬಗ್ಗೆ ಅನುಮಾನಗೊಂಡ ಪೊಲೀಸರು ತನಿಖೆ ಕೈಕೊಂಡಾಗ ಕೊಲೆ ಪ್ರಹಸನ ಬಯಲಾಗಿದೆ.
ಉದಯ ಮತ್ತು ಲಲಿತಾಳ ವಿವಾಹ ವಿಚ್ಛೇದನ ಪ್ರಕರಣ ನ್ಯಾಯಾಲಯದಲ್ಲಿದ್ದು, ಇದು ಪೊಲೀಸರ ಅನುಮಾನಕ್ಕೆ ಕಾರಣವಾಗಿತ್ತು ಎಂದು ಗೊತ್ತಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ವಶಕ್ಕೆ ಪಡೆದಿದ್ದು,ತಲೆಮರೆಸಿಕೊಂಡಿರುವ ಇನ್ನೋರ್ವ ಆರೋಪಿಗಾಗಿ ಶೋಧನೆ ನಡೆಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಿವಾನಂದ ಕಟಗಿ ಅವರ ಮಾರ್ಗದರ್ಶನದಲ್ಲಿ ಸಿಪಿಐ ಶಿವಾನಂದ ಕಮತಗಿ, ಪಿಎಸ್ ಐ ಪ್ರವೀಣ ಕೋಟಿ,
ಸಿಬ್ಬಂದಿಗಳಾದ ಮಹಾಂತೇಶ ನೆಟಗಲ್ಲ,ಮಲ್ಲಪ್ಪ ಡಾಬೊಳ್ಳಿ, ಶ್ರೀಧರ ಗುಗ್ಗರಿ, ಕುಮಾರ ಕಾಂಬಳೆ, ಎಚ್.ಎಂ.ನರಗುಂದ, ಎಂ.ಎಸ್.ಜೋಡಗೇರಿ, ಮಾರುತಿ ಕುಂಬಾರ, ವಿನಾಯಕ ಪಡಸಲಗಿ,
ಸೊಕೊ (ಎಸ್ ಓಸಿಓ) ಅಧಿಕಾರಿ ಸಂಜುಗೌಡ ಪಾಟೀಲ, ತಾಂತ್ರಿಕ ವಿಭಾಗದ ಉಲ್ಲಾಸ ದುದಾಳಕರ, ವಿಠ್ಠಲ ಡೆಂಗನವರ, ಕೃಷ್ಣ ವಿಭೂತಿ, ರಮೇಶ ಪಾಟೀಲ ತನಿಖೆ ಕೈಕೊಂಡಿದ್ದರು.



