*ಬಿಡನಾಳದ ನಿರಂಜನ ಹಿರೇಮಠ ನಿವಾಸಕ್ಕೆ ಸಿದ್ದರಾಮಯ್ಯ ಭೇಟಿ : ಸಾಂತ್ವನ / ಹಂತಕರಿಗೆ ಕಠಿಣ ಶಿಕ್ಷೆಗೆ ಪ್ರಯತ್ನದ ಭರವಸೆ*
ಹುಬ್ಬಳ್ಳಿ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚಿಗೆ ಅನಾಗರಿಕ ವಿಕೃತ ದುಷ್ಕರ್ಮಿಯಿಂದ ಕೊಲೆಯಾದ ಹುಬ್ಬಳ್ಳಿಯ ನೇಹಾ ಹಿರೇಮಠ್ ಅವರ ನಿವಾಸಕ್ಕೆ ಭೇಟಿ ನೀಡಿ,ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ತಂದೆ ನಿರಂಜನ ಹಾಗೂ ತಾಯಿ ಗೀತಾ ಸಹಿತ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ ಬಂಧುಗಳೊಂದಿಗೆ ಚರ್ಚಿಸಿದರು.
ಆರೋಪಿಗೆ ಆತನ ಕೃತ್ಯಕ್ಕೆ ಸರಿ ಸಮನಾದ ಕಾನೂನಿನ ಶಿಕ್ಷೆ ಕೊಡಿಸಲು ಸರ್ಕಾರ ಅಗತ್ಯ ಕ್ರಮ ತೆಗೆದುಕೊಳ್ಳುತ್ತದೆ. ಈಗಾಗಲೇ ಪ್ರಕರಣದ ವಿಚಾರಣೆಗೆ ವಿಶೇಷ ನ್ಯಾಯಾಲಯ ಸ್ಥಾಪಿಸಲಾಗಿದೆ. ತನಿಖೆ ಅತ್ಯಂತ ತ್ವರಿತವಾಗಿ ನಡೆಯುತ್ತಿದೆ ಎಂದು ಈ ಸಂದರ್ಭದಲ್ಲಿ ನಾಡ ದೊರೆ ಕುಟುಂಬಕ್ಕೆ ಅಭಯ ನೀಡಿದರು.
ಇಂಥಾ ದುಷ್ಕರ್ಮಿಗಳು ಯಾರೇ ಇದ್ದರೂ ಮತ್ತೆ ಇಂಥಾ ಹೀನ ಕೃತ್ಯಕ್ಕೆ ಕೈ ಹಾಕಬಾರದು ಎನ್ನುವ ಸ್ಪಷ್ಟ ಎಚ್ಚರಿಕೆ ನೀಡುವ ರೀತಿಯಲ್ಲಿ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಈ ವೇಳೆ ಮಾಧ್ಯಮಗಳೊಂದಿಗೆ ತಿಳಿಸಿದರು.
ಸಿಎಂ ಜತೆ ಸಚಿವರಾದ ಎಚ್.ಕೆ, ಪಾಟೀಲ, ಸಂತೋಷ್ ಲಾಡ್, ಸ್ಥಳೀಯ ಶಾಸಕ ಪ್ರಸಾದ ಅಬ್ಬಯ್ಯ, ಅಂಜುಮನ್ ಅಧ್ಯಕ್ಷ ಎ.ಎಂ. ಹಿಂಡಸಗೇರಿ, ಮಹೇಂದ್ರ ಸಿಂಘಿ , ಅಭ್ಯರ್ಥಿ ವಿನೋದ ಅಸೂಟಿ ಇತರರು ಇದ್ದರು.
ಬೆಳಿಗ್ಗೆ ಬೀದರ್ ನಲ್ಲಿ ಸಹ ಮಾಧ್ಯಮದವರೊಂದಿಗೆ ಮಾತನಾಡಿ ನೇಹಾ ಹೀರೆಮಠ ಕೊಲೆ ಪ್ರಕರಣವನ್ನು ಸರ್ಕಾರ ತೀವ್ರವಾಗಿ ಖಂಡಿಸುತ್ತದೆ ಹಾಗೂ ಆರೋಪಿಗೆ ಘೋರ ಶಿಕ್ಷೆ ವಿಧಿಸಲು ಸಿಐಡಿ ತನಿಖೆ ಚುರುಕುಗೊಳಿಸಲಾಗಿದೆ ಎಂದು ಸಿಎಂ ಹೇಳಿದ್ದು ಅದನ್ನೇ ಪುನರಾವರ್ತಿಸಿದರು.
ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಬಿಜೆಪಿ ಒತ್ತಾಯ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಬಿಜೆಪಿ ತನ್ನ ಅಧಿಕಾರದ ಅವಧಿಯಲ್ಲಿ ಯಾವುದಾದರೂ ಪ್ರಕರಣವನ್ನು ಸಿಬಿಐ ವಹಿಸಿದೆಯೇ? ಎಂದು ಪ್ರಶ್ನಿಸಿದರು. ನಾನು ಹಿಂದೆ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಪ್ರಕರಣಗಳನ್ನು ಸಿಬಿಐ ಗೆ ವಹಿಸಿದ್ದೇನೆ. ಅವರಿಗೆ ಕೇಳಲು ಯಾವ ನೈತಿಕ ಹಕ್ಕಿದೆ. ಇದರಲ್ಲಿ ರಾಜಕೀಯ ಮಾಡಬಾರದು. ನೇಹಾ ಹತ್ಯೆ ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಸರ್ಕಾರಿ ಅಭಿಯೋಜಕರೊಂದಿಗೆ ಮಾತನಾಡಿದ್ದು, ಸರ್ಕಾರ ಈಗಾಗಲೇ ಆರೋಪಿಯನ್ನು ಬಂಧಿಸಿದೆ., ಸಿಐಡಿ ತನಿಖೆ ನಡೆದಿದ್ದು ಆರೋಪಪಟ್ಟಿಯನ್ನು ತಯಾರಿಸಲಿದೆ ಎಂದರು.
*ರಾಜಕೀಯ ಬೇಡ*
ನೇಹಾ ತಂದೆಯವರು ತಮ್ಮ ಮಗಳ ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್ ಪಕ್ಷವೇ ರಾಜಕೀಯ ಮಾಡುತ್ತಿದೆ ಹಾಗೂ ಬಿಜೆಪಿಯವರ ಇದೇ ಧೋರಣೆಯನ್ನು ಹೊಂದಿರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ನೇಹಾ ಕೊಲೆ ಅನ್ಯಾಯವಾದುದು. ಅದನ್ನು ನಾವು ಖಂಡಿಸಿದ್ದೇವೆ.
ಇತರೆ ಪಕ್ಷಗಳು ಅದನ್ನು ರಾಜಕೀಯವಾಗಿ ಬಳಸಿಕೊಳ್ಳಬಾರದು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಕೊಡಿಸುವ ಪ್ರಮಾಣಿಕ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ ಎಂದರು.
ಇನ್ನೊಂದೆಡೆ ಸಿಐಡಿ ತಂಡ ತನಿಖೆ ಚುರುಕುಗೊಳಿಸಿದ್ದು.ಮೃತಳ ತಂದೆ, ತಾಯಿ ಹೇಳಿಕೆ ಪಡೆದಿದ್ದಾರೆ.