*ಹುಬ್ಬಳ್ಳಿಯಲ್ಲಿ ಜೋಶಿ ಹೇಳಿಕೆ/ ಸಾಂಸ್ಥಿಕ ಚುನಾವಣೆ ಮೂಲಕವೇ ಬಿಜೆಪಿ ಅಧ್ಯಕ್ಷರಾಯ್ಕೆ*
ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಎಐಸಿಸಿ ರಾಷ್ಟ್ರೀಯ ಒಬಿಸಿ ಸಲಹಾ ಮಂಡಳಿಗೆ ಅಧ್ಯಕ್ಷರನ್ನಾಗಿ ನೇಮಿಸಿರುವುದು ಮುಖ್ಯಮಂತ್ರಿ ಕುರ್ಚಿ ಖಾಲಿ ಮಾಡಿಸುವುದರ ಸಂಕೇತವಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪ್ರತಿಕ್ರಿಯಿಸಿದ್ದಾರೆ.
ಹುಬ್ಬಳ್ಳಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಹೈ ಕಮಾಂಡ್ ಸಿದ್ದರಾಮಯ್ಯ ಅವರಿಗೆ ಈ ಮೂಲಕ ಸಿಎಂ ಕುರ್ಚಿ ಖಾಲಿ ಮಾಡಿ ಎಂಬ ಪರೋಕ್ಷ ಸಂದೇಶ ನೀಡಿದಂತಿದೆ. ಕರ್ನಾಟಕದಲ್ಲಿ ತಮ್ಮ ಎರಡೂವರೆ ವರ್ಷದ ಅವಧಿ ಮುಗಿದಿದ್ದು, ದೆಹಲಿ ರಾಜಕಾರಣಕ್ಕೆ ಬನ್ನಿ ಎಂಬುದರ ಸಂಕೇತವಾಗಿದೆ ಎಂದು ಹೇಳಿದರು.
ಸಿಎಂಗೆ ರಾಜ್ಯದಲ್ಲೇ ಸರಿಯಾಗಿ ಸಂಬಾಳಿಸಲು ಸಾಧ್ಯವಾಗುತ್ತಿಲ್ಲ. ಇನ್ನು ಕಾಂಗ್ರೆಸ್ನ ಒಬಿಸಿ ರಾಷ್ಟ್ರೀಯ ಸಲಹಾ ಮಂಡಳಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅವರಿಗೆ ಒಳ್ಳೆಯದಾಗಲಿ ಎಂದರು.
ರಾಜ್ಯದಲ್ಲಿ ಸಿಎಂ ಆದಂಥವರನ್ನು ಈಗ ದಿಢೀರ್ ಆಗಿ ಒಮ್ಮಲೇ ರಾಷ್ಟ್ರೀಯ ಒಬಿಸಿ ಘಟಕದ ಜವಾಬ್ದಾರಿ ಕೊಡುತ್ತಿದೆ ಎಂದರೆ, ಅವರನ್ನು ಇಲ್ಲಿಂದ ಜಾಗಾ ಖಾಲಿ ಮಾಡಿಸುವುದೇ ಆಗಿದೆ. ಈ ನಡುವೆಯೂ ಸಿದ್ದರಾಮಯ್ಯ ಅವರು 5 ವರ್ಷ ನಾನೇ ಸಿಎಂ ಎಂದು ಜಿಗಿ ಜಿಗಿದು ಹೇಳುತ್ತಿರುವುದು ದೌರ್ಭಾಗ್ಯವೇ ಸರಿ ಎಂದು ಜೋಶಿ ಟೀಕಿಸಿದರು.
ಸಿಎಂ-ಡಿಸಿಎಂ ಹೊರಗಡೆ ನಾವು ಒಗ್ಗಟ್ಡಾಗಿ ಇದ್ದೇವೆ ಎಂಬಂತೆ ತೋರ್ಪಡಿಸಿಕೊಳ್ಳುತ್ತಿದ್ದಾರೆ. ಆದರೆ, ಅದರ ನಡುವೆಯೂ ಸಿದ್ದರಾಮಯ್ಯ ಅವರು 5 ವರ್ಷ ನಾನೇ ಸಿಎಂ ಎಂದು ಘೋಷಿಸಿಕೊಳ್ಳುತ್ತಿದ್ದಾರೆ. ಇದೀಗ ಎಐಸಿಸಿಯಿಂದ ಇದಕ್ಕೆ ತದ್ವಿರುದ್ಧ ಎನ್ನುವಂತೆ ಪರೋಕ್ಷ ಸಂದೇಶ ಬಂದಿದೆ. ಇವರಲ್ಲಿ ಸಮಸ್ಯೆ ಇರುವುದರಿಂದಲೇ ಈ ಬೆಳವಣಿಗೆಗಳು ಆಗುತ್ತಿದೆ ಎಂದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಮಹಿಳೆ, ಕರ್ನಾಟಕದಲ್ಲಿ ರಾಜ್ಯಾಧ್ಯಕ್ಷರ ಬದಲಾವಣೆ ಎನ್ನುವುದೆಲ್ಲ ಸದ್ಯಕ್ಕೆ ಊಹಾಪೂಹದ ಮಾತು ಎಂದು ಸಚಿವ ಪ್ರಲ್ಹಾದ ಜೋಶಿ, ಬಿಜೆಪಿಯಲ್ಲಿ ಸಾಂಸ್ಥಿಕ ಚುನಾವಣೆಗಳ ಮೂಲಕವೇ ಅಧ್ಯಕ್ಷರ ಆಯ್ಕೆ ನಡೆಯಲಿದೆ ಎಂದು ಸ್ಪಷ್ಟಪಡಿಸಿದರು.
ಹುಬ್ಬಳ್ಳಿ: ರಾಜ್ಯದಲ್ಲಿ ಹೆಚ್ಚು ಜನ ಹೃದಯಾಘಾತಕ್ಕೆ ಒಳಗಾಗುತ್ತಿರುವುದು ತೀವ್ರ ಆತಂಕದ ಸಂಗತಿ. ಹೃದಯಾಘಾತಕ್ಕೂ ಕೋವಿಡ್ ಲಸಿಕೆಗೂ ಸಂಬಂಧವಿಲ್ಲವೆಂದು ರಾಜ್ಯ ಸರ್ಕಾರ ನೇಮಿಸಿದ ತಜ್ಞರ ಸಮಿತಿಯೇ ವರದಿ ಸಲ್ಲಿಸಿದೆ. ಸಿಎಂ ಸಿದ್ದರಾಮಯ್ಯ ಅವರು ಈಗೇನು ಹೇಳುತ್ತಾರೆ? ಜೋಶಿ ತರಾಟೆಗೆ ತೆಗೆದುಕೊಂಡರು.
ರಾಜ್ಯದಲ್ಲಿ ಹೃದಯಾಘಾತ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸದೆ, ʼಕೋವಿಡ್ ಲಸಿಕೆಯೇ ಇದಕ್ಕೆ ಕಾರಣʼ ಎಂಬ ಸಿಎಂ ಹೇಳಿಕೆ ಬೇಜವಾಬ್ದಾರಿಯ ಪರಮಾವಧಿ. ಇದಕ್ಕಾಗಿ ಅವರು ದೇಶದ ಮತ್ತು ವಿಜ್ಞಾನಿಗಳ ಸಮೂಹದ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದರು.
ಸಿದ್ದರಾಮಯ್ಯ ಅವರಿಗೀಗ 74 ವರ್ಷ. ಅವರೂ ಕೋವಿಡ್ ಲಸಿಕೆ ತೆಗೆದುಕೊಂಡಿದ್ದಾರೆ ಅಲ್ಲವೇ? ಅಥವಾ ವಿದೇಶಿ ಲಸಿಕೆ ತೆಗೆದುಕೊಂಡಿದ್ದಾರಾ? ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.