*ಫಲಿತಾಂಶದಲ್ಲಿ ಸುಧಾರಣೆ : 23ನೇ ಸ್ಥಾನದಿಂದ 17ನೇ ಸ್ಥಾನಕ್ಕೆ*
ಧಾರವಾಡ : ಕಳೆದ ವರ್ಷ ಧಾರವಾಡ ಜಿಲ್ಲೆ ಪಿಯುಸಿ ದ್ವಿತೀಯ ವರ್ಷದ ಫಲಿತಾಂಶದಲ್ಲಿ 23ನೇ ಸ್ಥಾನದಲ್ಲಿದ್ದುದು ಈ ವರ್ಷ ಅದು ರಾಜ್ಯಕ್ಕೆ 17ನೇ ಸ್ಥಾನಕ್ಕೆ ಬಡ್ತಿ ಪಡೆದಿದೆಯಲ್ಲದೆ ರಾಜ್ಯಕ್ಕೆ ಕಲಾ ವಿಭಾಗದಲ್ಲಿ 2, ವಾಣಿಜ್ಯ ವಿಭಾಗದಲ್ಲಿ 2 ಮತ್ತು ವಿಜ್ಞಾನ ವಿಭಾಗದಲ್ಲಿ 5 ರ್ಯಾಂಕ್ಗಳನ್ನು ಜಿಲ್ಲೆಯ ವಿದ್ಯಾರ್ಥಿಗಳು ಪಡೆದುಕೊಂಡಿದ್ದು, ಒಟ್ಟು ಒಂಬತ್ತು ರ್ಯಾಂಕ್ಗಳು ಜಿಲ್ಲೆಗೆ ಬಂದಿದೆ.
ಮಿಷನ್ ವಿದ್ಯಾಕಾಶಿ ಯೋಜನೆಯ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಈ ಬಗ್ಗೆ ಪತ್ರಿಕಾಗೋಷ್ಠಿ ಜರುಗಿಸಿ ಫಲಿತಾಂಶದಲ್ಲಿ ಸುಧಾರಣೆಯಾಗಿದೆ ಎಂದರು.
ಕಳೆದ ವರ್ಷ ಜಿಲ್ಲೆಯ ಫಲಿತಾಂಶ ಕಲಾ ವಿಭಾಗದಲ್ಲಿ ಶೇ. 53 ಆಗಿದ್ದು ಈ ಸಲ ಶೇ. 55.21 ಆಗಿದೆ. ವಾಣಿಜ್ಯ ವಿಭಾಗದಲ್ಲಿ ಪ್ರಸ್ತುತ ವರ್ಷ ಫಲಿತಾಂಶ ಶೇ. 65.44 ರಷ್ಟಾಗಿದೆ. 6,849 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 4,482 ಜನ ಉತ್ತೀರ್ಣರಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಪ್ರಸ್ತುತ ವರ್ಷ ಶೇ. 84.29 ರಷ್ಟು ಫಲಿತಾಂಶವಾಗಿದೆ. 12,570 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ, ಅದರಲ್ಲಿ 10,595 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಜಿಲ್ಲೆಯ ಒಟ್ಟು ಫಲಿತಾಂಶ ಶೇ. 72.32 ರಷ್ಟಾಗಿದೆ ಎಂದರಲ್ಲದೆ ರ್ಯಾಂಕ್ ವಿಜೇತ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ ಸಿಇಓ ಅವರು ಸಿಹಿ ವಿತರಿಸಿ, ಅಭಿನಂದಿಸಿದರು.
ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ, ಹುಬ್ಬಳ್ಳಿ ತಾಲೂಕಿನ ಬೈರಿದೇವರಕೊಪ್ಪದ ವಿದ್ಯಾನಿಕೇತನ ವಿಜ್ಞಾನ ಪಿಯು ಕಾಲೇಜನ ವಿದ್ಯಾರ್ಥಿನಿ ಸುಮಿತಾ ಕಿಶೋರಕುಮಾರ ರಾಶಿಂಕರ್ ಅವರು 594 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ 6ನೇ ಸ್ಥಾನ ಪಡೆದಿದ್ದಾರೆ. ಇದೇ ಕಾಲೇಜಿನ ವಿದ್ಯಾರ್ಥಿ ಅಭಿನವ ರಾಮಪ್ಪ ಹಿರೇಕುಂಬಿ ಹಾಗೂ ಶ್ರೀಶೈಲ ಬಂಡಿವಾಡ ಮತ್ತು ಧಾರವಾಡದ ವಿದ್ಯಾ ಪಿ ಹಂಚಿಮನಿ ವಿಜ್ಞಾನ ಪಿಯು ಕಾಲೇಜಿನ ವಿದ್ಯಾರ್ಥಿನಿ ಕಾವೇರಿ ಕೆವತಿ ಅವರು 592 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ 8ನೇ ರ್ಯಾಂಕ್ ಪಡೆದಿದ್ದಾರೆ. ಈ ಮೂವರು ವಿದ್ಯಾರ್ಥಿಗಳು 8ನೇ ರ್ಯಾಂಕ್ ಹಂಚಿಕೊಂಡಿದ್ದಾರೆ.
ವಿದ್ಯಾ ಪಿ ಹಂಚಿಮನಿ ವಿಜ್ಞಾನ ಪಿಯು ಕಾಲೇಜಿನ ವಿದ್ಯಾರ್ಥಿ ಆಯುಷ್ಯ 591 ಅಂಕ ಪಡೆದು ಮೂಲಕ ರಾಜ್ಯಕ್ಕೆ 9ನೇ ರ್ಯಾಂಕ್ ಪಡೆದಿದ್ದಾರೆ.
ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಹುಬ್ಬಳ್ಳಿಯ ವಿದ್ಯಾನಗರದ ಎಸ್ಕೆ ಕಲಾ ಎಚ್ಎಸ್ಕೆ ವಿಜ್ಞಾನ ಪಿಯು ಕಾಲೇಜಿನ ಇನುಷ್ಕಾ ನಡುಗಡ್ಡಿ ಅವರು 594 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ 4ನೇ ಸ್ಥಾನ ಪಡೆದರೆ, ಹುಬ್ಬಳ್ಳಿ ಗೋಪನಕೊಪ್ಪದ ಸರಕಾರಿ ಪಿಯು ಕಾಲೇಜಿನ ವಿದ್ಯಾರ್ಥಿನಿ ನಾಗವೇಣಿ ಅಂತೋಣಿ ರಾಯಚೂರು ಅವರು 593 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ 5ನೇ ರ್ಯಾಂಕ್ ಪಡೆದಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಜಿಲ್ಲೆಯ ಇಬ್ಬರು ವಿದ್ಯಾರ್ಥಿಗಳಾದ ಹುಬ್ಬಳ್ಳಿ ವಿದ್ಯಾನಗರದ ಕೆಎಲ್ಇ ವಾಣಿಜ್ಯ ಪಿಯು ಕಾಲೇಜಿನ ಭುವಿ ಸಿ. ಶಹಾ ಅವರು 592 ಅಂಕಗಳನ್ನು ಮತ್ತು ಜೆಜಿ ವಾಣಿಜ್ಯ ಮತ್ತು ವಿಜ್ಞಾನ ಪಿಯು ಕಾಲೇಜಿನ ಶ್ರೇಯಾ ಜೋಷಿ ಅವರು 591 ಅಂಕ ಗಳಿಸಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.