*ನಾಳೆ ಅಧಿಕಾರ ಸ್ವೀಕಾರಕ್ಕೆ ಸಚಿವರು, ಶಾಸಕರ ದಂಡು*/
*ಪಕ್ಷನಿಷ್ಠೆಗೆ ಏಳು ಜಿಲ್ಲೆ ವ್ಯಾಪ್ತಿಯ ಪ್ರತಿಷ್ಠಿತ ಹುದ್ದೆ*
ಹುಬ್ಬಳ್ಳಿ : 2002ರಲ್ಲಿ ಅಸ್ಥಿತ್ವಕ್ಕೆ ಬಂದ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತದ ( HESCOM) ಮೊದಲ ಅಧ್ಯಕ್ಷರಾಗಿ ನಿಯುಕ್ತಿಗೊಂಡಿರುವ ಮಾಜಿ ಶಾಸಕ ಸೈಯದ್ ಅಜ್ಜಂಪೀರ್ ಖಾದ್ರಿಯವರು ನಾಳೆ ಅಧಿಕೃತವಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.
ಏಳು ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ( ಧಾರವಾಡ, ಹಾವೇರಿ, ಗದಗ, ವಿಜಯಪುರ,ಬಾಗಲಕೋಟೆ, ಬೆಳಗಾವಿ ಮತ್ತು ಉತ್ತರಕನ್ನಡ) ಹೆಸ್ಕಾಂ ಅಸ್ಥಿತ್ವಕ್ಕ ಬಂದು ಎರಡು ದಶಕಗಳು ಕಳೆದರೂ ಪ್ರತಿ ಸರ್ಕಾರಗಳು ಬಂದಾಗಲು ಸುಮಾರು ನಿರ್ದೇಶಕರನ್ನಷ್ಟೆ ನೇಮಿಸಲಾಗುತ್ತಿತ್ತು. ಆದರೆ ಮೊದಲ ಬಾರಿ ಕಂಪನಿ ನಿಯಮಿತದ ಮೆಮೊರೆಂಡಮ್ ಆಪ್ ಅಸೋಸಿಯೇಶನ್ ಮತ್ತು ಆರ್ಟಿಕಲ್ ಆಪ್ ಅಸೋಸಿಯೇಶನ್ ಕಲಂ 74(ಎ)ರಲ್ಲಿನ ಪ್ರದತ್ತ ಅಧಿಕಾರ ಚಲಾಯಿಸಿ ಅತ್ಯಂತ ಮಹತ್ವದ ಅಧ್ಯಕ್ಷ ಹುದ್ದೆಗೆ ಖಾದ್ರಿಯವರನ್ನು ನಿಯುಕ್ತಿಗೊಳಿಸಲಾಗಿದೆ.
ಮೊದಲ ಅಧ್ಯಕ್ಷರಿಗಾಗಿ ಪ್ರತ್ಯೇಕ ಕೊಠಡಿ ನವನಗರ ಹೆಸ್ಕಾಂ ಕೇಂದ್ರ ಕಚೇರಿಯಲ್ಲಿ ನಿರ್ಮಾಣವಾಗಿದ್ದು ನಾಳೆ ಅಧಿಕಾರ ಸ್ವೀಕಾರ ಸಮಾರಂಭಕ್ಕೆ ಐವರು ಸಚಿವರುಗಳು ಸೇರಿದಂತೆ ವಿವಿಧ ಶಾಸಕರು, ಮುಖಂಡರುಗಳ ದಂಡೇ ಹರಿದು ಬರಲಿದೆ.
ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ, ಶಿಗ್ಗಾಂವಿ ಕ್ಷೇತ್ರದಲ್ಲಿ ಅಹಿಂದ ಸಹಿತ ಎಲ್ಲ ಸಮುದಾಯದ ಬಲೆ ಹೆಣೆದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಖೆಡ್ಡಾಕ್ಕೆ ಕೆಡವಿದ ಲೋಕೊಪಯೋಗಿ ಸಚಿವ ಸತೀಶ ಜಾರಕಿಹೊಳಿ,ಖಾದ್ರಿ ನಾಮಪತ್ರ ಹಿಂದೆಗೆಸಿ ಅಲ್ಪಸಂಖ್ಯಾತ ಮತಗಳು ಚದುರದಂತೆ ಚದುರಂಗದಾಟವಾಡಿದ ಸಚಿವ ಜಮೀರ ಅಹ್ಮದ ಖಾನ, ಕಾನೂನು ಸಚಿವ ಎಚ್.ಕೆ.ಪಾಟೀಲ ಪೌರಾಡಳಿತ ಸಚಿವ ರಹೀಮ್ ಖಾನ್, ಸಿಎಂ ಕಾರ್ಯದರ್ಶಿ ನಜೀರ ಅಹ್ಮದ ಅಲ್ಲದೇ ಹೆಸ್ಕಾಂ ವ್ಯಾಪ್ತಿಯ ಜಿಲ್ಲೆಯ ಶಾಸಕರು ಅಲ್ಲದೇ ವಿವಿಧ ಧರ್ಮಗುರುಗಳು ಮತ್ತು ಸ್ವಾಮೀಜಿಗಳೂ ಈ ಸಮಾರಂಭಕ್ಕೆ ಸಾಕ್ಷಿಯಾಗಲಿದ್ದಾರೆ.
ಶಿಗ್ಗಾಂವಿ ಉಪಸಮರದಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿ ಯಾಸೀರ ಪಠಾಣ ಅವರನ್ನು ಬೆಂಬಲಿಸಿ ಸಲ್ಲಿಸಿದ್ದ ನಾಮಪತ್ರವನ್ನು ಹಿಂಪಡೆದು ಕಾಂಗ್ರೆಸ್ ಬಾವುಟ ಹಾರಿಸುವಲ್ಲಿ ಶಕ್ತಿ ಮೀರಿ ಶ್ರಮಿಸಿದ್ದ ಖಾದ್ರಿಯವರಿಗೆ ಕೊಟ್ಟ ಮಾತಿನಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅತ್ಯಂತ ಪ್ರತಿಷ್ಠೆಯ ಹೆಸ್ಕಾಂ ಅಧ್ಯಕ್ಷಗಿರಿ ನೀಡಿದ್ದು ಅದೂ ನಾಳೆ ಶುಭ ಶುಕ್ರವಾರವೆ ಅಧಿಕಾರ ಸ್ವೀಕರಿಸಲಿದ್ದಾರೆ.