ಬೆಂಗಳೂರು : ಮುಂಗಾರು ಅಧಿವೇಶನದ ಮೊದಲ ದಿನವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅತ್ಯಾಪ್ತ,
ಸಹಕಾರ ಸಚಿವ ಕೆ.ಎನ್. ರಾಜಣ್ಣ ತಮ್ಮ ಸಚಿವ ಸ್ಥಾನಕ್ಕೆ ದಿಢೀರ್ ರಾಜೀನಾಮೆ ನೀಡಿದ್ದು ರಾಜ್ಯಪಾಲರು ಸಹ ಅಂಗೀಕರಿಸಿದ್ದಾರೆ.
ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ರಾಜಣ್ಣ ನಡುವೆ ಕೆಲಕಾಲ ಮಾತುಕತೆ ನಡೆದು ಅಲ್ಲಿಯೇ ರಾಜಣ್ಣ ತಮ್ಮ ರಾಜೀನಾಮೆ ಪತ್ರವನ್ನು ಹಸ್ತಾಂತರಿಸಿದ್ದು, ತಕ್ಷಣವೇ ಅದನ್ನು ಸ್ವೀಕರಿಸಿದ್ದಾರೆ.
ರಾಜೀನಾಮೆ ಸ್ವೀಕರಿಸಿದ ಬಳಿಕ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಪಿಎಸ್ ಡಾ. ವೆಂಕಟೇಶಯ್ಯ ಅವರೊಂದಿಗೆ ಮುಖ್ಯಮಂತ್ರಿಗಳು ಕಚೇರಿಯಲ್ಲಿ ಪ್ರತ್ಯೇಕ ಸಭೆ ನಡೆಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯಪಾಲರಿಗೆ ರಾಜಣ್ಣ ರಾಜೀನಾಮೆ ಅಂಗೀಕಾರದ ಅಧಿಕೃತ ಪತ್ರವನ್ನು ರವಾನಿಸಿದ್ದು ಅದನ್ನು ಅಂಗೀಕರಿಸಿದ್ದು,ಇದರೊಂದಿಗೆ ಸಚಿವ ಸಂಪುಟದಲ್ಲಿ ಎರಡು ಸ್ಥಾನ ಖಾಲಿ ಉಳಿದಂತಾಗಿದೆ. ಈ ಹಿಂದೆ ನಾಗೇಂದ್ರ ರಾಜೀನಾಮೆ ನೀಡಿದ್ದರು. ರಾಹುಲ್ ಗಾಂಧಿ ಅವರ ವೋಟರ್ ಐಡಿ ವಿಚಾರದ ಹೋರಾಟದ ವಿರುದ್ಧ ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ರಾಜಣ್ಣ ಪಕ್ಷದ ವರಿಷ್ಠರ ಕೆಂಗಣ್ಣಿಗೆ ಗುರಿಯಾಗಿದ್ದರು. ಅದೇ ಅವರಿಗೆ ಮುಳುವಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸದನದಲ್ಲಿ ಈ ಕುರಿತು ಅಧಿಕೃತ ಹೇಳಿಕೆ ನೀಡಲಿದ್ದಾರೆ ಎಂದು ತಿಳಿದುಬಂದಿದೆ.
ರಾಜೀನಾಮೆ ನೀಡುವ ಮೊದಲು ರಾಜಣ್ಣ ಅವರೊಂದಿಗೆ ಹಿರಿಯ ಸಚಿವ ಡಾ. ಜಿ. ಪರಮೇಶ್ವರ್ ಅವರು ಮಾತುಕತೆ ನಡೆಸಿದ್ದು, ಈ ಸಭೆಯಲ್ಲಿ ರಾಜಣ್ಣ ಅವರ ಪುತ್ರ ರಾಜೇಂದ್ರ ಕೂಡ ಭಾಗವಹಿಸಿದ್ದರು. ಆದರೆ, ಪಕ್ಷದೊಳಗಿನ ತೀವ್ರ ಒತ್ತಡದಿಂದಾಗಿ ರಾಜೀನಾಮೆ ಅನಿವಾರ್ಯವಾಗಿತ್ತು. ಒಟ್ಟು 14 ತಿಂಗಳ ಅಂತರದಲ್ಲಿ ಇಬ್ಬರು ಸಚಿವರು ರಾಜೀನಾಮೆ ನೀಡಿದ್ದು ಇಬ್ಬರೂ ಪರಿಶಿಷ್ಟ ಪಂಗಡಕ್ಕೆ ಸೇರಿದವರು ಎಂಬುದು ವಿಶೇಷವಾಗಿದೆ.