ಕರ್ನಾಟಕ – ಜಮ್ಮು ಕಾಶ್ಮೀರ ನಡುವೆ ದೇಶಿಯ ಕ್ರಿಕೆಟ್ ಅಂತಿಮ ಪಂದ್ಯದ ಹಣಾಹಣಿ
ಹುಬ್ಬಳ್ಳಿ : ದೇಶಿಯ ಕ್ರಿಕೆಟ್ನಲ್ಲಿನ ಮೇರು ಟ್ರೋಫಿಯಾದ ರಣಜಿ ಟ್ರೋಫಿ ಫೈನಲ್ ಪಂದ್ಯವು ವಾಣಿಜ್ಯ ರಾಜಧಾನಿ ಹುಬ್ಬಳ್ಳಿಯ ರಾಜನಗರದ ಕೆ.ಎಸ್. ಸಿ.ಎ ಮೈದಾನದಲ್ಲಿ ನಡೆಯುವುದು ಖಚಿತವಾಗಿದೆ.
ಫೆ. 24ರಿಂದ ಐದು ದಿನಗಳ ಕಾಲ ನಡೆಯಲಿರುವ ಫೈನಲ್ ಪಂದ್ಯದ ಸ್ಥಳವನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿ ಅಂತಿಮವಾಗಿ ಪ್ರಕಟಿಸಬೇಕಿದ್ದು ಇಂದು ರಾತ್ರಿಯೊಳಗೆ ಅಧಿಕೃತವಾಗಿ ಪ್ರಕಟಿಸಲಿದೆ.

ಉತ್ತರಾಖಂಡದ ಎದುರು ಇಂದು ಮೊದಲ ಇನ್ನಿಂಗ್ಸ್ ಬೃಹತ್ ಮುನ್ನಡೆಯೊಂದಿಗೆ ಅಂತಿಮ ಪ್ರವೇಶಿಸಿರುವ ಕರ್ನಾಟಕ ಮತ್ತು ಮೊದಲ ಬಾರಿ ರಣಜಿ ಅಂತಿಮಕ್ಕೆ ಅವಕಾಶ ಪಡೆದಿರುವ ಜಮ್ಮು ಮತ್ತು ಕಾಶ್ಮೀರ ನಡುವಿನ ಮುಂಬರುವ ರಣಜಿ ಟ್ರೋಫಿ ಫೈನಲ್ ಪಂದ್ಯವು ಹುಬ್ಬಳ್ಳಿಯ ರಾಜನಗರದಲ್ಲಿರುವ ಕೆಎಸ್ಸಿಎ ಕ್ರೀಡಾಂಗಣದಲ್ಲಿ ನಡೆಯಲಿದೆ ಎನ್ನಲಾಗಿದೆ. ನಾಯಕ ದೇವದತ್ತ ಪಡೀಕ್ಕಲ್, ಕೆ.ಎಲ್.ರಾಹುಲ್, ಸ್ಮರಣ ರವಿಚಂದ್ರನ್ ಸಹಿತ ಹಲವರ ಬ್ಯಾಟಿಂಗ್ ವೈಭವ ಕರುನಾಡ ಗೆಲುವಲ್ಲಿ ಮಹತ್ವದ ಪಾತ್ರ ವಹಿಸಿದೆ.
ಬುಧವಾರ ಕಲ್ಯಾಣಿಯಲ್ಲಿ ಬಂಗಾಳವನ್ನು ಆರು ವಿಕೆಟ್ ಅಂತರದಿಂದ ಸೋಲಿಸುವ ಮೂಲಕ ಜಮ್ಮು ಮತ್ತು ಕಾಶ್ಮೀರವು ಅಂತಿಮಕ್ಕೆ ಪ್ರವೇಶ ಪಡೆದಿದೆ.
ಕಳೆದ ವರ್ಷ ಜೂನ್ 4ರಂದು ಆರ್ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತದಿಂದಾಗಿ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈವರೆಗೆ ಯಾವುದೇ ದೇಶೀಯ, ಐಪಿಎಲ್ ಮತ್ತು ಅಂತರರಾಷ್ಟ್ರೀಯ ಪಂದ್ಯಗಳನ್ನು ನಡೆಸಿಲ್ಲವಾಗಿದ್ದು ಇದೀಗ ಕರ್ನಾಟಕ ರಾಜ್ಯ ಸಚಿವ ಸಂಪುಟ ಐಪಿಎಲ್ ಪಂದ್ಯ ಆಯೋಜನೆಗೆ ಷರತ್ತುಬದ್ಧ ಅನುಮೋದನೆ ನೀಡಿದ ಹಿನ್ನೆಲೆಯಲ್ಲಿ ರಣಜಿ ಟ್ರೋಫಿ ಫೈನಲ್ ಸುಗಮವಾಗಿ ನಡೆಯುವಂತೆ ನೋಡಿಕೊಳ್ಳುವುದು ಕೆಎಸ್ ಸಿಎ ಮುಂದಾಗಿದ್ದು ಹುಬ್ಬಳ್ಳಿಯಲ್ಲಿ ನಡೆಯುವುದು ಖಚಿತವಾಗಿದ್ದನ್ನು ಯಾರೂ ಬಹಿರಂಗಪಡಿಸುತ್ತಿಲ್ಲವಾದರೂ ಕೆ.ಎಸ್. ಸಿ.ಎ ರಾತ್ರಿಯೊಳಗೆ ಅಂತಿಮಗೊಳಿಸಲಿದ್ದು ಹುಬ್ಬಳ್ಳಿಯ ಕ್ರಿಕೆಟ್ ಪ್ರೇಮಿಗಳಿಗೆ ದೇಶಿಯ ಕ್ರಿಕೆಟ್ನ ಮೇರು ಹಣಾಹಣಿ ನೋಡುವ ಅವಕಾಶ ಒದಗಿ ಬರಲಿದೆ.




