*ಜಾತ್ರೆ ಗದ್ದುಗೆಗೆ ದೇವಿ ಮಾರಿಕಾಂಬೆ/ನಾಳೆಯಿಂದ ಬಿಡಕಿಬೈಲಿನಲ್ಲಿ ಸೇವೆ / ಖಾಕಿ ಪಡೆಯಿಂದ ವ್ಯಾಪಕ ಬಂದೋಬಸ್ತ*
ಶಿರಸಿ : ರಾಜ್ಯದ ಅತಿದೊಡ್ಡ ಜಾತ್ರೆಯೆಂಬ ಹಿರಿಮೆಯ ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಯುವ ಶಿರಸಿ ಶ್ರೀ ಮಾರಿಕಾಂಬಾ ಜಾತ್ರೆ ವಿವಿಧ ವಿಧಿ ವಿಧಾನಗಳು ನಿನ್ನೆಯಿಂದ ಆರಂಭವಾಗಿದ್ದು ಮಾರಿಕಾಂಬಾ ದೇವಿಯ ರಥೋತ್ಸವ ಜನಸ್ತೋಮದ ಮಧ್ಯೆ ಇಂದು ನಡೆಯಿತು.
ದೇವಿಯ ರಥಕ್ಕೆ ರಸ್ತೆಯ ಇಕ್ಕೆಲದಲ್ಲಿ ನಿಂತು ಭಕ್ತರು ವೀಕ್ಷಿಸಿ ಬಾಳೆ ಹಣ್ಣು, ಹರಕೆ ಕೋಳಿ, ಕಡಲೆ ಎಸೆದು ಹರಕೆ ಸಲ್ಲಿಸಿದರು.
ಮೆರವಣಿಗೆಯಲ್ಲಿ ಆಗಮಿಸಿ ನಾಳೆ ( ದಿ. 21) ಬೆಳಗ್ಗೆ 5 ರಿಂದ ಬಿಡಕಿಬೈಲಿನ ಜಾತ್ರಾ ಗದ್ದುಗೆಯಲ್ಲಿ ಸೇವಾ ಸ್ವೀಕಾರ ಆರಂಭವಾಗಲಿದೆ.
ನಗರದ ಹೃದಯ ಭಾಗದಲ್ಲಿರುವ ಜಾತ್ರಾ ಗದ್ದುಗೆಯಲ್ಲಿ ಶ್ರೀದೇವಿಯ ದರ್ಶನಕ್ಕೆ ಸಾಗಲು ಭಕ್ತರಿಗೆ ಸರತಿ ಸಾಲಿಗಾಗಿ ಕಬ್ಬಿಣದ ಗ್ರಿಲ್ಗಳು, ಹಣ್ಣು ಕಾಯಿ ಸೇವೆಗಾಗಿ ವಿಶಾಲ ಜಾಗದಲ್ಲಿ ಹಣ್ಣು ಕಾಯಿ ಒಡೆಯುವ ಸೌಲಭ್ಯ, ಉಡಿ, ಸೀರೆ ಸೇವೆ ಹಾಗೂ ಇತರ ಸೇವೆಗಳಿಗಾಗಿ ಸೇವಾ ಕೌಂಟರ್ಗಳು, ಜಾತ್ರಾ ಮಂಟಪದಲ್ಲಿ ಆಡಳಿತ ಮಂಡಳಿಯ ಕಾರ್ಯಾಲಯ, ಸುರಕ್ಷತೆಗಾಗಿ ಪೋಲೀಸ್ ಚೌಕಿಗಳನ್ನು ನಿರ್ಮಿಸಲಾಗಿದೆ.
ದಿ. 27ರಂದು ಬೆಳಗ್ಗೆ 10-15ಕ್ಕೆ ಸೇವೆ ಮುಗಿಯಲಿದ್ದು, 10-41ಕ್ಕೆ ಜಾತ್ರೆ ಮುಗಿಯಲಿದೆ. ಏ.9ರಂದು ಬೆಳಗ್ಗೆ ಯುಗಾದಿಗೆ ದೇವಾಲಯದಲ್ಲಿ ದೇವಿಯ ಪುನರ್ ಪ್ರತಿಷ್ಠೆ ಆಗಲಿದೆ.
ಒಂದು ವಾರ ಕಾಲ ಲಕ್ಷಾಂತರ ಭಕ್ತರಿಗೆ ದೇವಿಯ ದರ್ಶನಕ್ಕೆ ಅವಕಾಶ ಇರಲಿದ್ದು, ಇದೇ ವೇಳೆ ಹರಕೆ ಸೇವೆ ಸಲ್ಲಿಸಲಾಗುತ್ತದೆ. ಜಿಲ್ಲೆ, ಹೊರ ಜಿಲ್ಲೆಗಳಿಂದ ಮಾತ್ರವಲ್ಲದೆ, ರಾಜ್ಯ ಹಾಗೂ ಹೊರ ರಾಜ್ಯಗಳಿಂದಲೂ ಭಕ್ತರು ಆಗಮಿಸಲಿದ್ದು, ಯಕ್ಷಗಾನ ಮೇಳಗಳ ಯಕ್ಷಗಾನ ಪ್ರದರ್ಶನ, ಅಲ್ಲದೇ ನಾಟಕ ಮಂಡಳಿಗಳು ಆಗಮಿಸಲಿದ್ದು ಭರಪೂರ ಮನರಂಜನೆ ನೀಡಲಿದೆ.
ಆರಾಧ್ಯ ದೇವಿ ಶಿರಸಿಯಮ್ಮ, ಮಾರಿಯಮ್ಮನನ್ನು ಜಾತ್ರಾ ಗದ್ದುಗೆಯಲ್ಲಿ ದರ್ಶನಕ್ಕೆ, ಹರಕೆ ಪೂಜೆ ಸಲ್ಲಿಕೆಗೆ ಭಕ್ತ ಸಾಗರವೇ ಹರಿದು ಬರಲಿದ್ದು ಸೂಕ್ತ ವ್ಯವಸ್ಥೆ ಕಲ್ಪಿಸಲು ಶ್ರೀದೇವಸ್ಥಾನದ ಆಡಳಿತ ಮಂಡಳಿ, ಬಾಬದಾರರ ಕುಟುಂಬಗಳು ಹಾಗೂ ತಾಲೂಕಾ ಆಡಳಿತ, ಸರ್ಕಾರದ ವಿವಿಧ ಇಲಾಖೆಗಳು ಹಗಲಿರುಳು ಶ್ರಮಿಸುತ್ತಿವೆ.
ಗದ್ದುಗೆ ಸುತ್ತ ಫೇಸ್ ಡಿಟೆಕ್ಟರ್ ಕ್ಯಾಮೆರಾ : ದೇವಿಯ ಜಾತ್ರಾ ಗದ್ದುಗೆ ಸುತ್ತ ಪೊಲೀಸ್ ಇಲಾಖೆ ಫೇಸ್ ಡಿಟೆಕ್ಟರ್ ಕ್ಯಾಮರಾ ಅಳವಡಿಸಿದ್ದು 180ಕ್ಕೂ ಹೆಚ್ಚು ಅಧಿಕ ಸಿ.ಸಿ.ಟಿವಿ ಕ್ಯಾಮರಾಗಳನ್ನು ಸಹ ಅಳವಡಿಸಲಾಗಿದೆ ಎಂದು ಶಿರಸಿಯ ಡಿವೈಎಸ್ಪಿ ಎಂ.ಎಸ್.ಪಾಟೀಲ ಹೇಳಿದ್ದಾರೆ.
ಸಂಚಾರಕ್ಕೆ ಮತ್ತು ಭದ್ರತೆಗೆ ತೊಂದರೆಯಾಗದಂತೆ ಎಲ್ಲ ವ್ಯವಸ್ಥೆ ಮಾಡಿದ್ದು ನೀಡಿದ್ದು ಕಳೆದ ಜಾತ್ರೆಯಲ್ಲಿ 23ಲಕ್ಷ ದೇವಿಯ ದರ್ಶನ ಪಡೆದಿದ್ದು ಈ ಸುಮಾರು 30 ಲಕ್ಷ ಜನ ಬರಬಹುದು ಎಂದು ಪಾಟೀಲ ಹೇಳಿದ್ದಾರೆ.