*ಹುಬ್ಬಳ್ಳಿ ಧಾರವಾಡದಲ್ಲಿ ಜನಜೀವನ ಅಸ್ತವ್ಯಸ್ತ – ಕೊಚ್ಚಿ ಹೋದ ಹುಸೇನ್ ಸಾಬ್ ಗಾಗಿ ಹುಡುಕಾಟ, ಶಾಲಾ ಕಾಲೇಜುಗಳಿಗೆ ರಜೆ, ಮೂವರ ಜೀವ ರಕ್ಷಿಸಿದ ಡಿವೈಎಸ್ಪಿ ಮುಕ್ತೆದಾರ*
ಹುಬ್ಬಳ್ಳಿ : ರಾಜ್ಯದ ಹಲವೆಡೆ ಭಾರೀ ಮಳೆಯಾಗುತ್ತಿದ್ದು, ಧಾರವಾಡ ಜಿಲ್ಲೆಯಲ್ಲಿ ಕೂಡ ವ್ಯಾಪಕ ಮಳೆಯಾಗಿದ್ದು, ಜಿಲ್ಲೆಯಾದ್ಯಂತ ಇಂದು (ಜೂನ್ 12-ಗುರುವಾರ) ರೆಡ್ ಅಲರ್ಟ್ ಜಾರಿ ಮಾಡಲಾಗಿದೆ.
ವಾಣಿಜ್ಯ ರಾಜಧಾನಿ ಹುಬ್ಬಳ್ಳಿ- ವಿದ್ಯಾ ಕಾಶಿ ಧಾರವಾಡ ಅವಳಿ ನಗರದಲ್ಲಂತೂ ಅಕ್ಷರಶಃ ಮೇಘ ಸ್ಪೋಟವೇ ಆಗಿದ್ದು ರಾತ್ರಿಯಿಡೀ ಸುರಿದ ಮಳೆಯಿಂದಾಗಿ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದ್ದು,ದ್ವಿಚಕ್ರ ವಾಹನದಲ್ಲಿ ಮನೆಗೆ ತೆರಳುತ್ತಿದ್ದ ವ್ಯಕ್ತಿಯೋರ್ವ ಮಾವನೂರ ಸೇತುವೆ ಹತ್ತಿರ ನೀರಿನಲ್ಲಿ ಕೊಚ್ಚಿ ಹೋಗಿದ್ದು ಆತನ ಪತ್ತೆ ಕಾರ್ಯ ಮುಂದುವರೆದಿದೆ.
ಬೀರಬಂದ ಓಣಿಯ ಹುಸೇನಸಾಬ್ ಕಳಸ ನೀರಿನಲ್ಲಿ ಕೊಚ್ಚಿ ಹೋಗಿರುವ ವ್ಯಕ್ತಿಯಾಗಿದ್ದು ಕಳೆದ ರಾತ್ರಿಯಿಂದ ಪೋಲೀಸರು ಮತ್ತು ಮಹಾನಗರ ಪಾಲಿಕೆ ಅಧಿಕಾರಿ, ಸಿಬ್ಬಂದಿ, ಅಗ್ನಿಶಾಮಕದಳದವರು ಹುಡುಕಾಟದಲ್ಲಿದ್ದಾರೆ. ವ್ಯಕ್ತಿಗಾಗಿ ಹುಡುಕಾಟ ಮುಂದುವರೆದಿದೆ.ಹಲವು ಪ್ರದೇಶದಲ್ಲಿ ನಿನ್ನೆ ರಾತ್ರಿಯಿಂದ ವಿದ್ಯುತ್ ಸೇವೆ ಸ್ಥಗಿತಗೊಂಡಿದೆ.
ನಿನ್ನೆಯ ಮಹಾಮಳೆಗೆ ಹುಬ್ಬಳ್ಳಿಯಲ್ಲಿ ದೊಡ್ಡ ಅವಾಂತರವೇ ಸೃಷ್ಠಿಯಾಗಿದ್ದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಕಮೀಷನರ್ ಡಾ. ರುದ್ರೇಶ ಘಾಳಿ ಬೆಳಗಿನ 4-30 ರವರೆಗೆ ಸಿಟಿ ರೌಂಡ್ಸ್ ನಡೆಸಿದ್ದಾರೆ.
ನವಲಗುಂದ ತಾಲೂಕಿನ ಯಮನೂರ ಗ್ರಾಮದಲ್ಲಿ ಮನೆಗಳಿಗೆ ನೀರು ನುಗ್ಗಿ. ರಾತ್ರಿ ವೇಳೆ ಸುರಿದ ಭಾರೀ ಮಳೆಯಿಂದಾಗಿ ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಜಿಲ್ಲೆಯ ಇತರ ಭಾಗಗಳಲ್ಲೂ ಧಾರಾಕಾರ ಮಳೆಯಾಗಿದೆ.
ಹುಬ್ಬಳ್ಳಿಯ ನೇಕಾರ ನಗರದ ವಾರ್ಡ್ ನಂಬರ್ 80ರ ರಂಭಾಪುರ ಕಾಲೋನಿಯಲ್ಲಿ ಭಾರೀ ಮಳೆಯಿಂದಾಗಿ ಮಳೆ ನೀರು ಮನೆಗಳಿಗೆ ನುಗ್ಗಿದೆ. ಮಳೆ ನೀರು ಸುಮಾರು 100ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ್ದು, ಒಳಚರಂಡಿ ನೀರು ಕೂಡ ತಗ್ಗು ಪ್ರದೇಶದ ಮನೆಗಳನ್ನು ಸೇರುತ್ತಿದೆ .ಹುಬ್ಬಳ್ಳಿ-ಧಾರವಾಡದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯು ಜನರಿಗೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಮನವಿ ಮಾಡಿದೆ.
*ಶಾಲಾಕಾಲೇಜುಗಳಿಗೆ ರಜೆ*
ಹವಾಮಾನ ಇಲಾಖೆಯ ಮೂನ್ಸೂಚನೆಯ ಪ್ರಕಾರ ಜಿಲ್ಲೆಗೆ ರೆಡ್ ಅಲರ್ಟ್ ಇರುವದರಿಂದ ಮತ್ತು ಜಿಲ್ಲೆಯ ಬಹುತೇಕ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ನಿನ್ನೆ ಸಂಜೆಯಿಂದ ನಿರಂತರವಾಗಿ ಮತ್ತು ವ್ಯಾಪಕವಾಗಿ ಮಳೆ ಆಗುತ್ತಿರುವದರಿಂದ ಶಾಲಾ ಕಾಲೇಜು ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಧಾರವಾಡ ಜಿಲ್ಲೆಯ ಎಲ್ಲ ಅಂಗನವಾಡಿ, ಪ್ರಾಥಮಿಕಶಾಲೆ, ಪ್ರೌಢಶಾಲೆ, ಪಿಯು ಮತ್ತು ಪದವಿ ಕಾಲೇಜುಗಳಿಗೆ ಇಂದು ಜೂ.12 ರಂದು ಒಂದು ದಿನದ ರಜೆ ಘೋಷಿಸಿ, ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.
ಈ ಕುರಿತು ಇಂದು ಪ್ರಕಟಣೆ ನೀಡಿರುವ ಅವರು, ಇಂದು ಹವಾಮಾನ ಇಲಾಖೆಯಿಂದ ಜಿಲ್ಲೆಗೆ ರೆಡ್ ಅಲರ್ಟ್ ಸೂಚಿಸಲಾಗಿದೆ. ಮಳೆಯೂ ನಿರಂತರವಾಗಿ ಆಗುತ್ತಿರುವದರಿಂದ ಅನೇಕ ಹಳ್ಳ, ಕೊಳ್ಳಗಳು ತುಂಬಿ ಹರಿಯುತ್ತಿವೆ ಸಾರ್ವಜನಿಕರು ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕೆಂದು ಅವರು ತಿಳಿಸಿದ್ದಾರೆ.
ಧಾರವಾಡ ಜಿಲ್ಲೆಯ ಬೆಣ್ಣಿ ಹಳ್ಳ ಮತ್ತು ತುಪ್ಪರಿ ಹಳ್ಳದ ಅಚ್ಚು-ಕಟ್ಟು ಪ್ರದೇಶದಲ್ಲಿ ನಿನ್ನೆ ರಾತ್ರಿ ವ್ಯಾಪಕ ಮಳೆಯಾಗಿದ್ದರಿಂದ, ಎರಡು ಹಳ್ಳದ ಹರಿವಿನಲ್ಲಿ ನೀರಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇರುತ್ತದೆ.ಇದರಿಂದ ಪ್ರವಾಹ ಪರಿಸ್ಥತಿ ಉಂಟಾಗಬಹುದು.
ರಾಜ್ಯ ಹವಾಮಾನ ಇಲಾಖೆ ಇವರ ವರದಿಯಂತೆ ಮುಂದಿನ 3 ದಿನ ಮಳೆ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲೆ ಹಾಗೂ ಬೆಣ್ಣಿ ಹಳ್ಳ ಮತ್ತು ತುಪ್ಪರಿ ಹಳ್ಳದ ಅಚ್ಚು-ಕಟ್ಟು ಪ್ರದೇಶದಲ್ಲಿ ಎಚ್ಚರಿಕೆ ವಹಿಸಲು ಅಧಿಕಾರಿಗಳಿಗೆ, ಸಾರ್ವಜನಿಕರಿಗೆ ಅವರು ಸೂಚಿಸಿದ್ದಾರೆ.
ರಾತ್ರಿ ಗಸ್ತು ವೇಳೆ ಧಾರಾಕಾರ ಸುರಿಯುತ್ತಿದ್ದ ಮಳೆಯನ್ನೂ ಲೆಕ್ಕಿಸದೇ ಹಳ್ಳದಲ್ಲಿ ಸಿಲುಕಿದ್ದ ಮೂವರ ಸಮೇತ ನೂರಕ್ಕೂ ಹೆಚ್ಚು ಕುರಿಗಳನ್ನ ರಕ್ಷಣೆ ಮಾಡುವಲ್ಲಿ ಧಾರವಾಡ ಜಿಲ್ಲೆಯ ಡಿವೈಎಸ್ಪಿ ವಿನೋದ ಮುಕ್ತೇದಾರ ಹಾಗೂ ಅವರ ತಂಡ ಯಶಸ್ವಿ ಆಗಿದೆ.
ನಿನ್ನೆ ಹುಬ್ಬಳ್ಳಿ ತಾಲೂಕಿನ ಬ್ಯಾಹಟ್ಟಿ ಗ್ರಾಮದ ಬಳಿ ಸುರಿದ ಮಳೆಯಿಂದ ಹಳ್ಳದ ಬಳಿ ಶೆಡ್ ನಲ್ಲಿ ಸಿಲುಕಿಕೊಂಡಿದ್ದ ಮೂವರು ಜನ ಮತ್ತು ಕುರಿಗಳನ್ನ ಪೋಲೀಸರು ರಕ್ಷಣೆ ಮಾಡಿದ್ದಾರೆ.
ಬ್ಯಾಹಟ್ಟಿ ಕುಸುಗಲ್ ರಸ್ತೆಯಲ್ಲಿನ ದೊಡ್ಡಹಳ್ಳ ಮತ್ತು ಲಂಡ್ಯಾನ ಹಳ್ಳದಲ್ಲಿ ಹನಮಂತಪ್ಪ ಕಲ್ಲಪ್ಪ ಬೇವೂರ, ಹಜರೇಸಾಬ ನೂಲ್ವಿ ಮತ್ತು ರಾಯಪ್ಪ ಕಬ್ಬೇರ ಸಿಲುಕಿದ್ದರು. ರಾತ್ರೋರಾತ್ರಿ ಸ್ಥಳಕ್ಕೆ ಆಗಮಿಸಿದ ಡಿವೈಎಸ್ಪಿ ವಿನೋದ ಮುಕ್ತೆದಾರ, ತಹಶೀಲ್ದಾರ ಸೇರಿದಂತೆ ಹಲವರು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.