*ಉಪನಗರ ಇನ್ಸಪೆಕ್ಟರ್ ಮಲ್ಲಪ್ಪ ಹೂಗಾರನಿಂದ ಸೋನು ನಾಯಕ್ ಕಾಲಿಗೆ ಗುಂಡು*
ಹುಬ್ಬಳ್ಳಿ: ಅವಳಿನಗರದಲ್ಲೇ ಸುಮಾರು 13ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿರುವ ದರೋಡೆಕೋರನೊಬ್ಬ ಇಂದು ಬೆಳಿಗ್ಗೆ ಖಾಕಿ ಪಡೆ ಮೇಲೆಯೇ ಹಲ್ಲೆ ನಡೆಸಿ ಪರಾರಿಯಾಗಲು ಮುಂದಾದಾಗ ಹುಬ್ಬಳ್ಳಿ ಇನ್ಸಪೆಕ್ಟರ್ ಮಲ್ಲಪ್ಪ ಹೂಗಾರ ಆತನ ಕಾಲಿಗೆ ಗುಂಡು ಹಾರಿಸಿ ಮತ್ತೆ ವಶಕ್ಕೆ ಪಡೆದಿದ್ದಾರೆ.
ನೇಕಾರ ನಗರದ ನಿವಾಸಿ ಸೋನು ಅಲಿಯಾಸ್ ಅರುಣ ರಾಮು ನಾಯಕ್ ಎಂಬಾತನೆ ಗುಂಡೇಟು ತಿಂದು ಈಗ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆರೋಪಿಯಾಗಿದ್ದಾನೆ.
ದರೋಡೆ ಪ್ರಕರಣದಲ್ಲಿ ಮತ್ತಿಬ್ಬರ ಮಾಹಿತಿ ನೀಡುವುದಾಗಿ ಇಂದು ಬೆಳಿಗ್ಗೆ 6 ಗಂಟೆ ಸುಮಾರಿಗೆ ಅರವಿಂದ ನಗರದ ಎಂಟಿಎಸ್ ಕಾಲೋನಿ ಬಳಿ ಕರೆದೊಯ್ದ ವೇಳೆ ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾಗಿ ಪರಾರಿಯಾಗುತ್ತಿದ್ದ ಆರೋಪಿ ಅರುಣ್ ಕಾಲಿಗೆ ಠಾಣಾಧಿಕಾರಿ ಹೂಗಾರ ಗುಂಡು ಹಾರಿಸಿದ್ದಾರೆ.
ಉಪನಗರ ಠಾಣೆಯ ವ್ಯಾಪ್ತಿಯಲ್ಲಿ ಕೆಲವು ದಿನಗಳ ಹಿಂದೆ ಚೆನ್ನಮ್ಮ ವೃತ್ತದ ಬಳಿ ಚೈನು, ಉಂಗುರ, ಫೋನ್ ಹಾಗೂ ಹಣವನ್ನು ದೋಚಿದ್ದ ಪ್ರಕರಣದಲ್ಲಿ ಸೋನು ಸಹಿತ ಇದುವರೆಗೆ ನಾಲ್ವರನ್ನು ವಶಕ್ಕೆ ಪಡೆಯಲಾಗಿದ್ದು ಇನ್ನಿಬ್ಬರು ಪತ್ತೆಯಾಗಬೇಕಿದೆ.
ಆರೋಪಿಗೆ ಗಾಯವಾಗಿದೆಯಲ್ಲದೇ ಸಿಬ್ಬಂದಿಗಳಾದ ಡಿ.ಆರ್.ಪಮ್ಮಾರ ಹಾಗೂ ತರುಣ ಗಡ್ಡದವರ ಎಂಬಾತರಿಗೆ ಗಾಯಗೊಂಡಿದ್ದು ಅವರೂ ಕಿಮ್ಸ್’ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೇಶ್ವಾಪುರದ ಭುವನೇಶ್ವರಿ ಜ್ಯುವೆಲರ್ಸ ಕಳ್ಳತನದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಫರ್ಹಾನ್ ಕಾಲಿಗೆ ಇತ್ತೀಚೆಗೆ ಗುಂಡು ಹಾರಿಸಿದ ಬೆನ್ನಲ್ಲೇ ಇಂದು ರಿವಾಲ್ವರ್ ಸದ್ದು ಕೇಳಿಸಿದ್ದು ಆರೋಪಿಗಳಿಗೆ ನಡುಕ ಹುಟ್ಟಿಸಿದೆ.
ಅವಳಿನಗರದ ಅಕ್ರಮ, ರೌಡಿಸಂ ಮತ್ತು ಮಾದಕ ವಸ್ತುಗಳ ಮಾರಾಟದಂತ ಚಟುವಟಿಕೆಗಳಿಗೆ ಪೂರ್ಣ ವಿರಾಮ ಹಾಕುವ ಉದ್ದೇಶದಿಂದಲೇ ಸರ್ಕಾರದಿಂದ ನೇಮಕಗೊಂಡಿರುವ ಆಯುಕ್ತ ಎನ್.ಶಶಿಕುಮಾರ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಅಧಿಕಾರಿಗಳಿಗೂ ಬಿಸಿ ಮುಟ್ಟಿಸಿದ್ದು ಅದರನ್ವಯ ಈಗ ಖಾಕಿಗಳ ಸೊಂಟದಲ್ಲಿನ ರಿವಾಲ್ವರ್ಗಳೂ ಮಾತಾಡತೊಡಗಿವೆ.