ಹುಬ್ಬಳ್ಳಿ: ಗುರು ಜಗನ್ನಾಥದಾಸರ ಮರಿಮೊಮ್ಮಗ ಕೋಶಿಗಿ ಅಪ್ಪಣ್ಣಾಚಾರ್ಯರು ತಮ್ಮ ಜೀವನವನ್ನೇ ವಿಶೇಷವಾಗಿ ದಾಸ ಸಾಹಿತ್ಯದ ಅನುಸಂಧಾನದಲ್ಲಿಯೇ ಕಳೆದವರಾಗಿದ್ದು,
1979 ರಿಂದ ತಿರುಪತಿ ತಿರುಮಲ ದೇವಸ್ಥಾನಗಳು, ತಿರುಪತಿಯಿಂದ ದಾಸಸಾಹಿತ್ಯ ಪ್ರಾಜೆಕ್ಟ್ ನ ವಿಶೇಷಾಧಿಕಾರಿಗಳಾಗಿ ಕೆಲಸ ಮಾಡಿದವರು. ನಾಡಿನಾದ್ಯಂತ ಸಂಚಾರ ಮಾಡಿ ಭಜನಾ ಮಂಡಳಿಗಳನ್ನು ಕಟ್ಟಿದವರು. ಮೊದಲ ಬಾರಿಗೆ ತಿರುಪತಿಯಿಂದ ಹೊರಗೆ ಶ್ರೀನಿವಾಸ ಕಲ್ಯಾಣೋತ್ಸವ ಆಯೋಜಿಸಿದವರು.ಅಂತಹ ಹಿರಿಯ ಚೇತನಕ್ಕೆ ಹುಬ್ಬಳ್ಳಿಯ
ಸಂಯುತಾ ಪ್ರತಿಷ್ಠಾನದಿಂದ ಕನಕ-ಪುರಂದರೋತ್ಸವದ ನಿಮಿತ್ತ ನೀಡಲಾಗುವ ರಾಜ್ಯಮಟ್ಟದ ‘ಸಂಯುತಾ ಪುರಂದರ’ ಪ್ರಶಸ್ತಿ ನಾಳೆ ಪ್ರದಾನ ಮಾಡಲಾಗುವುದು.
ತಿರುಮಲ ತಿರುಪತಿ ದಾಸ ಸಾಹಿತ್ಯ ಪ್ರೊಜೆಕ್ಟ್ನ ವಿಶ್ರಾಂತ ಯೋಜನಾಧಿಕಾರಿ ಕೆ. ಅಪ್ಪಣ್ಣಾಚಾರ್ಯ ಇವರು ಸಂಯುತಾ ಪುರಂದರ ದ್ವಿತೀಯ ಪ್ರಶಸ್ತಿಗೆ ಭಾಜನರಾಗಿದ್ದು ದಿ. 29ರಂದು ಪ್ರಶಸ್ತಿ ಪ್ರದಾನ ಸಮಾರಂಭ ಭವಾನಿನಗರದ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ನಡೆಯಲಿದೆ.
ನಾಳೆ ಸಂಜೆ 5-15ಕ್ಕೆ ನಡೆಯಲಿರುವ ಸಮಾರಂಭವನ್ನು ಪಂ.ಪಾಂಡುರಂಗಾಚಾರ್ಯ ಹುನಗುಂದ ಉದ್ಘಾಟಿಸಲಿದ್ದು, ಕ್ಷಮತಾ ಸೇವಾ ಸಂಸ್ಥೆ ಅಧ್ಯಕ್ಷರಾದ ಗೋವಿಂದ ಜೋಶಿ, ಕನಕದಾಸ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಶಾಂತಣ್ಣ ಕಡಿವಾಲ, ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರ ಹೆಚ್ಚುವರಿ ಆಪ್ತ ಕಾರ್ಯದರ್ಶಿ ಮುರಳೀಧರ ಮಳಗಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಸಮಾರಂಭದ ಅಧ್ಯಕ್ಷತೆಯನ್ನು ಸಂಯುತಾ ಪ್ರತಿಷ್ಠಾನದ ಅಧ್ಯಕ್ಷ ಪಿ.ಎಸ್.ಪರ್ವತಿ ವಹಿಸಲಿದ್ದಾರೆ. ಗೌರವಾಧ್ಯಕ್ಷ ಎ.ಸಿ.ಗೋಪಾಲ,ಭವಾನಿ ನಗರ ರಾಘವೇಂದ್ರ ಮಠದ ವ್ಯವಸ್ಥಾಪಕ ಕೆ.ವೇಣುಗೋಪಾಲಾಚಾರ್ಯ, ಪ್ರತಿಷ್ಠಾನದ ಉಪಾಧ್ಯಕ್ಷ ಗಣಪತಿ ಗಂಗೊಳ್ಳಿ, ಎಕೆಬಿಎಂಎಸ್ ಜಿಲ್ಲಾ ಸಂಚಾಲಕ ಬಿಂದುಮಾಧವ ಪುರೋಹಿತ ಉಪಸ್ಥಿತರಿರುವರು.
ಪ್ರಶಸ್ತಿಯು 10,000/- ರೂ. ಹಾಗೂ ಸಮ್ಮಾನ ಪತ್ರ ಒಳಗೊಂಡಿದೆ.
ಪ್ರಶಸ್ತಿ ಪ್ರದಾನದ ನಂತರ ಕು.ಕೋಮಲ ನಾಡಿಗೇರ ಇವರಿಂದ ದಾಸ ಸಂಗೀತ ಕಾರ್ಯಕ್ರಮ ನಡೆಯಲಿದೆ. ಡಾ.ರಚನಾ ನಾಡಿಗೇರ ( ಹಾರ್ಮೋನಿಯಂ), ಸುಜಯೀಂದ್ರಾಚಾರ ( ತಾಳ) ಹಾಗೂ ಕು.ರಯಿ ಗಲಗಲಿ ತಬಲಾ ಸಾಥ್ ನೀಡಲಿದ್ದಾರೆ ಎಂದು ಸಂಯುತಾ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಜನಮೇಜಯ ಉಮ್ಮರ್ಜಿ, ಖಜಾಂಚಿ ಸುಶೀಲೇಂದ್ರ ಕುಂದರಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.