*ಹೊಸ ವರ್ಷದ ಶುಭಾಶಯ ಕೋರಿ ಗೌಪ್ಯ ಚರ್ಚೆ* / *ಪಕ್ಷದ ಚುಕ್ಕಾಣಿಗೂ ಅಜಾತಶತ್ರು ಹೆಸರು ಮುನ್ನೆಲೆಗೆ*
ಹುಬ್ಬಳ್ಳಿ :ಬೆಳಗಾವಿ ಲೋಕಸಭಾ ಸದಸ್ಯರು ಹಾಗೂ ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಜಗದೀಶ ಶೆಟ್ಟರ ಅವರು ನಿನ್ನೆ ಹೊಸದಿಲ್ಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ, “ನೂತನ ವರ್ಷ – 2025” ದ ಶುಭಾಶಯಗಳು ಕೋರಿದ್ದಾರಲ್ಲದೇ ರಾಜ್ಯದ ಬಿಜೆಪಿಯಲ್ಲಿನ ವಾಸ್ತವ ಮನವರಿಕೆ ಮಾಡಿದ್ದಾರೆ.
ಭೇಟಿಯಾದ ಸಂದರ್ಭದಲ್ಲಿ ರಾಜ್ಯದಲ್ಲಿ ಪಕ್ಷದಲ್ಲಿ ಒಗ್ಗಟ್ಟು ಮರೀಚಿಕೆಯಾಗಿದೆ ಅಲ್ಲದೆ ಅಕ್ಷರಶಃ ಒಡೆದು ಮನೆಯಾಗಿದೆ. ಇದೇ ಪರಿಸ್ಥಿತಿ ಮುಂದುವರೆದರೆ ಮುಂಬರುವ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಗಳಲ್ಲಿ ಸಹ ಹಿನ್ನಡೆಯಾಗಲಿದೆ. ಮುಂಬರುವ 2028ರ ಲೋಕಸಭಾ ಚುನಾವಣೆಯಲ್ಲಿ ಪರಿಣಾಮ ಬೀರಬಹುದು ಎಂಬ ಬಗ್ಗೆ ಸವಿಸ್ತಾರವಾಗಿ ಮನವರಿಕೆ ಮಾಡಿದ್ದಾರೆ ಎನ್ನಲಾಗಿದೆ.
ಸನ್ಮಾನಿಸಲು ಹೋದಾಗ ನಾನು ಸಾಮಾನ್ಯ ಕಾರ್ಯಕರ್ತ ಸನ್ಮಾನ ಬೇಡ ಎಂದು ಕುಟುಂಬದ ಆತ್ಮೀಯ ಸದಸ್ಯರಂತೆ ಕುಶಲೊಪರಿಯನ್ನು ಪ್ರಧಾನ ಮಂತ್ರಿಗಳು ವಿಚಾರಿಸಿದರು ಎಂದು ಶೆಟ್ಟರ್ ಹೇಳಿದ್ದಾರೆ.
ಈ ಸಂದರ್ಭದಲ್ಲಿ ಶೆಟ್ಟರ್ ಸವಿ ನೆನಪಿಗಾಗಿ ಹುಬ್ಬಳ್ಳಿ ಸಾಹಿತ್ಯ ಭಂಡಾರ ಪ್ರಕಟ ಮಾಡಿದ ” Temple treasures a journey through time ” ಯ ಪುಸ್ತಕವನ್ನು ನೀಡಿದರು.ಅಲ್ಲದೇ ಸವದತ್ತಿಯ ಶ್ರೀ ಕ್ಷೇತ್ರ ಶ್ರೀ ರೇಣುಕಾ ಎಲ್ಲಮ್ಮ ದೇವಿ ದೇವಸ್ಥಾನದ ಅಭಿವೃದ್ಧಿಗೆ 100 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದ್ದಕ್ಕೆ ಧನ್ಯವಾದಗಳನ್ನು ತಿಳಿಸಿ,
ಬೆಂಗಳೂರು – ಧಾರವಾಡದ ನಡುವೆ ಸದ್ಯ ಸಂಚರಿಸುತ್ತಿರುವ “ವಂದೇ ಭಾರತ” ಎಕ್ಸ್ ಪ್ರೆಸ್ ರೈಲು ಸಂಚಾರವನ್ನು ಬೆಳಗಾವಿಯವರೆಗೆ ವಿಸ್ತರಿಸಿ ಬೆಳಗಾವಿ ಜಿಲ್ಲಾ ನಿವಾಸಿಗಳ ಅನೇಕ ದಿನಗಳ ಬೇಡಿಕೆಯನ್ನು ಪರಿಗಣಿಸುವಂತೆ ವಿನಂತಿಸಿ, ಮನವಿಯನ್ನು ಈ ಸಂದರ್ಭದಲ್ಲಿ ಪ್ರಧಾನ ಮಂತ್ರಿಗಳಿಗೆ ನೀಡಿದರು.
ಶೆಟ್ಟರ್ ಗೌಪ್ಯ ಭೇಟಿ ಭಾರೀ ಕೂತೂಹಲ ಕೆರಳಿಸಿದೆಯಲ್ಲದೇ ರಾಜ್ಯ ಕೇಸರಿ ಪಡೆ ಅಧ್ಯಕ್ಷ ಸ್ಥಾನಕ್ಕೆ ಅಜಾತಶತ್ರು ಆಗಿರುವ ಇವರ ಹೆಸರೂ ಮುನ್ನೆಲೆಗೆ ಬಂದಿದೆ ಎಂದು ಕಮಲದ ಆಂತರಿಕ ಮೂಲಗಳು ಹೇಳಿವೆ.