*ಕೇಶ್ವಾಪುರದ ’ಶಕ್ತಿ ಕೇಂದ್ರ’ ಕುಂದಾನಗರಿಗೆ / ಬೆಳಗಾವಿ ಜಿಲ್ಲೆ ನನ್ನ ಕರ್ಮಭೂಮಿ*
ಹುಬ್ಬಳ್ಳಿ : ಸುಮಾರು ಮೂರುವರೆ ದಶಕಗಳ ಕಾಲ ಹುಬ್ಬಳ್ಳಿಯನ್ನೇ ಕಾರ್ಯಕ್ಷೇತ್ರವಾಗಿಸಿಕೊಂಡು ರಾಜ್ಯದ ಮುಖ್ಯಮಂತ್ರಿ ಗದ್ದುಗೆಯನ್ನೂ ಮುನ್ನಡೆಸಿದ ಸರಳ, ಸಜ್ಜನ ರಾಜಕಾರಣಿ ಎಂಬ ಪದಕ್ಕೆ ಇಂದಿಗೂ ಪರ್ಯಾಯವಾಗಿರುವ ಜಗದೀಶ ಶೆಟ್ಟರ್ ಅವರ ಕೇಶ್ವಾಪುರದ ಮಧುರಾ ಎಸ್ಟೇಟ್ನ ಶಕ್ತಿ ಕೇಂದ್ರ ಬುಧವಾರದಿಂದ ಅಧಿಕೃತವಾಗಿ ಬೆಳಗಾವಿಗೆ ಸ್ಥಳಾಂತರಗೊಳ್ಳಲಿದೆ.
ಹೌದು,ಶೆಟ್ಟರ್ಗೆ ಲೋಕಸಭಾ ಟಿಕೆಟ್ ಎಲ್ಲಿಯೂ ದೊರೆಯದಂತೆ ನೋಡಿಕೊಳ್ಳಬೇಕೆಂಬ ಅವರ ವಿರೋಧಿ ಪಾಳೆಯದ ತಂತ್ರ ಅಂತಿಮವಾಗಿ ಕೇಸರಿ ’ಕಮಾಂಡ್’ ಎದುರು ವಿಫಲವಾಗಿದ್ದು, ಯಡಿಯೂರಪ್ಪ ಮಾತೇ ಮೇಲುಗೈ ಸಾಧಿಸುವ ಮೂಲಕ ಕುಂದಾನಗರಿಯ ಟಿಕೆಟ್ ದಕ್ಕಿದ್ದು ಇನ್ನು ಅವರ ಭವಿಷ್ಯದ ರಾಜಕೀಯ ಅಲ್ಲೇ ಎನ್ನುವಂತಾಗಿದೆ.
ಸ್ಥಳೀಯ ನಾಯಕರ ವಿರೋಧ, ಗೋ ಬ್ಯಾಕ್ ಮುಂತಾದ ಅಭಿಯಾನಗಳ ಮಧ್ಯೆಯೂ ಜಗದೀಶ ಶೆಟ್ಟರ್ ಬೀಗರು, ಬೀಗತ್ತಿ ಪ್ರತಿನಿಧಿಸಿದ ಲೋಕಸಭಾ ಕ್ಷೇತ್ರದ ಕಮಲದ ಹುರಿಯಾಳಾಗಿ ಘೋಷಿಸಲ್ಪಟ್ಟಿದ್ದಾರೆ.
ನಿನ್ನೆ ಟಿಕೆಟ್ ಘೋಷಣೆಯಾದಾಗಿನಿಂದ ಶೆಟ್ಟರ್ ನಿವಾಸದಲ್ಲಿ ಅವರ ಬೆಂಬಲಿಗರ ಸಂಭ್ರಮ ಮುಗಿಲು ಮುಟ್ಟಿದ್ದು ಅಧಿಕೃತವಾಗಿ ಬುಧವಾರ ಕುಂದಾನಗರಕ್ಕೆ ತೆರಳುವದರೊಂದಿಗೆ ಅಲ್ಲಿಯೇ ತಮ್ಮ ರಾಜಕೀಯದ ಹೊಸ ಇನ್ನಿಂಗ್ಸ್ ಆರಂಭಿಸಲಿದ್ದಾರೆ.
1994ರಲ್ಲಿ ಪ್ರಸಕ್ತ ಹಾವೇರಿ ಅಭ್ಯರ್ಥಿಯಾಗಿರುವ ಬಸವರಾಜ ಬೊಮ್ಮಾಯಿಯವರನ್ನು 15974 ಮತಗಳ ಅಂತರದಿಂದ ಪರಾಭವಗೊಳಿಸಿ ವಿಧಾನಸೌಧ ಪ್ರವೇಶಿಸಿದ್ದ ಶೆಟ್ಟರ್ ನಂತರ ಐದು ಚುನಾವಣೆಗಳಲ್ಲೂ ಹಿಂತಿರುಗಿ ನೋಡಲಿಲ್ಲ. ಕಳೆದ 2023ರಲ್ಲಿ ಪಕ್ಷದಿಂದ ಟಿಕೆಟ್ ದೊರೆಯದೇ ಕೈ ಪಾಳೆಯದಿಂದ ಉಮೇದುವಾರಿಕೆ ಸಲ್ಲಿಸಿ ಪರಾಭವಗೊಂಡರೂ ಅವರ ಎಫೆಕ್ಟ್ ಅನೇಕ ಕ್ಷೇತ್ರಗಳಲ್ಲಿ ಕಾಂಗ್ರೆಸ್ಗೆ ಲಾಭ ತಂದಿತ್ತು. ಮತ್ತೆ ಬಿಜೆಪಿಗೆ ಸೇರ್ಪಡೆಯಾದರೂ ಅವರಿಗೆ ಸಿಗಬೇಕಾದ ಗೌರವ ದೊರೆಯದ ಹಂತದಲ್ಲಿ ಧಾರವಾಡ, ಹಾವೇರಿ ಟಿಕೆಟ್ ದೊರೆಯದೇ ಹೋದರೂ ಬೆಳಗಾವಿ ಟಿಕೆಟ್ ದೊರೆತಿದೆ.
ಇಂದು ಬಿಜೆಪಿಯ ನೂತನ ಕಾರ್ಯಾಲಯಕ್ಕೆ ಭೇಟಿ ನೀಡಿದ ಅವರನ್ನು ಸನ್ಮಾನಿಸಲಾಯಿತಲ್ಲದೇ , ಸಂಘದ ಕಾರ್ಯಾಲಯಕ್ಕೂ ಭೇಟಿ ನೀಡಿದ್ದರು. ಹೋಳಿ ಹಬ್ಬದ ಹಿನ್ನೆಲೆಯಲ್ಲಿ ಬುಧವಾರದಿಂದ ಬೆಳಗಾವಿಯಲ್ಲಿ ಅಧಿಕೃತ ಪ್ರಚಾರ ಕೈಗೊಳ್ಳುವುದನ್ನು ಪ್ರಕಟಿಸಿದ್ದು ಈಗಾಗಲೇ ಅಲ್ಲಿ ಅವರ ವಾಸ್ತವ್ಯಕ್ಕೆ 3-4 ಮನೆಗಳನ್ನೂ ನೋಡಿದ್ದು ಒಂದು ಅಂತಿಮಗೊಳ್ಳಲಿದೆ.ಅಲ್ಲದೇ ಅಂದು ಯಡಿಯೂರಪ್ಪ ಸಹ ಆಗಮಿಸಿ ಎಲ್ಲರನ್ನೂ ಒಗ್ಗೂಡಿಸಿ ಗೆಲುವಿಗೆ ಸಂಕಲ್ಪ ಮಾಡಲಿದ್ದಾರೆ.
ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,ಹುಬ್ಬಳ್ಳಿ ನನ್ನ ಜನ್ಮಭೂಮಿಯಾದರೆ ಬೆಳಗಾವಿ ಜಿಲ್ಲೆ ನನ್ನ ಕರ್ಮಭೂಮಿ. ಆ ಜಿಲ್ಲೆಯಲ್ಲಿ ಎರಡು ಬಾರಿ ಉಸ್ತುವಾರಿ ಸಚಿವನಾಗಿ ಕೆಲಸ ಮಾಡಿದ್ದೇನೆ. ಅದು ನನ್ನ ನನ್ನ ಜಿಲ್ಲೆ ಎಂದು ಕೆಲಸ ಮಾಡಿದ್ದೇನೆ. ಕಾರ್ಯಕರ್ತರು, ಮುಖಂಡರು, ಜಿಲ್ಲೆಯ ಜನರ ಸಂಪರ್ಕ ಸಂಪೂರ್ಣವಿದೆ ಎಂದರು.
ನಮ್ಮ ಪಕ್ಷದ ಬೆಳಗಾವಿಯ ಎಲ್ಲ ನಾಯಕರು, ಮುಖಂಡರೊಂದಿಗೆ ಈಗಾಗಲೇ ಮಾತನಾಡಿದ್ದೇನೆ. ಬನ್ನಿ ಎಲ್ಲರೂ ಕೂಡಿಕೊಂಡು ಚುನಾವಣೆ ಮಾಡೋಣ. ಮೂರನೇ ಬಾರಿ ನರೇಂದ್ರ ಮೋದಿ ಅವರನ್ನು ಪ್ರಧಾನಿ ಮಾಡೋಣ ಎಂದಿದ್ದಾರೆ. ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದರು.
ಸಂಸದೆ ಮಂಗಳಾ ಅಂಗಡಿ ಕುಟುಂಬಸ್ಥರು ತುಂಬಾ ಸಂತೋಷ ವ್ಯಕ್ತಪಡಿಸಿದ್ದಾರೆ. ಅವರೂ ಪ್ರಚಾರ ಮಾಡಲಿದ್ದಾರೆ.ಪ್ರಭಾಕರ ಕೋರೆ, ಅಭಯ ಪಾಟೀಲ, ರಮೇಶ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಎಲ್ಲರೂ ಸಹೋದರರು ಬೆಂಬಲಿಸಲಿದ್ದಾರೆ ಎಂದು ಹೇಳಿದರು.
ಈ ಚುನಾವಣೆಯನ್ನು ನಾನು ಗಂಭೀರವಾಗಿ ಪರಿಗಣಿಸಿದ್ದೇನೆ. ಜಾತಿ ಲೆಕ್ಕಾಚಾರ ಪರಿಣಾಮ ಬೀರಲ್ಲ. ಎಲ್ಲ ಜಾತಿ ಸಮುದಾಯದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ಎದುರಿಸಿ ಗೆಲ್ಲುವುದಾಗಿ ಹೇಳಿದ್ದು,ಈಗಾಗಲೇ ಕಾಂಗ್ರೆಸ್ ಹುರಿಯಾಳಾಗಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ ಪುತ್ರ ಮೃಣಾಲ ಕಣಕ್ಕಿಳಿದಿದ್ದು ಒಟ್ಟಿನಲ್ಲಿ ಬೆಳಗಾವಿ ಹೈವೋಲ್ಟೇಜ್ ಕಣವಾಗಿ ಮಾರ್ಪಡಲಿದೆ ಎಂಬುದರಲ್ಲಿ ಎರಡು ಮಾತಿಲ್ಲ.