ಸಾಗರ: ಶರಾವತಿ ನದಿ ಹಿನ್ನೀರಿನಲ್ಲಿ ನಿರ್ಮಿಸಿರುವ ಭಾರತದ 2ನೇ ಅತಿ ಉದ್ದದ ಕೇಬಲ್ ಬ್ರಿಡ್ಜ್
ಅಂಬಾರಗೋಡ್ಲು – ಕಳಸವಳ್ಳಿ-ಸಿಗಂದೂರು ಸೇತುವೆಗೆ
ಸಿಗಂದೂರು ಚೌಡೇಶ್ವರಿ ದೇವಿ (Sigandur Chowdeshwari Devi) ಸೇತುವೆ ಎಂದು ನಾಮಕರಣ ಮಾಡಲಾಗಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಘೋಷಿಸಿದರು.
ತಾಲೂಕಿನ ಶ್ರೀಕ್ಷೇತ್ರ ಸಿಗಂದೂರಿನಲ್ಲಿ ಇಂದು ನೂತನ ಸೇತುವೆ ಲೋಕಾರ್ಪಣೆ ಮಾಡಿ ಸಾಗರ ಪಟ್ಟಣದ ನೆಹರು ಮೈದಾನದಲ್ಲಿ ಸಿಗಂದೂರು ಚೌಡೇಶ್ವರಿ ದೇವಿ ಸೇತುವೆ ಉದ್ಘಾಟನೆ ಕಾರ್ಯಕ್ರಮ ಉದ್ದೇಶಿಸಿ ಸಚಿವ ಗಡ್ಕರಿ ಮಾತನಾಡಿದರು.
ಸಿಗಂದೂರು ಚೌಡೇಶ್ವರಿ ದೇವಿ ಸೇತುವೆ ನಿರ್ಮಾಣಕ್ಕೆ ನಾನೇ ಭೂಮಿಪೂಜೆ ಮಾಡಿದ್ದೆ. ಇದೀಗ, ನಾನೇ ಉದ್ಘಾಟನೆ ಮಾಡಿದ್ದು ನನ್ನ ಸೌಭಾಗ್ಯ ಎಂದು ಹೇಳಿದರು.
ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನೂತನ ಹೆದ್ದಾರಿ ನಿರ್ಮಾಣ ಮಾಡಿದ್ದೇವೆ. ಬೆಂಗಳೂರು-ಚೆನ್ನೈ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದೆ. ಶಿವಮೊಗ್ಗ-ತುಮಕೂರು ಹೆದ್ದಾರಿ ಕಾಮಗಾರಿ ನಡೆಯುತ್ತಿದೆ. ಹುಬ್ಬಳ್ಳಿ-ಧಾರವಾಡ ಹೆದ್ದಾರಿ ಕಾಮಗಾರಿ ಶೀಘ್ರದಲ್ಲೇ ಪೂರ್ಣ ಆಗಲಿದೆ ಎಂದು ತಿಳಿಸಿದರು.
5000 ಕೋಟಿ ರೂ. ವೆಚ್ಚದಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಗುರಿ ಹೊಂದಿದ್ದೇವೆ. 1300 ಸಾವಿರ ಕೋಟಿ ರೂ. ವೆಚ್ಚದಲ್ಲಿ ಹಾಸನದಿಂದ ರಾಯಚೂರಿಗೆ ಸಂಪರ್ಕ ಕಲ್ಪಿಸುವ ನಾಲ್ಕು ಲೈನ್ ಹೆದ್ದಾರಿ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ. ಇದರಿಂದ ಪ್ರಯಾಣದ ಸಮಯ ಅರ್ಧದಷ್ಟು ಕಡಿಮೆಯಾಗಲಿದೆ. ಬೆಂಗಳೂರು-ಚೆನೈ ಹೆದ್ದಾರಿ ಕಾಮಗಾರಿ ನಡೆಯುತ್ತಿದೆ ಎಂದರು
ಇದಕ್ಕೆ ಮೊದಲು ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಚೌಡೇಶ್ವರಿ ದೇವಿ ಹೆಸರು ಸೇತುವೆಗೆ ಇಡಲು ಆಗ್ರಹಿಸಿ
ಸಂಸದ ಬಿ.ವೈ.ರಾಘವೇಂದ್ರ ಅವರ ಒತ್ತಾಸೆಯೂ ಇದೇ ಆಗಿದೆ ಎಂದರು.
ಗಡ್ಕರಿ ಅವರು ಸಂಚಾರ ಕ್ರಾಂತಿಯನ್ನೇ ಮಾಡುತ್ತಿದ್ದಾರೆ. 1998-99ರ ದಶಕದಲ್ಲಿ ಹಲವು ಪ್ರಥಮಗಳ ರೂವಾರಿ ಆಗಿದ್ದವರು, ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಶುರು ಮಾಡಿದ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಗೆ ರೂಪುರೇಷೆ ಕೊಟ್ಟಿದ್ದಲ್ಲದೆ, ದೇಶದಲ್ಲಿ ಹಳ್ಳಿಗಳ ರಸ್ತೆ ಸುಧಾರಣೆ, ವಿದ್ಯುತ್ ಯೋಜನೆಗಳನ್ನು ಸಾಕಾರಗೊಳಿಸಿದವರಾಗಿದ್ದಾರೆ ಎಂದು ಬಣ್ಣಿಸಿದರು.
ಈ ಹಿಂದೆ ದೇಶದಲ್ಲಿ ಪ್ರತಿ ದಿನ ಕೇವಲ 7-8 ಕಿಮೀ ರಸ್ತೆ ನಿರ್ಮಾಣವಾಗುತ್ತಿತ್ತು. ಇದೀಗ ಸಚಿವ ನಿತಿನ್ ಗಡ್ಕರಿ ಅವರ ಸಾರಥ್ಯದಲ್ಲಿ ನಿತ್ಯವೂ 34 ಕಿ.ಮೀ. ಹೆದ್ದಾರಿ ನಿರ್ಮಾಣ ಮಾಡಲಾಗುತ್ತಿದೆ. ಗಡ್ಕರಿ ಅವರು ಈಗ ʼರೋಡ್ಕರಿʼ ಎನ್ನುವಷ್ಟರ ಮಟ್ಟಿಗೆ ರಸ್ತೆಗಳನ್ನು ನಿರ್ಮಿಸುತ್ತಿದ್ದಾರೆ ಎಂದು ಜೋಶಿ ಬಣ್ಣಿಸಿದರು. ಈ ಸಂದರ್ಭದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸಂಸದ ಬಿ.ವೈ.ರಾಘವೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಶಾಸಕರು, ಗಣ್ಯರನೇಕರು ಉಪಸ್ಥಿತರಿದ್ದರು.
*ಕುರ್ಚಿ ಉಳಿಸಿಕೊಳ್ಳೋ ಸಭೆಗಳಿಗೆ ಮಾತ್ರ ಸಿಎಂಗೆ ಸಮಯವಿರುತ್ತದೆ*
ಸಿಗಂದೂರು: ಸಿಎಂ ಕುರ್ಚಿ ಜಗಳದಲ್ಲಿ ಮುಳುಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಭಿವೃದ್ಧಿ ಕಾರ್ಯಗಳೆಲ್ಲಿ ನೆನಪಿರುತ್ತವೆ? ಸದಾ ದೆಹಲಿ ನಾಯಕರ ಭೇಟಿ, ರಾಜಕೀಯ ಸಭೆ-ಸಮಾವೇಶಗಳಿಗೆ ತೆರಳಲು ಮಾತ್ರ ಸಮಯವಿರುತ್ತದೆ! ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿರುಗೇಟು ನೀಡಿದ್ದಾರೆ.
ಸಿಗಂದೂರು ಸೇತುವೆ ಉದ್ಘಾಟನೆ ಸಮಾರಂಭಕ್ಕೆ ʼಆಹ್ವಾನ ನೀಡಿದ್ದರೆ ಬರುತ್ತಿದ್ದೆʼ ಎಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಸಚಿವ ಜೋಶಿ, ಸದ್ಯಕ್ಕೆ ರಾಜಕೀಯ ಸಭೆ-ಸಮಾವೇಶಗಳ ಹೊರತಾಗಿ ಇರುವಂಥ ಅಭಿವೃದ್ಧಿಪರ ಸಮಾರಂಭಗಳಿಗೆ ಬರಲು ಸಿಎಂಗೆ ಸಮಯವೇ ಇರುವುದಿಲ್ಲ ಬಿಡಿ ಎಂದು ಚಾಟಿ ಬೀಸಿದ್ದಾರೆ.
ಸಿಗಂದೂರು ಸೇತುವೆ ಉದ್ಘಾಟನೆ ಸಮಾರಂಭಕ್ಕೆ ಆಗಮಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಂಸದ ಬಿ.ವೈ.ರಾಘವೇಂದ್ರ ಅವರು ಜು.9ರಂದೇ ಆಹ್ವಾನಿಸಿದ್ದಾರೆ. ಪತ್ರ ಸಹ ಬರೆದಿದ್ದಾರೆ. ಅಲ್ಲದೇ, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಸಹ ಸಿಎಂಗೆ ಜು.11ರಂದೇ ಪತ್ರ ಬರೆದು ಆಹ್ವಾನಿಸಿದ್ದಾರೆ. ಹಾಗಿದ್ದರೂ ʼಸಿಎಂ ಆಹ್ವಾನ ನೀಡಿಲ್ಲʼ ಎಂದಿರುವುದು ಸರಿಯಲ್ಲ ಎಂದು ಸಚಿವ ಜೋಶಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.