ಹುಬ್ಬಳ್ಳಿ : ಅಮರಗೋಳ ಎಪಿಎಂಸಿ ವಿವಿಧೋದ್ದೇಶ ವಸ್ತು ಪ್ರದರ್ಶನ ಸಭಾಭವನದಲ್ಲಿ ಶನಿವಾರ ನಡೆದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ 97ನೇ ಸಂಸ್ಥಾಪಕರ ದಿನಾಚರಣೆ ನಿಮಿತ್ತ ಏರ್ಪಡಿಸಿದ್ದ ವರ್ಣ ರಂಜಿತ ಕಾರ್ಯಕ್ರಮದಲ್ಲಿ ಅಪೂರ್ವ ಸಾಧನೆ ಮಾಡಿದ ಆರು ಉದ್ಯಮಿ ಸಾಧಕರಿಗೆ ವಾಣಿಜ್ಯ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಬೆಳಗಾವಿಯ ಉದ್ಯಮಿ ಜಯಂತ ಹುಂಬರವಾಡಿ, ಹುಬ್ಬಳ್ಳಿಯ ಆಟೊಮೊಬೈಲ್ ಉದ್ಯಮಿ ಪ್ರಕಾಶ ಬಾಫಣಾ, ಮಹಿಳಾ ಉದ್ಯಮಿ ದೇವಕಿ ಯೋಗಾನಂದ, ಕಲಬುರ್ಗಿಯ ರವೀಂದ್ರಕುಮಾರ ಬೆಕನಾಳ, ಗದಗನ ಶರಣಬಸಪ್ಪ ಗುಡಿಮನಿ, ಕೊಪ್ಪಳದ ಸಿದ್ದಣ್ಣ ನಾಲ್ವಾಡ ಅವರಿಗೆ ವಾಣಿಜ್ಯರತ್ನ ಪ್ರದಾನ ಮಾಡಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ಜೆಎಸ್ಡಬ್ಲ್ಯೂ ಸಿಮೆಂಟ್, ಪೇಂಟ್ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಪಾರ್ಥ ಜಿಂದಾಲ್ ಮಾತನಾಡಿ, ಉದ್ಯಮಗಳ ಸ್ಥಾಪನೆಗೆ ಉತ್ತರ ಕರ್ನಾಟಕ ಪ್ರಶಸ್ತವಾದ ಸ್ಥಳ. ತಮ್ಮ ಸಂಸ್ಥೆ ಮುಂದಿನ ಬೃಹತ್ ಯೋಜನೆ ಇಲ್ಲಿಯೇ ಆರಂಭ ಮಾಡುವುದಾಗಿ ಪ್ರಕಟಿಸಿದರು.
ದೇಶದ ಕೈಗಾರಿಕಾ ವಲಯದ ಉತ್ಪಾದನಾ ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧಿಸಲು ಇಂದು ಬಹಳಷ್ಟು ಅವಕಾಶಗಳಿವೆ. ನವ ಉದ್ಯಮಿಗಳು ಉತ್ಪಾದನಾ ಕ್ಷೇತ್ರದಲ್ಲೇ ಹೆಚ್ಚೆಚ್ಚು ಹೂಡಿಕೆ ಮಾಡುವಂತಾಗಬೇಕು ಎಂದು ಅವರು, ಭಾರತವು ಶೇ.79ರಷ್ಟು ಯುವಶಕ್ತಿ ಹೊಂದಿದ ದೇಶವಾಗಿದ್ದು, ಪ್ರತಿವರ್ಷ ೧೦ ಲಕ್ಷ ಯುವಕರಿಗೆ ಉದ್ಯೋಗ ನೀಡುವ ದಿಶೆಯಲ್ಲಿ ಯೋಜನೆ ರೂಪಿಸಬೇಕು. ಕೃಷಿ ಹಾಗೂ ಉತ್ಪಾದನಾ ಕ್ಷೇತ್ರದಲ್ಲಿ ಹೂಡಿಕೆಯಿಂದ ಉದ್ಯೋಗಾವಕಾಶ ಹೆಚ್ಚು ಸೃಷ್ಠಿಯಾಗಲಿದೆ ಎಂದರು.
ಸಂಸ್ಥೆ ಮಾಜಿ ಅಧ್ಯಕ್ಷ, ಕೆಎಲ್ಇ ಸಂಸ್ಥೆ ನಿರ್ದೇಶಕ ಶಂಕ್ರಣ್ಣ ಮುನವಳ್ಳಿ ಮಾತನಾಡಿ, ಬಾಗಲಕೋಟಿಯಲ್ಲಿ ಮೊದಲ ಬಾರಿಗೆ ಆರಂಭವಾದ ಕೆಸಿಸಿಎ ಸಂಸ್ಥೆ ನೂರರ ಸಂಭ್ರಮದ ಸಮೀಪಕ್ಕೆ ಬರುತ್ತಿದೆ. ಸಂಸ್ಥೆ ಕೇವಲ ವ್ಯಾಪಾರ ಉದ್ಯಮಕ್ಕೆ ಮಾತ್ರ ಸೀಮಿತವಾಗದೇ, ಜನಪರ ಯೋಜನೆ ಹಾಗೂ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿಯೂ ಶ್ರಮಿಸುತ್ತಿದೆಯೆಂದರು.
ಸಂಸ್ಥೆಯ ಅಧ್ಯಕ್ಷ ಎಸ್.ಪಿ. ಸಂಶಿಮಠ ಅಧ್ಯಕ್ಷತೆ ವಹಿಸಿದ್ದರು. ಸಂದೀಪ ಬಿಡಸಾರಿಯಾ ಹಾಗೂ ಪ್ರಕಾಶ ಲಿಂಬಯ್ಯಸ್ವಾಮಿಮಠ ಮಾತನಾಡಿದರು. ಅದಕ್ಕೂ ಮುನ್ನ ಸಂಸ್ಥೆ ಮಾಜಿ ಅಧ್ಯಕ್ಷರನ್ನು ಸನ್ಮಾನಿಸಿ, ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಗೌರವ ಕಾರ್ಯದರ್ಶಿ ರವೀಂದ್ರ ಬಳಿಗಾರ, ಜಂಟಿ ಕಾರ್ಯದರ್ಶಿ ಮಹೇಂದ್ರ ಸಿಂಘಿ, ಪ್ರವೀಣ ಅಂಗಡಿ, ಸಿ.ಬಿ. ಪಾಟೀಲ, ಬಿ.ಡಿ. ಲಿಂಗನಗೌಡರ, ಎಂ.ಸಿ. ಹಿರೇಮಠ, ವಸಂತ ಲದ್ವಾ, ರಮೇಶ ಪಾಟೀಲ, ಮಹೇಂದ್ರ ಲದ್ದಡ, ವಿನಯ ಜವಳಿ ಸೇರಿದಂತೆ ನೂರಾರು ಪ್ರತಿಷ್ಠಿತ ಉದ್ಯಮಿಗಳು , ಗಣ್ಯರು ಉಪಸ್ಥಿತರಿದ್ದರು.
ವಾಣಿಜ್ಯ ರತ್ನ ಪ್ರಶಸ್ತಿ ಪಡೆದವರು ವಿವರ
*ಜಯಂತ ಎ. ಹುಂಬರವಾಡಿ*
ಜಂಟಿ ವ್ಯವಸ್ಥಾಪಕ ನಿರ್ದೇಶಕರು, ಅಶೋಕ್ ಐರನ್ ಗ್ರೂಪ್, ಬೆಳಗಾವಿ
ವ್ಯಾಪಾರಿಕ ದೃಷ್ಟಿಕೋನ, ನಾವೀನ್ಯತೆಗೆ ಬದ್ಧತೆ ಮತ್ತು ಸಮಾಜಮುಖಿ ಚಿಂತನೆಯ ಸಮನ್ವಯ ನಾಯಕತ್ವದ ಜಯಂತ ಎ. ಹುಂಬರವಾಡಿ ಇವರು ಇಂದಿನ ಭಾರತೀಯ ತಾಂತ್ರಿಕ ಉದ್ಯಮದಲ್ಲಿ ಒಂದು ಸ್ಪ ಹೆಜ್ಜೆ ಗುರುತನ್ನು ಮೂಡಿಸಿದವರು.
*ಪ್ರಕಾಶ ಬಾಫ್ನಾ*
ವ್ಯವಸ್ಥಾಪಕ ನಿರ್ದೇಶಕರು, ರಾಜಧಾನಿ ಮೋಟಾರ್ಸ್, ಹುಬ್ಬಳ್ಳಿ
ಬಾಫ್ನಾ ಅವರು ದೃಢ ನಿಶ್ಚಯ, ದೀರ್ಘದೃಷ್ಟಿ ಮತ್ತು ಶ್ರಮದ ಮೂಲಕ ಉದ್ಯಮ ಹಾಗೂ ಸಮಾಜದಲ್ಲಿ ಅಪೂರ್ವ ಸಾಧನೆಗಳನ್ನು ಮಾಡಿದ್ದಾರೆ.ಮಧ್ಯಮ ವರ್ಗದ ವ್ಯಾಪಾರಿ ಕುಟುಂಬದಲ್ಲಿ ಜನಿಸಿದ ಅವರು ಚಿಕ್ಕಂದಿನಲ್ಲಿಯೇ ಪರಿಶ್ರಮ, ಪ್ರಾಮಾಣಿಕತೆ ಮತ್ತು ಶಿಸ್ತುಗಳ ಮೌಲ್ಯಗಳನ್ನು ತಮ್ಮ ಜೀವನದ ಭಾಗವನ್ನಾಗಿ ಮಾಡಿಕೊಂಡವರು.
1996ರಲ್ಲಿ ರುನೆಚಾ ಆಟೋಮೊಬೈಲ್ಸ್ ಚಿಕ್ಕ ಮಟ್ಟದ ಚಿಲ್ಲರೆ ಮಳಿಗೆ ಮೂಲಕ ಉದ್ಯಮ ಪ್ರವೇಶ ಮಾಡಿದ ಶ್ರೀ ಪ್ರಕಾಶ ಬಾಫ್ನಾ ಅವರು ಗ್ರಾಹಕರಿಗೆ ಗುಣಮಟ್ಟದ ಉತ್ಪನ್ನ, ವಿಶ್ವಾಸ ಮತ್ತು ಸತತ ಸೇವೆ ಎಂಬ ತತ್ವದೊಂದಿಗೆ ವ್ಯಾಪಾರ ವಿಸ್ತರಣೆಗೆ ಚಾಲನೆ ನೀಡಿದ್ದಾರೆ.
ರಾಜಧಾನಿ ಮೋಟಾರ್ಸ್ ಮತ್ತು ಆಟೋ ಟೆಕ್ ಇಂಡಿಯಾ ಸಂಸ್ಥೆಗಳ ಮೂಲಕ ಆಟೋಮೊಬೈಲ್ ಭಾಗಗಳ ವ್ಯಾಪಾರದ ವ್ಯಾಪ್ತಿಯನ್ನು ದಕ್ಷಿಣ ಭಾರತವ್ಯಾಪಿ ವಿಸ್ತರಿಸಿದರು. 2011ರಲ್ಲಿ ಸ್ಥಾಪಿತವಾದ ರಾಜಧಾನಿ ಮೋಟಾರ್ಸ್ ಪ್ರೈವೇಟ್ ಲಿಮಿಟೆಡ್ ಇಂದಿನ ದಿನದಲ್ಲಿ 100ಕ್ಕೂ ಹೆಚ್ಚು ನೌಕರರೊಂದಿಗೆ, 120ಕೋಟಿ ರೂಪಾಯಿಗೂ ಅಧಿಕ ವಾರ್ಷಿಕ ವಹಿವಾಟು, 7000ಕ್ಕೂ ಹೆಚ್ಚು ಉತ್ಪನ್ನಗಳು ಹಾಗೂ 200 ಕ್ಕೂ ಹೆಚ್ಚು ಸ್ವಂತ ಬ್ರಾಂಡ್ಗಳೊಂದಿಗೆ ದೇಶದಾದ್ಯಂತ 1050ಕ್ಕಿಂತ ಅಧಿಕ ಚಿಲ್ಲರೆ ಗ್ರಾಹಕರನ್ನು ಹೊಂದಿರುವ ಪ್ರಮುಖ ಪೂರೈಕೆದಾರ ಸಂಸ್ಥೆಯಾಗಿದೆ.
*ರವೀಂದ್ರಕುಮಾರ ಬೆಕನಾಳ*
ಮೆ. ಮಹಾಲಕ್ಷ್ಮಿ ಡಿಸ್ಟ್ರಿಬ್ಯೂಟರ್ಸ, ಕಲಬುರಗಿ
ವ್ಯಾಪಾರದ ಪ್ರಾಮಾಣಿಕತೆ, ಶ್ರಮ ಮತ್ತು ದೂರದೃಷ್ಟಿಯ ಮೂಲಕ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ತಮ್ಮದೇ ಆದ ಗುರುತನ್ನು ಮೂಡಿಸಿದವರು ಬೆಕನಾಳ.
*ಶರಣಬಸಪ್ಪ ಸಂಗಪ್ಪ ಗುಡಿಮನಿ*
ಮೆ. ವಿಜಯನಿಧಿ ಅಗ್ರೋ ಇಂಡಸ್ಟ್ರೀಜ್, ಗದಗ
ರೋಣ ತಾಲೂಕಿನ ಸೂಡಿ ಗ್ರಾಮದಿಂದ ಗದಗದ ನಗರ ಜೀವನಕ್ಕೆ ಪ್ರವೇಶಿಸಿ, ಶ್ರದ್ಧೆ, ಶಿಸ್ತಿನ ಜೀವನ ಮೌಲ್ಯಗಳಿಂದ ತಮ್ಮನ್ನು ತಾವು ರೂಪಿಸಿಕೊಂಡವರು ಶರಣಬಸಪ್ಪ ಸಂಗಪ್ಪ ಗುಡಿಮನಿ. ಮೆಸರ್ಸ್ ಎ.ಎಸ್.ಅಡಗತ್ತಿ ಆಂಡ್ ಕಂಪನಿಯಲ್ಲಿ ಶ್ರೀ ವೀರಪ್ಪ ಎ. ಅಡಗತ್ತಿಯವರ ಮಾರ್ಗದರ್ಶನದಲ್ಲಿ ವ್ಯಾಪಾರವನ್ನು ಅರ್ಥಮಾಡಿಕೊಂಡು, ತಮ್ಮದೇ ಆದ ಲಿಂಗರಾಜ್ ಟ್ರೇಡಿಂಗ್ ಕಂಪನಿಯನ್ನು ಸ್ಥಾಪಿಸಿ, ಧೈರ್ಯ, ಮತ್ತು ದೂರ ದೃಷ್ಟಿಯಿಂದ ಹಲವು ನೂತನ ಉದ್ಯಮಗಳನ್ನು ಪ್ರಾರಂಭಿಸಿದರು. ಮೆ. ಲಿಂಗರಾಜ ಅಗೋ ಇಂಡಸ್ಟ್ರೀಜ್, ಮೆ.ವಿಜಯನಿಧಿ ಅಗ್ರಿವೆಂಚ್ ಹಾಗೂ ಮೆ. ವಿಜಯನಿಧಿ ಅಗೋ ಇಂಡಸ್ಟ್ರೀಜ್ ಇವುಗಳಲ್ಲಿ ಪ್ರಮುಖವಾಗಿವೆ.
*ಸಿದ್ದಣ್ಣ ಈಶ್ವರಪ್ಪ ನಾಲ್ವಾಡ*
ಮೆ. ಈಶ್ವರ ಟ್ರೇಡರ್ಸ , ಕೊಪ್ಪಳ
ಶ್ರೇಷ್ಠ ವಾಣಿಜ್ಯೋದ್ಯಮಿ ಹಾಗೂ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿರುವ ಸಿದ್ದಣ್ಣ ಈಶ್ವರಪ್ಪ ನಾಲ್ವಾಡ ಅವರು ಮೆ. ಈಶ್ವರ ಟ್ರೇಡರ್ಸ್, ಜನರಲ್ ಮಚಂಟ್ಸ್, ಜವಾಹರ ರಸ್ತೆ, ಕೊಪ್ಪಳದ ಸ್ಥಾಪಕರಾಗಿದ್ದು, ಅವರು ಹಮ್ಮಿಕೊಂಡ ಆದರ್ಶ ವ್ಯವಹಾರದ ಮೂಲಕ ಇಂದು ಸಾವಿರಾರು ಗ್ರಾಹಕರ ನಂಬಿಕೆಗೆ ಪಾತ್ರರಾಗಿದ್ದಾರೆ.
ಶ್ರೀಮತಿ ದೇವಕಿ ಯೋಗಾನಂದ*
ಮೆ. ದೇವಿ ಸಿಲ್ಕ ಕಾರ್ಪೋರೇಶನ್, ಹುಬ್ಬಳ್ಳಿ
ಶ್ರೀಮತಿ ದೇವಕಿ ಯೋಗಾನಂದ ಅವರು ಇಂಜಿನಿಯರಿಂಗ್ ಹಾಗೂ ಎಂ.ಬಿ.ಎ. ಪದವಿ ಪೂರೈಸಿ, ಕಂಪ್ಯೂಟರ್ ಅಪ್ಲಿಕೇಶನ್ನಲ್ಲಿ ಪೋಸ್ಟ ಗ್ರ್ಯಾಜುಯೇಶನ್ ಡಿಪ್ಲೊಮಾ ಪಡೆದಿದ್ದು, ತಂತ್ರಜ್ಞಾನ ಮತ್ತು ವ್ಯವಸ್ಥಾಪನೆ ಎರಡರಲ್ಲಿಯೂ ಪ್ರಾಬಲ್ಯ ಹೊಂದಿದ್ದಾರೆ.
1993ರಲ್ಲಿ ರಾಮನ್ ಕಂಪ್ಯೂಟರ್ಸ್ನ್ನು ಸ್ಥಾಪಿಸುವ ಮೂಲಕ ಉದ್ಯಮ ಜಗತ್ತಿಗೆ ಪಾದಾರ್ಪಣೆ ಮಾಡಿ, 2000ರಲ್ಲಿ ಇದೇ ಸಂಸ್ಥೆಯನ್ನು ಆಸ್ಟ್ರಿಕ್ಸ ಕಂಪ್ಯೂಟರ್ಸ್ ಎಂಬ ನಾಮಧೇಯದೊಂದಿಗೆ ಕಂಪ್ಯೂಟರ್ ಮಾರಾಟ, ಸೇವೆ, ಡೇಟಾ ಪ್ರೊಸೆಸಿಂಗ್, ಇವೆಂಟ್ ಮ್ಯಾನೇಜ್ಮೆಂಟ್ ಮತ್ತು ಆಡಿಯೋ-ವಿಜುವಲ್ ಉಪಕರಣಗಳ ಕ್ಷೇತ್ರಗಳಲ್ಲಿ ತಮ್ಮ ಹೆಜ್ಜೆ ಗುರುತು ಮೂಡಿಸಿರುವರು. 2005ರಲ್ಲಿ ಆಸ್ಟ್ರಿಕ್ಸ್ ಬಿಪಿಓ ಮತ್ತು ಕಾಲ್ ಸೆಂಟರ್ ತರಬೇತಿ ಕೇಂದ್ರವನ್ನು ಸ್ಥಾಪಿಸಿ. ಯುವಜನತೆಗೆ ತಂತ್ರಜ್ಞಾನ ಕ್ಷೇತ್ರದಲ್ಲಿ ತರಬೇತಿ ನೀಡುತ್ತಿದ್ದಾರೆ.
ಮಹಿಳಾ ಸಬಲೀಕರಣ ಮತ್ತು ಸಾಮಾಜಿಕ ಸೇವೆ:
ಕೇವಲ ಉದ್ಯಮಿ ಮಾತ್ರವಲ್ಲದೆ, ಮಹಿಳಾ ಸಬಲೀಕರಣದ ಹರಿಕಾರಿಣಿಯೂ ಹೌದು. ವೇಕಾಸ, ಸೂರ್ಯ ಕಿರಣ ವೆಲ್ಫೇರ್ ಅಸೋಸಿಯೇಶನ್, ಕರ್ನಾಟಕ ರಾಜ್ಯ ಸ್ತ್ರೀ ಶಕ್ತಿ ಒಕ್ಕೂಟ ಸೇರಿದಂತೆ ಹಲವಾರು ಸರಕಾರೇತರ ಸಂಘ ಸಂಸ್ಥೆಗಳ ಮೂಲಕ ಮಹಿಳೆಯರ ಉದ್ಯಮೋತ್ಸಾಹ ವರ್ಧನೆ, ಕರಕುಶಲ ಅಭಿವೃದ್ಧಿ, ಸ್ವಸಹಾಯ ಗುಂಪುಗಳ ಪ್ರೋತ್ಸಾಹ ಮತ್ತು ನಿರ್ಗತಿಕ ಮಹಿಳೆಯರ ಪುನರ್ವಸತಿ ಕಾರ್ಯಗಳಲ್ಲಿ ಶ್ರಮಿಸಿದ್ದಾರೆ.
2019ರಲ್ಲಿ ದೇವಿ ಸಿಲ್ಕ್ ಕಾರ್ಪೋರೇಶನ್ನ್ನು ಸ್ಥಾಪಿಸಿ ರೇ ರೀಲಿಂಗ್, ರೀ-ರೀಲಿಂಗ್, ಟ್ವಿಸ್ಟಿಂಗ್ ಮತ್ತು ರ್ಯಾಪ್ ಮೇಕಿಂಗ್ ಕ್ಷೇತ್ರದಲ್ಲಿ ಉತ್ಪಾದನಾ ಘಟಕ ಆರಂಭಿಸಿರುವರು. ಈ ಘಟಕದಲ್ಲಿ ಸುಮಾರು 400 ರೀಲಿಂಗ್ ಯಂತ್ರಗಳಿವೆ. ಇದು ರಾಜ್ಯದ ಸಾವಿರಾರು ಸ್ತ್ರೀಯರಿಗೆ ಉದ್ಯೋಗ ಅವಕಾಶಗಳನ್ನು ಕಲ್ಪಿಸುತ್ತಿದೆ.
ಲಾಯನ್ಸ್ ಕ್ಲಬ್ ಅಧ್ಯಕ್ಷರಾಗಿ, ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ಸ್ ಸದಸ್ಯರಾಗಿ, ಜೊತೆಗೆ ಹಲವಾರು ರಾಜಕೀಯ ಹುದ್ದೆಗಳನ್ನು ನಿರ್ವಹಿಸುತ್ತಿದ್ದಾರೆ.