ಹುಬ್ಬಳ್ಳಿ : ಡಿ. 27ರಿಂದ ಮೂರು ದಿನಗಳ ಕಾಲ ಶ್ರೀ ಅಖಿಲ ಹವ್ಯಕ ಮಹಾಸಭಾ ಆಶ್ರಯದಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ನ ಭೂತೆ .. ಮಾದರಿಯಲ್ಲಿ ತೃತೀಯ ವಿಶ್ವ ಹವ್ಯಕ ಸಮ್ಮೇಳನ ನಡೆಯಲಿದ್ದು ಈ ಐತಿಹಾಸಿಕ ಸಮಾರಂಭದ ಪ್ರಧಾನ ಸಮಿತಿಯ ಹಿರಿಯ ಉಪಾಧ್ಯಕ್ಷರಾಗಿ ಹೊನ್ನಾವರ ತಾಲೂಕು ಕೆಕ್ಕಾರು ಮೂಲದ ಉದ್ಯಮಿ, ಪ್ರಗತಿಪರ ಕೃಷಿಕರೂ ಆಗಿರುವ ಶ್ರೀಕಾಂತ ಭಟ್ಟ ನೇಮಕಗೊಂಡಿದ್ದಾರೆ.
ಈ ನೇಮಕವನ್ನು ಹವ್ಯಕ ಮಹಾಸಭಾ ಅಧ್ಯಕ್ಷರಾದ ಖ್ಯಾತ ವೈದ್ಯ ಡಾ.ಗಿರಿಧರ ಕಜೆ ಪ್ರಕಟಿಸಿದ್ದಾರೆ.
ಹುಬ್ಬಳ್ಳಿ, ಶಿರಸಿ, ಬೆಂಗಳೂರು ಸಹಿತ ವಿವಿಧ ಉದ್ಯಮಗಳಲ್ಲಿ ತೊಡಗಿಸಿಕೊಂಡಿದ್ದಲ್ಲದೆ ಸಮಾಜ ಮುಖಿ ಹಾಗೂ ರಚನಾತ್ಮಕ ಕೆಲಸಗಳಲ್ಲಿ ಮುಂಚೂಣಿಯಲ್ಲಿರುವ ನ್ಯಾಯವಾದಿಗಳೂ ಆಗಿರುವ ಶ್ರೀಕಾಂತ ಭಟ್ಟ ಸಮಾಜದ ಬಗೆಗೆ ಅಪಾರ ಕಳಕಳಿಯುಳ್ಳವರು. ಅವರ ಕಾರ್ಯ ವೈಖರಿ ಗುರುತಿಸಿ ಹವ್ಯಕ ಮಹಾಸಭಾದವರು ಐತಿಹಾಸಿಕ ಸಮ್ಮೇಳನದ ಹಿರಿಯ ಉಪಾಧ್ಯಕ್ಷರನ್ನಾಗಿ ನಿಯುಕ್ತಿ ಮಾಡಿದ್ದು ಈಗಾಗಲೇ ಅವರು ಸಮ್ಮೇಳನದ ಯಶಸ್ಸಿಗಾಗಿ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಅಖಿಲ ಹವ್ಯಕ ಮಹಾಸಭಾ ತನ್ನ 81ವಸಂತಗಳನ್ನು ಪೂರೈಸಿ ಸಹಸ್ರಚಂದ್ರ ದರ್ಶನದ ಸಂಭ್ರಮೋತ್ಸವದ ಹೊಸ್ತಿಲಲ್ಲಿರುವ ಹಿನ್ನೆಲೆಯಲ್ಲಿ ಸಂಸ್ಥೆಯು ವಿಶ್ವಮಟ್ಟದಲ್ಲಿ ತೆರೆದಿಡುವ ಮತ್ತು ಸಂಘಟನೆಯನ್ನು ಮತ್ತಷ್ಟು ಬಲಗೊಳಿಸುವ ನಿಟ್ಟಿನಲ್ಲಿ ಸಮ್ಮೇಳನ ಹಮ್ಮಿಕೊಳ್ಳಲಾಗಿದ್ದು ಅಲ್ಲದೇ ಸ್ವತಃ ಅಧ್ಯಕ್ಷರಾದ ಕಜೆಯವರು ರಾಜ್ಯಾದ್ಯಂತ ಪೂರ್ವಭಾವಿ ಸಭೆಗಳನ್ನು ನಡೆಸಿ ಆಹ್ವಾನ ನೀಡಿದ್ದಾರೆ.
ಸಮ್ಮೇಳನದ ವೇಳೆ ಹವ್ಯಕ ಸಾಧಕ ರತ್ನ, ಹವ್ಯಕ ಕೃಷಿ ರತ್ನ, ಹವ್ಯಕ ವೇದ ರತ್ನ, ಹವ್ಯಕ ದೇಶ ರತ್ನ, ಹವ್ಯಕ ಶಿಕ್ಷಕ ರತ್ನ, ಹವ್ಯಕ ವಿದ್ಯಾ ರತ್ನ, ಹವ್ಯಕ ಸ್ಪೂರ್ತಿ ರತ್ನ ಹೀಗೆ ಏಳು ವಿಭಾಗಗಳಲ್ಲಿ 567ಸಾಧಕರಿಗೆ ಸನ್ಮಾನ ಸಹ ನಡೆಯಲಿದೆ.