*ಧಾರವಾಡದಲ್ಲಿಯೇ ಐದು ಸಾವಿರಕ್ಕೂ ಹೆಚ್ಚು ಮತದಾರರು/ ಜಾತಿ ಲೆಕ್ಕಾಚಾರವೇ ನಿರ್ಣಾಯಕ/ ನಾಳೆ ಮತದಾನ – ನಾಡಿದ್ದು ಫಲಿತಾಂಶ*
ಧಾರವಾಡ : ಶತಮಾನದ ಹಿರಿಮೆಯ ಕನ್ನಡದ ಗುಡಿ ಧಾರವಾಡ ವಿದ್ಯಾವರ್ಧಕ ಸಂಘದ ನೂತನ ಆಡಳಿತ ಮಂಡಳಿ ಆಯ್ಕೆಗೆ ನಾಳೆ ಮತದಾನ ನಡೆಯಲಿದ್ದು, ಹಿಂದೆಂದಿಗಿಂತಲೂ ಹೆಚ್ಚು ರೋಚಕ ಹಣಾಹಣಿಯ ಅಖಾಡವಾಗಿ ಮಾರ್ಪಟ್ಟಿದೆ.
ಡಾ. ಪಾಟೀಲ್ ಪುಟ್ಟಪ್ಪನವರ ನಂತರ ಅಧಿಕಾರಕ್ಕೆ ಏರಿರುವ ಮಾಜಿ ಶಾಸಕ ಚಂದ್ರಕಾಂತ್ ಬೆಲ್ಲದ, ಶಂಕರ್ ಹಲಗತ್ತಿ ಬಣ ಮತ್ತು ಮಾಜಿ ವಿಧಾನ ಪರಿಷತ್ ಸದಸ್ಯ ಮೋಹನ್ ಲಿಂಬಿಕಾಯಿ, ಪ್ರಕಾಶ್ ಉಡಕೇರಿ ನೇತೃತ್ವದ ಬಣಗಳ ನಡುವೆ ಇನ್ನಿಲ್ಲದ ಪೈಪೋಟಿ ಇದೆ.
ಬೆಲ್ಲದ ಅವರು ಸದ್ಯ ಸಕ್ರೀಯ ರಾಜಕೀಯದಿಂದ ದೂರ ಇದ್ದರೂ ಮಗ ಅರವಿಂದ್ ಬೆಲ್ಲದ ಬಿಜೆಪಿ ಶಾಸಕರಾಗಿದ್ದು, ಲಿಂಬಿಕಾಯಿ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷರಾಗಿ ರುವುದರಿಂದ ಕೈ, ಕಮಲ ರಾಜಕೀಯ ಕೆಸರೆರಚಾಟದ ಅಂಗಳವಾಗಿ ಪರಿಣಮಿಸಿದೆ. ಸಾಹಿತಿ ಹನುಮಾಕ್ಷಿ ಗೋಗಿ ಸಹಿತ ಕೆಲವರು ರಾಜಕಾರಣಿಗಳನ್ನು ವಿದ್ಯಾವರ್ಧಕ ಸಂಘದಿಂದ ದೂರವಿಡಿ ಎಂಬ ಮನವಿ ಮಾಡುತ್ತಿದ್ದಾರೆ.ಬೆಲ್ಲದ ಅವರನ್ನು ಕನಸಿನಲ್ಲೂ ದ್ವೇಷಿಸುವ ಗುರುರಾಜ್ ಹುಣಸಿಮರದ ಅಂತಿಮ ಕ್ಷಣದಲ್ಲಿ ಸ್ಪರ್ಧೆ ಮಾಡಿಲ್ಲವಾದರೂ ಅವರೂ ರಾಜಕಾರಣಿಗಳ ಆಯ್ಕೆ ಬೇಡ ಎನ್ನುತ್ತಾರೆ.
ಸುಮಾರು ಏಳು ಸಾವಿರ ಅರ್ಹ ಮತದಾರರು ಈ ಚುನಾವಣೆಯಲ್ಲಿ ಮತ ಚಲಾಯಿಸಬಹುದಾಗಿದೆ. ಪೇಡೆ ನಗರಿಯವರೇ ಐದು ಸಾವಿರಕ್ಕೂ ಹೆಚ್ಚು. ಹುಬ್ಬಳ್ಳಿಯ ಐದು ನೂರು ಹಾಗೂ ಉಳಿದವರು ಬೈಲಹೊಂಗಲ , ಕಿತ್ತೂರು ಉಳಿದೆಡೆಯ ಮತದಾರರು ಇದ್ದಾರೆ.ಬೆಲ್ಲದ ಬಣ ಕಳೆದ ಅವಧಿಯ ಸಾಧನೆ, ಇದೊಂದು ಅವಧಿಯ ಮಂತ್ರ ಜಪಿಸುತ್ತಿದ್ದು, ಲಿಂಬಿಕಾಯಿ ಬಣ ಬದಲಾವಣೆ, ಇನ್ನಷ್ಟು ಅಭಿವೃದ್ಧಿಯ ಭರವಸೆಯೊಂದಿಗೆ ಮತ ಯಾಚಿಸುತ್ತಿದೆ.
ಅಂತಿಮ ಹಂತದಲ್ಲಿ ಈ ಚುನಾವಣೆ ಸಾಹಿತ್ಯ ವಲಯ, ಕನ್ನಡ, ಸಂಘಟನೆ ಎಲ್ಲವೂ ಗೌಣವಾಗಿ ಜಾತಿ ಅಖಾಡವಾಗಿ ಪರಿವರ್ತನೆಯಾಗಲಿದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಮತದಾರರಲ್ಲಿ ಬಹುಸಂಖ್ಯಾತ ಲಿಂಗಾಯತ ಮತದಾರರು ಅಧಿಕ ಸಂಖ್ಯೆಯಲ್ಲಿದ್ದು, ಎರಡನೇ ಸ್ಥಾನದಲ್ಲಿ ಬ್ರಾಹ್ಮಣ ತದನಂತರ ಅಹಿಂದ ಮತದಾರರು ಇದ್ದಾರೆ. ಇವೆಲ್ಲಕ್ಕಿಂತ ಒಳ ಜಾತಿ ಲೆಕ್ಕಾಚಾರ ಸಹ ಗೆಲುವಿನ ಓಟ ನಿರ್ಧರಿಸಲಿದೆ.
ಅಧ್ಯಕ್ಷ ಸ್ಥಾನಕ್ಕೆ ನಾಲ್ಕು ಜನರ ಪೈಪೋಟಿಯಿದ್ದರೆ ಮಹತ್ವದ ಕಾರ್ಯದರ್ಶಿ ಹುದ್ದೆಗೆ ಹಲಗತ್ತಿ ಮತ್ತು ಉಡಕೇರಿ ಮಧ್ಯೆ ನೇರ ಹಣಾಹಣಿಯಿದೆ. ಉಪಾಧ್ಯಕ್ಷ, ಕೋಶಾಧ್ಯಕ್ಷ ಕುರ್ಚಿಗೆ ತಲಾ ಮೂವರು, ಕಾರ್ಯಾಧ್ಯಕ್ಷ ಸ್ಥಾನಕ್ಕೆ ತಲಾ ಇಬ್ಬರು, ಕಾರ್ಯಕಾರಿಣಿ ಸಾಮಾನ್ಯ 7 ಹುದ್ದೆಗೆ ಇಪ್ಪತ್ತು ಮಂದಿ, ಮಹಿಳಾ ಮೀಸಲಾತಿಗೆ(1) ಮೂವರು, ಎಸ್ ಸಿ(1) ಮೀಸಲಾತಿಗೆ ಐವರು ಕಣದಲ್ಲಿ ಉಳಿದಿದ್ದಾರೆ. ನಾಳೆ ಮತದಾನ ನಡೆದು ನಾಡಿದ್ದು ಮಾತು ಎಣಿಕೆ ನಡೆಯಲಿದೆ.
ವಯಸ್ಸಿನ ವಿಚಾರ ಯಾರೂ ಗಂಭೀರವಾಗಿ ಪರಿಗಣಿಸಿಲ್ಲ. ಮತದಾರರು ನಮ್ಮ ಗುಂಪಿಗೆ ಬೆಂಬಲಿಸುವರು.
*ಚಂದ್ರಕಾಂತ್ ಬೆಲ್ಲದ*
ಪಾಟೀಲ್ ಪುಟ್ಟಪ್ಪನವರ ಕನಸು ನನಸು ಮಾಡುವುದೇ ನಮ್ಮ ಗುರಿ. ಅಲ್ಲದೇ ಸಂಘವನ್ನು ಗತವೈಭವಕ್ಕ ತಿರುವು ಯತ್ನಕ್ಕೆ ಎಲ್ಲರೂ ಬೆಂಬಲ ನೀಡುವ ವಿಶ್ವಾಸವಿದೆ.
*ಮೋಹನ್ ಲಿಂಬಿಕಾಯಿ*