*ಅಲ್ಪಸಂಖ್ಯಾತರಿಗೋ, ಬಹು ಸಂಖ್ಯಾತರಿಗೋ ಬಗೆಹರಿಯದ ಕಾಂಗ್ರೆಸ್ ಕಗ್ಗಂಟು /ಬಿಜೆಪಿಗೂ ತಟ್ಟುತ್ತಿದೆ ಬಂಡಾಯದ ಬಿಸಿ / ದುಂಡಿಗೌಡ್ರ ನಿರ್ಧಾರದ ಮೇಲೆ ಭರತನ ಭವಿಷ್ಯ*
ಹುಬ್ಬಳ್ಳಿ : ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ತೆರವಾದ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ನಾಮಪತ್ರ ಸಲ್ಲಿಸಲು ದಿ. 25 ಕೊನೆಯ ದಿನವಾಗಿದ್ದು ಬಿಜೆಪಿ ಮತ್ತೆ ಬೊಮ್ಮಾಯಿ ಪುತ್ರ ಭರತನಿಗೆ ಮಣೆ ಹಾಕಿದ್ದು ಕ್ಷೇತ್ರದಾದ್ಯಂತ ಇಷ್ಟು ದಿನ ಅಪ್ಪನ ಪಲ್ಲಕ್ಕಿ ಹೊತ್ತವಿ ಇನ್ನು ಮಗನ ಪಲ್ಲಕ್ಕಿ ಹೊರಬೇಕಾದೀತು ಎಂದು ವ್ಯಾಪಕ ಆಕ್ರೋಶ ಕಮಲ ಪಾಳೆಯದಲ್ಲಿಯೇ ಕೇಳಿ ಬರುತ್ತಿದ್ದು ಆದರೆ ಕಾಂಗ್ರೆಸ್ ಅಭ್ಯರ್ಥಿ ಯಾರೆಂಬುದು ನಿಗೂಢ ರಹಸ್ಯವಾಗಿದೆ.
ಇಂದು ಸಂಜೆಯೊಳಗೆ ಕಾಂಗ್ರೆಸ್ ಅಭ್ಯರ್ಥಿಗಳ ಅಧಿಕೃತ ಪಟ್ಟಿ ಬಿಡುಗಡೆಯಾಗಿಲ್ಲವಾದರೂ ನಕಲಿ ಪಟ್ಟಿಯೊಂದು ಹರಿದಾಡುತ್ತಿದ್ದು ಅದರಲ್ಲಿ ಚನ್ನಪಟ್ಟಣಕ್ಕೆ ಸಿ.ಪಿ.ಯೋಗೇಶ್ವರ, ಸಂಡೂರಿಗೆ ಅನ್ನಪೂರ್ಣ ತುಕಾರಾಂ, ಹಾಗೂ ಶಿಗ್ಗಾಂವಿ ಕ್ಷೇತ್ರಕ್ಕೆ ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಪುತ್ರಿ ವೈಶಾಲಿ ಕುಲಕರ್ಣಿ ಎಂಬ ಹೆಸರುಗಳಿದ್ದು ಇದು ನಕಲಿ ಇನ್ನೂ ಬಿಡುಗಡೆಯೇ ಆಗಿಲ್ಲ ಎಂದು ಹಿರಿಯ ಮುಖಂಡರೇ ಖಚಿತ ಪಡಿಸಿದ್ದಾರೆ.
ಮಧ್ಯಾಹ್ನದ ವೇಳೆಗೆ ಮಾಜಿ ಶಾಸಕ ಅಜ್ಜಂ ಪೀರ ಖಾದ್ರಿ ಹೆಸರು ಅಂತಿಮಗೊಂಡಿದೆ ಎಂಬ ಸುದ್ದಿ ಕೇಳಿ ಬಂದ ಹಿನ್ನೆಲೆಯಲ್ಲಿ ಇನ್ನೋರ್ವ ಆಕಾಂಕ್ಷಿ ಯಾಸೀರ ಖಾನ ಪಠಾಣ ಬೆಂಬಲಿಗರು ಪ್ರತಿಭಟನೆಯನ್ನು ನಡೆಸಿದ್ದು ತದನಂತರ ವೈಶಾಲಿ ಕುಲಕರ್ಣಿ ಹೆಸರು ಕೇಳಿ ಬಂದಿದೆ. ಮತ್ತೆ ಸಂಜೆ ವೇಳೆಗೆ ಎಐಸಿಸಿ ಯಾಸಿರ ಪಠಾಣ ಹೆಸರು ಅಂತಿಮಗೊಳಿಸಿದೆ ಎಂಬ ಗುಸು ಗುಸು ದಟ್ಟವಾಗಿದೆ. ಅಧಿಕೃತ ಪಟ್ಟಿ ಹೊರ ಬಿದ್ದ ನಂತರವೇ ಭರತನಿಗೆ ಸೆಡ್ಡು ಹೊಡೆಯುವವರಾರು ಎಂಬುದು ಖಚಿತವಾಗಲಿದೆ.
ದಿಲ್ಲಿ ಮೂಲಗಳ ಪ್ರಕಾರ ಈ ಬಾರಿ ಪಂಚಮಸಾಲಿ ಸಮುದಾಯಕ್ಕೆ ನೀಡಿದಲ್ಲಿ ಅನುಕೂಲ ಎಂಬ ವರದಿ ಬಂದಿದ್ದು ಆ ಹಿನ್ನೆಲೆಯಲ್ಲಿ ವೈಶಾಲಿ ಕುಲಕರ್ಣಿ, ಸೋಮಣ್ಣ ಬೇವಿನಮರದ , ಅಲ್ಲದೇ ರಾಜು ಕುನ್ನೂರ ಮೂವರ ಹೆಸರುಗಳು ಚಾಲ್ತಿಯಲ್ಲಿವೆ ಎನ್ನಲಾಗುತ್ತಿದೆ. ಇನ್ನೊಂದೆಡೆ ಅಲ್ಪಸಂಖ್ಯಾತ ಸಮುದಾಯಕ್ಕೆ ಟಿಕೆಟ್ ಬೇಕು ಎಂಬ ಪಟ್ಟು ಅಧಿಕವಾಗಿದ್ದು, ಆದರೆ ಖಾದ್ರಿ ಮತ್ತು ಪಠಾಣ ಫೈಟ್ ವರಿಷ್ಠರಿಗೂ ತಲೆ ನೋವಾಗಿದೆ. ಹಾನಗಲ್ ಶಾಸಕ ಮಾನೆ ತಂಡ ಪಠಾಣ ಪರ ನಿಂತಿದೆ ಎನ್ನಲಾಗಿದೆ. ಇನ್ನೊಂದೆಡೆ ವಿನೋದ ಅಸೂಟಿ ಹೆಸರು ಕೇಳಿ ಬರಲಾರಂಬಿಸಿದೆ.
ರಾತ್ರಿಯೊಳಗೆ ಕೈ ಟಿಕೆಟ್ ಅಂತಿಮಗೊಳ್ಳುವ ಸಾಧ್ಯತೆಗಳಿವೆ.
ಇನ್ನೊಂದೆಡೆ ಬಸವರಾಜ ಬೊಮ್ಮಾಯಿ ಮಾತಿಗೆ ತಪ್ಪಿದ್ದಾರೆಂದು ಶ್ರೀಕಾಂತ ದುಂಡಿಗೌಡ್ರ ಹಾಗೂ ಅವರ ಬೆಂಬಲಿಗರು ಬೊಮ್ಮಾಯಿ ವಿರುದ್ದ ತೊಡೆ ತಟ್ಟಲು ಮುಂದಾಗಿದ್ದು ನಾಳೆ ಸಾಯಂಕಾಲ 5 ಗಂಟೆಗೆ ಮುಂದಿನ ನಿರ್ಧಾರ ಪ್ರಕಟಿಸಲಿದ್ದಾರೆ.
*ದಿನದ ಮಹತ್ವದ ಸುದ್ದಿ*
1) *ಬಿಜೆಪಿ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಸಿ.ಪಿ.ಯೋಗೇಶ್ವರ ಇಂದು ಅಧಿಕೃತವಾಗಿ ಕಾಂಗ್ರೆಸ್ಗೆ ಮರಳುವ ಮೂಲಕ ಘರ್ ವಾಪ್ಸಿಯಾಗಿದ್ದು ನಾಳೆ ಅವರೇ ಕೈ ಹುರಿಯಾಳಾಗಿ ನಾಮಪತ್ರ ಸಲ್ಲಿಸಲಿದ್ದಾರೆ*.
2) *ಹಳೇ ಹುಬ್ಬಳ್ಳಿ ಗಲಭೆ ಪ್ರಕರಣ ವಾಪಸ್ ಪಡೆದ ಸರ್ಕಾರದ ಕ್ರಮ ಖಂಡಿಸಿ ಇಂದು ವಿಶ್ವ ಹಿಂದೂ ಪರಿಷತ್ ಮುಖಂಡರು ಅಧ್ಯಕ್ಷ ಸಂಜು ಬಡಸ್ಕರ ನೇತ್ರತ್ವದಲ್ಲಿ ಹಳೇ ಹುಬ್ಬಳ್ಳಿ ಠಾಣೆ ಎದುರು ಬೃಹತ್ ಪ್ರತಿಭಟನೆ ನಡೆಸಿದರು.*
*ಜಿಂಬಾವ್ವೆ ತಂಡದಿಂದ ದಾಖಲೆ* : ಆಫ್ರಿಕಾ ಖಂಡಗಳ ವಿಶ್ವಕಪ್ ಟಿ20 ಅರ್ಹತಾ ಸುತ್ತಿನ ಪಂದ್ಯದಲ್ಲಿಂದು ಜಿಂಬಾವ್ವೆ ಜಾಂಬಿಯಾ ವಿರುದ್ಧ ನಿಗದಿತ 20 ಓವರುಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 344 ರನ್ ಗಳಿಸಿ ಅತಿಹೆಚ್ಚು ರನ್ನು ಗಳಿಸಿದ ತಂಡ ಹಿರಿಮೆಗೆ ಪಾತ್ರವಾಗಿದೆ. ಅಲ್ಲದೇ ಜಾಂಬಿಯಾವನ್ನು 54ಕ್ಕೆ ಆಲೌಟ್ ಮಾಡಿ 290ರನ್ನುಗಳ ಗೆಲುವು ದಾಖಲಿಸಿದೆ. ಜಿಂಬಾವ್ವೆ ನಾಯಕ ಸಿಕಂದರ ರಾಜಾ 43 ಎಸೆತಗಳಲ್ಲಿ ಅಜೇಯ 133 ರನ್ನುಗಳ ಸಿಡಿಲಬ್ಬರದ ಪ್ರದರ್ಶನ ನೀಡಿದ್ದಾರೆ.ಇದುವರೆಗೆ ನೇಪಾಳದ ಹೆಸರಿನಲ್ಲಿದ್ದ ದಾಖಲೆ ದ್ವಿತಿಯ ಸ್ಥಾನಕ್ಕೆ ಕುಸಿದಿದೆ.