*ನಾವೇ ಸಮೀಕ್ಷೆ ಮಾಡಿ ಸರ್ಕಾರಕ್ಕೆ ಜೂ.8ಕ್ಕೆ ವರದಿ ಸಲ್ಲಿಕೆ : ಗುಣಧರನಂದಿ ಮಹಾರಾಜರು*
ಹುಬ್ಬಳ್ಳಿ : ತಾವೂ ಸೇರಿದಂತೆ ಜೈನ ಸಮಾಜದ ವಿವಿಧ ಸ್ವಾಮೀಜಿಗಳು ರಾಜ್ಯದಲ್ಲಿರುವ ಜೈನರ ಜನಸಂಖ್ಯೆಯ ನಿಖರವಾದ ವಿವರ ಕಲೆ ಹಾಕಲು ಇಂದಿನಿಂದ ರಾಜ್ಯಾದ್ಯಾಂತ ಪಾದಯಾತ್ರೆ ಮಾಡಲಿದ್ದೇವೆ ಎಂದು ವರೂರು ನವಗ್ರಹ ತೀರ್ಥಕ್ಷೇತ್ರದ ಗುಣಧರನಂದಿ ಮಹಾರಾಜರು ಹೇಳಿದರು.
ಇಂದು ವರೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು
ನಾವೇ ಸಮೀಕ್ಷೆ ಮಾಡಿ, ಜೂನ್ 8 ರಂದು ಸರ್ಕಾರಕ್ಕೆ ವರದಿ ಸಲ್ಲಿಸುವೆವು. ನಂತರ ಸಮಾಜದವರ ಸಭೆ ನಡೆಸಿ ಮುಂದಿನ ಹೋರಾಟದ ನಿರ್ಧಾರ ಮಾಡಲಾಗುವುದು. ನಮ್ಮ ವರದಿಯನ್ನು ಸರ್ಕಾರ ಒಪ್ಪದಿದ್ದರೆ ರಾಜ್ಯಪಾಲರು, ರಾಷ್ಟ್ರಪತಿಯವರ ಮೊರೆ ಹೋಗುತ್ತೇವೆ. ಅವಶ್ಯಕತೆ ಬಿದ್ದರೆ ಕಾನೂನು ಹೋರಾಟಕ್ಕೂ ಮುಂದಾಗುವುದಾಗಿ ಹೇಳಿದರು.
ಜಾತಿಗಣತಿ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾದಂತೆ ರಾಜ್ಯದಲ್ಲಿ 1.62 ಲಕ್ಷ ಮಂದಿ ಜೈನರಿದ್ದಾರೆ. ಆದರೆ, ಸಚಿವ ಜಮೀರ್ ಅಹ್ಮದ್ ಅವರು ವಿಧಾನಸಭೆಯಲ್ಲಿ ಮಾತನಾಡುವಾಗ ಜೈನರ ಜನಸಂಖ್ಯೆ 20 ಲಕ್ಷವಿದೆ ಎಂಬುದಾಗಿ ಹೇಳಿದ್ದಾರೆಂದರು.
ಜಾತಿಗಣತಿ ವೇಳೆ ನಮ್ಮನ್ನೂ ಸೇರಿದಂತೆ ಸಮಾಜದ ಬಹುತೇಕರ ಸಮೀಕ್ಷೆ ಮಾಡಿಲ್ಲ. ಜಾತಿಗಣತಿ ವರದಿಯಲ್ಲಿ ತೋರಿಸಿರುವ ಜೈನ ಸಮಾಜದ ಜನಸಂಖ್ಯೆ ಸುಳ್ಳಾಗಿದೆ. ಇದರಿಂದ ಸಮಾಜಕ್ಕೆ ಬೇಸರವಾಗಿದೆ. ಈಗ ಮಾಧ್ಯಮದಲ್ಲಿ ಪ್ರಕಟವಾದ ಜಾತಿಗಣತಿ ಕುರಿತ ವರದಿ ಅಧಿಕೃತವಾಗಿದ್ದಲ್ಲಿ, ಅದಕ್ಕೆ ನಮ್ಮ ವಿರೋಧವಿದೆಯೆಂದರು.
ಬೆಳಗಾವಿಯ ಚಿಕ್ಕೊಡಿಯಲ್ಲೇ ಸುಮಾರು 1 ಲಕ್ಷದಷ್ಟು ಜೈನ ಸಮಾಜದವರಿದ್ದಾರೆ. ಸರ್ಕಾರ ಇದನ್ನು ಪರಿಗಣಿಸಿ, ಮತ್ತೆ ಹೊಸದಾಗಿ ಗಣತಿ ನಡೆಸಬೇಕು.ನಿಜವಾದ ಜನಸಂಖ್ಯೆ ತಿಳಿಸಬೇಕು ಎಂದು ಆಗ್ರಹಿಸಿದರು.
ಜೂನ್ 8 ರಂದು ಬೆಳಗಾವಿ ಜಿಲ್ಲೆ ಅಥಣಿಯ ಐನಾಪುರದಲ್ಲಿ ಬೃಹತ್ ಸಭೆ ನಡೆಸಲು ಉದ್ದೇಶಿಸಲಾಗಿದೆ. ಪದೇ ಪದೇ ಸಮಾಜಕ್ಕಾಗುತ್ತಿರುವ ಅನ್ಯಾಯದ ವಿರುದ್ಧ ಹೋರಾಟದ ರೂಪುರೇಷೆ ಅಲ್ಲಿಯೇ ರೂಪಿಸಲಾಗುವುದು ಎಂದರು.